ಸಮಾಜಮುಖಿ ಜೀವನದಿಂದ ಮನುಕುಲ ಉಳಿಯಲು ಸಾಧ್ಯ: ನಾರಾಯಣಮೂರ್ತಿ

Update: 2017-12-25 16:11 GMT

  ಬೆಂಗಳೂರು, ಡಿ.25: ಮನುಕುಲ ಉಳಿಯಲು ಜನತೆ ಸಮಾಜಮುಖಿಯಾಗಿ ಬದುಕಬೇಕು. ಸಮಾಜದ ಹಿತಾಸಕ್ತಿಗಾಗಿ ಸಮತೋಲನವನ್ನು ಸಾಧಿಸುವ ನಿಟ್ಟಿನಲ್ಲಿ ವೌಲ್ಯಯುತ ಜೀವನ ವ್ಯವಸ್ಥೆ ಅಗತ್ಯವಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

 ಸೋಮವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಮಾಜಮುಖಿ ಮಾಸಪತ್ರಿಕೆ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರ ಒಳಿತನ್ನು ಸಾಧಿಸಲು ಬದ್ಧರಾಗಿರಬೇಕು. ಕೇವಲ ಕುಟುಂಬ ಏಳಿಗೆಗೆ ಮಾತ್ರ ಶ್ರಮಿಸದೆ ಸಮುದಾಯಕ್ಕೆ ನಿಷ್ಠರಾಗಿ ವರ್ತಿಸಿದರೆ ವೌಲ್ಯಯುತ ಜೀವನ ನಡೆಸಲು ಸಾಧ್ಯ ಎಂದರು.

 ಸಮಾಜದಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತಲು ಸ್ವಾತಂತ್ರ್ಯ, ಅನ್ವೇಷಣಾಶೀಲತೆ ಹಾಗೂ ಸಮಸ್ಯೆ ಬಗೆಹರಿಸುವ ಮನೋಬಲ ಬೇಕು. ಇದಕ್ಕಾಗಿ ಪಕ್ಷ ರಾಜಕಾರಣ ವನ್ನು ಬದಿಗಿಡಬೇಕು. ಎಡ-ಬಲ ಸೈದ್ಧಾಂತಿಕ ಗಡಿಯನ್ನು ದಾಟಿ ಬರಬೇಕಿದೆ. ನಮಗೆ ಸತ್ವಯುತ ವಿಚಾರಗಳ ಅಗತ್ಯವಿದೆ ಎಂದರು.

ಜಗತ್ತಿನಲ್ಲಿ ಒಳ್ಳೆಯ ವಿಚಾರ ಮಾತ್ರ ವ್ಯಕ್ತಿ, ದೇಶವನ್ನು ಮೀರಿ ಸ್ವೀಕಾರಾರ್ಹವಾಗುತ್ತದೆ ಎಂದು ಜಾನ್ ಎ್.ಕೆನಡಿ ಹೇಳಿದ್ದರು. ಇದು ಸದಾ ಕಾಲಕ್ಕೂ ಅನ್ವಯವಾಗುತ್ತದೆ. ಒಳ್ಳೆಯ ವಿಚಾರ ಯಾವುದೇ ಪಕ್ಷ, ವೇದಿಕೆಯಿಂದ ಬಂದರೂ ಅದರಿಂದ ಒಳಿತಾಗುವಂತಿರಬೇಕಷ್ಟೆ. ಇದು ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವಂತಿರಬೇಕು ಎಂದು ನುಡಿದರು.

ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಮಾತನಾಡಿ, ಜಗತ್ತಿನೆಲ್ಲೆಡೆ ಭಾರತವನ್ನು ಬೆಂಗಳೂರಿನ ಮೂಲಕ ನೋಡುವಂಥ ಸ್ಥಿತಿ ಇದೆ. ಇದಕ್ಕೆ ನಾರಾಯಣಮೂರ್ತಿ ಅವರಂತಹ ಟೆಕ್ಕಿಗಳ ಸಮೂಹ ಕಾರಣ. ಆದರೀಗ ಬೆಂಗಳೂರಿನ ರಸ್ತೆಗಳ ಬದಿ ಪಾದಚಾರಿಗಳು ನಡೆದಾಡಲು ುಟ್‌ಪಾತ್‌ಗಳೇ ಇಲ್ಲ. ಜನರೆಲ್ಲಾ ರಸ್ತೆ ಮೇಲೆ ಓಡಾಡುತ್ತಿದ್ದಾರೆ. ಇದನ್ನು ಆಳುವ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ, ಕನ್ನಡ ಭಾಷೆ ತಂತ್ರಜ್ಞಾನದ ಜತೆ ಬೆಳೆಯುತ್ತಿದೆ. ಈ ಕಾಲಘಟ್ಟದಲ್ಲಿ ಕನ್ನಡವು ಅನ್ನದ ಭಾಷೆಯಾಗಿ ಬೆಳವಣಿಗೆ ಹೊಂದಬೇಕೇ ಹೊರತು ಹೊಟ್ಟೆ ತುಂಬಿಸದ ಹಪ್ಪಳ ಅಥವಾ ಉಪ್ಪಿನಕಾಯಿಗೆ ಸೀಮಿತ ಆಗಬಾರದು. ವಿದ್ಯುನ್ಮಾನ ಮಾಧ್ಯಮಗಳಿಗೆ ಇತಿಹಾಸ ಇಲ್ಲದ ಕಾರಣ ವೀಕ್ಷಕರಿಗೆ ಉತ್ತಮ ಮಟ್ಟದ ಚರ್ಚೆಯ ವಿಷಯಗಳನ್ನು ಬಿತ್ತರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವುಗಳಿಗೆ ದೇಶ ಕಟ್ಟುವ ಕೆಲಸ ಬರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಚಂದ್ರಕಾಂತ ವಡ್ಡು, ಲೇಖಕ ಪೃಥ್ವಿದತ್ತ ಚಂದ್ರಶೋಭಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News