ಬೆಂಗಳೂರು: ಸಡಗರ, ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ
ಬೆಂಗಳೂರು, ಡಿ.25: ನಗರದೆಲ್ಲೆಡೆ ಶಾಂತಿದೂತ ಯೇಸು ಕ್ರಿಸ್ತನ ಆರಾಧನೆಯನ್ನು ‘ದೀನ ಬಡವರ ವರ್ಷಾಚರಣೆ’ ಎಂಬ ಥೀಮ್‌ನಡಿ ಕೆಥೋಲಿಕ್ ಮತ್ತು ಪ್ರೊಟಸ್ಟಂಟ್ ಚರ್ಚ್‌ಗಳಲ್ಲಿ ಸೋಮವಾರ ಕ್ರಿಸ್‌ಮಸ್ ಅನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ರವಿವಾರ ಮಧ್ಯರಾತ್ರಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಬಹುತೇಕ ಚರ್ಚ್‌ಗಳಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಸಾಂಪ್ರದಾಯಿಕ ಆಚರಣೆ ಮೂಲಕ ಸಂಭ್ರಮ ಸಡಗರದಿಂದ ಹಬ್ಬ ಆಚರಿಸಲಾಯಿತು.
ಸೋಮವಾರ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲರೂ ನಗರದ ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಏಸುವನ್ನು ಕುರಿತಾದ ಭಕ್ತಿಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಚರ್ಚ್‌ಗಳಲ್ಲಿ ಪರಸ್ಪರ ಸ್ನೇಹಿತರು, ನೊರೆಹೊರೆಯವರಿಗೆ ‘ಕ್ರಿಸ್‌ಮಸ್’ ಶುಭಾಶಯಗಳನ್ನು ಕೋರುತ್ತಾ, ಕುಟುಂಬದ ಸದಸ್ಯರೆಲ್ಲಾ ಸೇರಿ ಒಟ್ಟಾಗಿ ಊಟ ಮಾಡುವ ಮೂಲಕ ಏಸುವಿನ ಜನನವನ್ನು ಸ್ಮರಿಸಿದರು. ಕ್ರಿಸ್‌ಮಸ್ ಎಂದರೆ ಕೇಕು, ಗಲಗಲಾ ಸಿಹಿ ತಿನಿಸು ಬಲು ಪ್ರಸಿದ್ಧಿ. ಜತೆಗೆ ಎಲ್ಲರ ಮನೆಯಲ್ಲಿ ಘಮ ಘಮ ಬಿರಿಯಾನಿ ಸೇರಿದಂತೆ ಮಾಂಸಾಹಾರದ ಭಕ್ಷ್ಯ ಭೋಜನಗಳು ನಡೆದವು. ಇದಲ್ಲದೆ ಪ್ಲಂ ಕೇಕ್ (ಸಾದಾ ಮತ್ತು ಡ್ರ್ರೈೂಟ್ಸ್ ಮಿಶ್ರಿತ), ಮೊಟ್ಟೆ ಕಜ್ಜಾಯ ಇತ್ಯಾದಿಗಳು ಕಂಗೊಳಿಸಿದ್ದವು.
ಕೆಥೋಲಿಕರ ಅತ್ಯಂತ ಪ್ರಾಚೀನ ಚರ್ಚ್‌ಗಳಲ್ಲಿ ಒಂದಾದ ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್, ್ರೇಜರ್‌ಟೌನ್‌ನಲ್ಲಿರುವ ಸೇಂಟ್ ಪ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಯಲ್ಲಿರುವ ಸಂತ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸ್ ಚರ್ಚ್ ಸೇರಿದಂತೆ ನಗರದ ಹಲವು ರೋಮನ್ ಕ್ಯಾಥೊಲಿಕ್ ಮತ್ತು ಪ್ರೊಟಸ್ಟಂಟ್ ಚರ್ಚ್‌ಗಳ(ಸಿಎಸ್‌ಐ)ಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಚರ್ಚ್‌ಗಳ ಒಳ ಮತ್ತು ಹೊರಾಂಗಣಗಳು ದೀಪಾಲಂಕಾರದೊಂದಿಗೆ ಝಗಮಗಿಸುತ್ತಿದ್ದವು.
ಆಕರ್ಷಕ ಗೋದಲಿ (ದನದ ಕೊಟ್ಟಿಗೆ): ಏಸು ದನದ ಕೊಟ್ಟಿಗೆಯಲ್ಲಿ ಜನ್ಮ ತಾಳಿದರು ಎಂಬ ನಂಬಿಕೆ ಇದೆ. ಹೀಗಾಗಿ, ನಗರದಾದ್ಯಂತ ಚರ್ಚ್‌ಗಳಲ್ಲಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಈ ಗೋದಲಿಯಲ್ಲಿ ಬಾಲ ಏಸು ಹುಲ್ಲಿನ ಮೇಲೆ ಮಲಗಿರುವ ದೃಶ್ಯ, ಅತ್ತಿತ್ತ ಮಹಿಳೆ-ಪುರುಷರ ಚಿತ್ರಗಳು, ಜತೆಗೆ ದನಗಳು, ಕುರಿ-ಮೇಕೆಗಳ ಚಿತ್ರಗಳು ಗಮನ ಸೆಳೆಯುತ್ತಿದ್ದವು.
ಮಕ್ಕಳನ್ನು ರಂಜಿಸಿದ ಸಾಂತಾ ಕ್ಲಾಸ್: ಸಾಂತಾ ಕ್ಲಾಸ್ ಮಕ್ಕಳಿಗೆ ತುಂಬಾ ಪ್ರಿಯವಾದ ತಾತ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪುಟಾಣಿಗಳಿಗೆ ಪ್ರೀತಿಯ ಉಡುಗೊರೆಗಳನ್ನು ನೀಡಿ ಸಾಂತಾ ಖುಷಿ ಪಡಿಸುತ್ತಾನೆ. ಜರ್ಮನಿಯಲ್ಲಿ ಕ್ರಿಸ್‌ಮಸ್ ತಾತನೊಬ್ಬ ಗಗನಚುಂಬಿ ಗೋಪುರ ಏರಿ ಮಕ್ಕಳಿಗೆ ಗ್‌ಟಿಗಳನ್ನು ನೀಡಿ ಗಮನ ಸೆಳೆದ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಕಾಲ್ಪನಿಕ ವೃದ್ಧ ಸಾಂತಾ ಕ್ಲಾಸ್ ಮಕ್ಕಳಿಗೆ ಉಡುಗೊರೆಗಳನ್ನು ನೀಡುವುದು ಒಂದು ಸಂಪ್ರದಾಯ.
ಹೀಗಾಗಿ ಸಾಂತಾಕ್ಲಾಸ್‌ನ ವೇಷಧಾರಿಗಳು ಚರ್ಚ್‌ಗಳಲ್ಲಿ ನಿಂತು ಮಕ್ಕಳಿಗೆ ಚಾಕೊಲೇಟ್, ಸಿಹಿ ತಿನಿಸು ಹಾಗೂ ಇತರೆ ಉಡುಗೊರೆಗಳನ್ನು ನೀಡಿ ಸಂತಸಗೊಳಿಸಿದರು. ಯುಬಿ ಸಿಟಿ, ಮಂತ್ರಿಮಾಲ್, ಗರುಡಾ ಮಾಲ್ ಸೇರಿದಂತೆ ನಾನಾ ಮಾಲ್‌ಗಳಲ್ಲಿ ಸಾಂತಾ ಕ್ಲಾಸ್‌ನ ವೇಷಧಾರಿಗಳು ಗ್ರಾಹಕರನ್ನು ಸೆಳೆಯುತ್ತಿದ್ದ ದೃಶ್ಯ ಕಂಡು ಬಂತು. ಮತ್ತೆ ಕೆಲವೆಡೆ ಸಾಂತಾಕ್ಲಾಸ್‌ನ ವೇಷಧಾರಿ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಕುಣಿದ ದೃಶ್ಯವೂ ಕಂಡುಬಂತು.
ಪೊಲೀಸ್ ಭದ್ರತೆ: ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳಿಗೆ ಸಾವಿರಾರು ಜನ ಆಗಮಿಸುವುದರಿಂದ ಪೊಲೀಸರು ಹೆಚ್ಚಿನ ಭದ್ರತೆ ಕಲ್ಪಿಸಿದ್ದರು. ನಗರದ ಸಂತ ಮೇರಿ ಬೆಸಿಲಿಕಾ ಚರ್ಚ್, ಕ್ಸೇವಿಯರ್ ಕ್ಯಾಥಡ್ರಲ್ ಚರ್ಚ್, ಸೆಂಟ್ ಮಾರ್ಕ್ರ್ಸ್ ಕ್ಯಾಥಡ್ರಲ್ ಚರ್ಚ್, ಸೆಂಟ್ ಪ್ಯಾಟ್ರಿಕ್, ಸನ್ ಜೋಸೆಫ್ ಚರ್ಚ್, ಹಡ್ಸನ್ ಚರ್ಚ್, ಸಿಎಸ್‌ಐ ಶಾಂತಿ ದೇವಾಲಯ, ಇನ್ಫೆಂಟ್ ಜೇಸಿಸ್ ಚರ್ಚ್, ಸೆಂಟ್ ಕ್ರಿಶ್ಚಿಯನ್ ಫೆಲೋಶಿಪ್ ಚರ್ಚ್‌ಗಳು ಸೇರಿದಂತೆ ಎಲ್ಲಾ ಚರ್ಚ್‌ಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.