ತಾರಾನಾಥ ಶೆಟ್ಟಿ

Update: 2017-12-25 14:18 GMT

ಕುಂದಾಪುರ, ಡಿ.25: ಉಡುಪಿ ಜಿಪಂನಲ್ಲಿ ಸಿದ್ಧಾಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ ಅವರು ಅನಾರೋಗ್ಯದಿಂದ ಹಾಲಾಡಿಯ ನರ್ಸಿಂಗ್ ಹೋಮ್‌ನಲ್ಲಿ ರವಿವಾರ ರಾತ್ರಿ ನಿಧನರಾಗಿದ್ದಾರೆ. 56 ವರ್ಷ ಪ್ರಾಯದ ತಾರಾನಾಥ ಶೆಟ್ಟಿ ಅವರು ಅವಿವಾಹಿತರಾಗಿದ್ದರು.

ಕಳೆದ ಕೆಲವು ವರ್ಷಗಳಿಂದ ಯಕೃತ್ (ಲೀವರ್) ಸಮಸ್ಯೆಯಿಂದ ಬಳಲುತಿದ್ದ ಅವರು, ಅನಾರೋಗ್ಯದ ನಡುವೆಯೂ ಸಾಮಾಜಿಕ, ಧಾರ್ಮಿಕ, ಯಕ್ಷಗಾನ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.

ತಾರಣ್ಣ ಎಂದೇ ಸ್ಥಳೀಯವಾಗಿ ಚಿರಪರಿಚಿತರಾಗಿದ್ದ ಇವರು, ಹಾಲಾಡಿ ಯಕ್ಷಗಾನ ಮೇಳದ ಸಂಚಾಲಕರಾಗಿದ್ದರು. ಹಾಲಾಡಿ ಶ್ರೀಮರ್ಲು ಚಿಕ್ಕು ದೈವಸ್ಥಾನದ ಧರ್ಮದರ್ಶಿಯೂ ಆಗಿದ್ದರು. ಕಳೆದ ಮೂರ್ನಾಲ್ಕು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಇವರು ಕಳೆದ ಜಿಪಂ ಚುನಾವಣೆ ಯಲ್ಲಿ ಬಿಜೆಪಿ ಪಕ್ಷದಿಂದ ಸಿದ್ಧಾಪುರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು.

ಸಂತಾಪ:ಸಿದ್ಧಾಪುರದ ಜಿಪಂ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಶೆಟ್ಟಿ ಅವರ ನಿಧನದಿಂದ ಬಿಜೆಪಿ ಓರ್ವ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿದೆ ಎಂದು ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಂತಾಪದಲ್ಲಿ ತಿಳಿಸಿದ್ದಾರೆ.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಯಶಪಾಲ್ ಸುವರ್ಣ, ಜಿಪಂ ಅಧ್ಯಕ್ಷ ದಿವಾಕರಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾ ಪದಾಧಿಕಾರಿಗಳಾದ ಪ್ರವೀಣ್‌ಕುಮಾರ್ ಶೆಟ್ಟಿ, ಬಿ.ರವಿ ಅಮೀನ್ ಮುಖಂಡ ರಾದ ಕಿರಣ್‌ಕುಮಾರ್ ಕೊಡ್ಗಿ, ಬಿ.ಎಂ.ಸುಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ಕಾಡೂರು ಮುಂತಾದವರು ತಾರಾನಾಥ ಶೆಟ್ಟಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ