‘ವಿರಾಟ್‌ಗಿಂತ ರೋಹಿತ್ ಉತ್ತಮ ಬ್ಯಾಟ್ಸ್‌ಮನ್’

Update: 2017-12-26 09:14 GMT

  ಹೊಸದಿಲ್ಲಿ, ಡಿ.26: ‘‘ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿಗಿಂತ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ’’ಎಂದು ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

 ಎಬಿಪಿ ಸುದ್ದಿವಾಹಿನಿಯ ಚಾಟ್ ಶೋನಲ್ಲಿ ಭಾಗವಹಿಸಿದ ಪಾಟೀಲ್, ‘‘ಈ ಕ್ಷಣದಲ್ಲಿ ಬ್ಯಾಟಿಂಗ್ ವಿಷಯದಲ್ಲಿ ರೋಹಿತ್ ಅವರು ಕೊಹ್ಲಿಗಿಂತ ಮುಂದಿದ್ದಾರೆ. ಕೊಹ್ಲಿ ಖಂಡಿತವಾಗಿಯೂ ಶ್ರೇಷ್ಠ ಬ್ಯಾಟ್ಸ್‌ಮನ್, ಇದರಲ್ಲಿ ಅನುಮಾನವಿಲ್ಲ. ಕೊಹ್ಲಿ ಭಾರತದ ಶ್ರೇಷ್ಠ ಆಟಗಾರ. ಆದರೆ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ರೋಹಿತ್ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ’’ ಎಂದು ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧ ಇತ್ತೀಚೆಗೆ ಕೊನೆಗೊಂಡಿರುವ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ರೋಹಿತ್ ಹಲವು ಬ್ಯಾಟಿಂಗ್ ದಾಖಲೆಗಳನ್ನು ಮುರಿದಿದ್ದರು. ಕೊಹ್ಲಿ ನಟಿ ಅನುಷ್ಕಾ ಶರ್ಮರೊಂದಿಗೆ ವಿವಾಹವಾದ ಕಾರಣ ತಂಡದಿಂದ ಹೊರಗುಳಿದಿದ್ದರು.

2015ರ ಬಳಿಕ ಕೊಹ್ಲಿ ಹಾಗೂ ರೋಹಿತ್ 50 ಓವರ್ ಪಂದ್ಯದಲ್ಲಿ ತಲಾ 11 ಶತಕಗಳನ್ನು ಸಿಡಿಸಿದ್ದರು. ರೋಹಿತ್48 ಪಂದ್ಯಗಳಲ್ಲಿ 11 ಶತಕ ಸಿಡಿಸಿದರೆ ಕೊಹ್ಲಿ 11 ಶತಕ ಗಳಿಸಲು 58 ಇನಿಂಗ್ಸ್ ಆಡಿದ್ದರು. ಈ ಅವಧಿಯಲ್ಲಿ ರನ್ ವಿಷಯದಲ್ಲಿ ಕೊಹ್ಲಿ (2822 ರನ್,12 ಶತಕ) ಅವರು ರೋಹಿತ್‌ಗಿಂತ (2672, 11 ಶತಕ) ಮುಂದಿದ್ದಾರೆ.

ಶ್ರೀಲಂಕಾ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಭಾರತ ಭರ್ಜರಿ ಜಯ ಸಾಧಿಸಲು ನಾಯಕತ್ವವಹಿಸಿಕೊಂಡಿರುವ ರೋಹಿತ್ ಇದೀಗ ಎಲ್ಲೆಡೆ ಪ್ರಶಂಸೆಗೆ ಒಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News