×
Ad

ನಾಲ್ಕು ಜನ ಬಂದು ಪ್ರತಿಭಟನೆ ಮಾಡಿದರೆ ನಾವು ಹೆದರುವುದಿಲ್ಲ: ಸದಾನಂದ ಗೌಡ

Update: 2017-12-25 20:03 IST

ಬೆಂಗಳೂರು, ಡಿ.25: ಬಿಜೆಪಿ ಕಚೇರಿ ಎದುರು ಯಾರೋ ನಾಲ್ಕು ಜನ ಬಂದು ಪ್ರತಿಭಟನೆ ನಡೆಸಿದಾಕ್ಷಣ ನಾವು ಹೆದರಿ ಹಿಂದೆ ಸರಿಯುವುದಿಲ್ಲ. ಮಹಾದಾಯಿ ವಿವಾದದ ಇತ್ಯರ್ಥ ಪ್ರಯತ್ನವನ್ನು ಮುಂದುವರೆಸಿದ್ದೇವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಿಜೆಪಿ ಕಚೇರಿ ಎದುರು ಮೂರು ದಿನಗಳಿಂದ ಮಹಾದಾಯಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕಂಪೆನಿ ಮತ್ತು ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಂಗ್ರೆಸ್‌ನ ಮುಖಂಡರು ಮಹದಾಯಿ ಯೋಜನೆ ವ್ಯಾಪ್ತಿಯ ಪ್ರದೇಶದಲ್ಲಿ ಜನರನ್ನು ಪ್ರಚೋದಿಸಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಹೋದ ಕಡೆಯಲೆಲ್ಲಾ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು

 ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಹಾದಾಯಿ ವಿವಾದ ನ್ಯಾಯಧೀಕರಣದಿಂದಲೇ ಪರಿಹಾರವಾಗಬೇಕು ಎಂಬ ನಿಲುವಿನ ನಡುವೆ ಕರ್ನಾಟಕಕ್ಕೆ ಅಗತ್ಯವಾದಷ್ಟು ನೀರು ಕೊಡಲು ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಒಪ್ಪಿದ್ದಾರೆ. ಇದನ್ನು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಸಹಿಸಲಾಗದೇ ಅಡ್ಡಗಾಲು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯ ನಂತರ ಮಾತುಕತೆ ನಡೆಸುವುದಾಗಿ ಮನೋಹರ್ ಪಾರಿಕ್ಕರ್ ನೀಡಿರುವ ಭರವಸೆಯನ್ನು ಸಮರ್ಥಿಸಿಕೊಂಡ ಸದಾನಂದಗೌಡರು, ನಮ್ಮ ಪಕ್ಷದ ಮುಖ್ಯಮಂತ್ರಿಗಳು ಒಮ್ಮೆ ಕೊಟ್ಟ ಮಾತನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News