ಮಹಾದಾಯಿ ವಿಚಾರದಲ್ಲಿ ನಿಜವಾದ ಆರೋಪಿ ಕಾಂಗ್ರೆಸ್: ಪ್ರಕಾಶ್‌ಜಾವ್ಡೇಕರ್

Update: 2017-12-25 14:49 GMT

ಬೆಂಗಳೂರು, ಡಿ.25: ಮಹಾದಾಯಿ ವಿಚಾರದಲ್ಲಿ ನಿಜವಾದ ಆರೋಪಿ ಕಾಂಗ್ರೆಸ್. ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸಮಸ್ಯೆಯನ್ನು ಬಗೆಹರಿಸದೆ, ಈಗ ನಮ್ಮನ್ನು ಖಳನಾಯಕರಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ 2001ರಲ್ಲಿ ಕಳಸಾ ಬಂಡೂರಿ ಕಾಲುವೆ ಕಾಮಗಾರಿ ಆರಂಭವಾಯಿತು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಐದು ವರ್ಷದಿಂದ ಕಳಸಾ ಬಂಡೂರಿ ವಿಚಾರದಲ್ಲಿ ಏನು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕಾಮಗಾರಿಯನ್ನು ನಿಲ್ಲಿಸಿದ್ದೆ ಅವರ ಸಾಧನೆ. ಈಗ ಗೋವಾ ಮುಖ್ಯಮಂತ್ರಿ ಜತೆ ಮಾತುಕತೆಗೆ ಮುಂದಾಗಿದ್ದಾರೆ ಎಂದು ಎಂದು ಪ್ರಕಾಶ್ ಜಾವ್ಡೇಕರ್ ದೂರಿದರು.

ಭೂಪಸಂದ್ರ ಬಳಿಯ ಡಿನೋಟಿಫಿಕೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿರುವ ದೂರಿನ ಬಗ್ಗೆ ನಾನು ರಾಜ್ಯಪಾಲರ ಜತೆ ರಹಸ್ಯ ಚರ್ಚೆ ನಡೆಸಿದ್ದೇನೆ ಎಂಬುದು ಆಧಾರ ರಹಿತವಾದದ್ದು ಎಂದು ಅವರು ಹೇಳಿದರು. ಕಾಂಗ್ರೆಸ್‌ನವರು ಇಷ್ಟೊಂದು ಕೀಳುಮಟ್ಟದ ರಾಜಕಾರಣ ಮಾಡುವುದು ಬೇಡ. ನಾನು ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದು ನಿಜ. ಆದರೆ, ರಾಜ್ಯಪಾಲರನ್ನು ಭೇಟಿ ಮಾಡಿಲ್ಲ. ಅವರು ಬೆಂಗಳೂರಿನಲ್ಲೆ ಇಲ್ಲ. ಶನಿವಾರವೇ ಗುಜರಾತ್‌ಗೆ ತೆರಳಿದ್ದಾರೆ ಎಂದು ಪ್ರಕಾಶ್ ಜಾವ್ಡೇಕರ್ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ನನ್ನ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ. ಮುಖ್ಯಮಂತ್ರಿ ವಿರುದ್ಧ ಷಡ್ಯಂತ್ರ ಮಾಡಲು ನಾವು ಇಲ್ಲಿಗೆ ಬಂದಿಲ್ಲ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News