ಭಯಾನಕ ಸುನಾಮಿಯ ಕರಾಳ ನೆನಪಿಗೆ ಇಂದಿಗೆ 13 ವರ್ಷ

Update: 2017-12-26 10:04 GMT

ಹೊಸದಿಲ್ಲಿ,ಡಿ.26 : ಡಿಸೆಂಬರ್ 26, 2004- ಹೌದು  ಇದೊಂದು ಮರೆಯಲಾಗದ ದುರಂತದ ದಿನ. ಇಂಡೋನೇಷ್ಯಾದ ಸುಮಾತ್ರ ಸಮೀಪ ಸಾಗರ ಗರ್ಭದಲ್ಲಿ ಉಂಟಾದ ಪ್ರಬಲ ಭೂಕಂಪವೊಂದು ಹಿಂದೂ ಮಹಾಸಾಗರ ತೀರದುದ್ದಕ್ಕೂ ವಿನಾಶ ಸೃಷ್ಟಿಸಿದ ಭಯಾನಕ ದಿನ. ಜಗತ್ತಿನ ಎರಡನೇ ಅತ್ಯಂತ ಪ್ರಬಲ ಭೂಕಂಪ ಇದಾಗಿತ್ತಲ್ಲದೆ ಅದು 2.3 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತ್ತು. ಜಗತ್ತು ಕಂಡ 10 ಮಹಾದುರಂತಗಳಲ್ಲಿ ಈ ಸುನಾಮಿಯೂ ಒಂದಾಗಿತ್ತು.

ಬೆಳಿಗ್ಗೆ 7.58ಕ್ಕೆ  ಸುಮಾತ್ರ ತೀರದಿಂದ 160 ಮೈಲಿಗಳಾಚೆ ಸಾಗರ ಗರ್ಭದಲ್ಲಿ ಉಂಟಾದ ಈ ಪ್ರಬಲ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 9.3 ದಾಖಲಾಗಿತ್ತು.(ಚಿಲಿ ದೇಶದಲ್ಲಿ  1960ರಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 9.5 ದಾಖಲಿಸಿದ್ದು ಇಲ್ಲಿಯವರೆಗಿನ ಅತ್ಯಂತ ಪ್ರಬಲ ಭೂಕಂಪವಾಗಿದೆ.)  ಸುಮಾರು 10 ನಿಮಿಷಗಳ ಕಾಲ ಸಾಗರ ತಳ ಅದೆಷ್ಟು  ಭೀಕರವಾಗಿ ಕಂಪಿಸಿತ್ತೆಂದರೆ ಎರಡನೇ ವಿಶ್ವಯುದ್ಧದ ಸಂದರ್ಭ ಉಪಯೋಗಿಸಲಾಗಿದ್ದ ಎಲ್ಲಾ ಬಾಂಬುಗಳಿಗಿಂತಲೂ ಎರಡು ಪಟ್ಟು ಪ್ರಬಲವಾಗಿತ್ತು. ಇದರ  ಪರಿಣಾಮ ಸುಮಾತ್ರ ತೀರಕ್ಕೆ ಸುಮಾರು 15 ನಿಮಿಷಗಳ ಕಾಲ ದೈತ್ಯ ಅಲೆಗಳು ಅಪ್ಪಳಿಸಿದ್ದವು. ಇಲ್ಲಿನ ಉತ್ತರ ದಿಕ್ಕಿನಲ್ಲಿದ್ದ ಎಸೆಹ್ ಎಂಬ ಪ್ರದೇಶದಲ್ಲಿ ಅಲೆಗಳು 80ರಿಂದ 100 ಅಡಿಗಿಂತಲೂ ಎತ್ತರಕ್ಕೆ  ಹಾರಿ  ಇಡೀ ಹಳ್ಳಿಗಳನ್ನೇ ನುಂಗಿ ಬಿಟ್ಟಿತ್ತು. ಇಂಡೋನೇಷ್ಯಾ ಒಂದರಲ್ಲಿಯೇ 1.3 ಲಕ್ಷದಿಂದ 1.6 ಲಕ್ಷದಷ್ಟು ಮಂದಿ ಈ ದುರಂತದಲ್ಲಿ ಸಾವನ್ನಪ್ಪಿದ್ದರೆ, 5 ಲಕ್ಷಕ್ಕೂ ಅಧಿಕ ಜನರು ಸೂರುಗಳಿಲ್ಲದೆ ಅನಾಥರಾಗಿ ನಿಂತಿದ್ದರು.  ಸಾವಿಗೀಡಾದವರಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳಾಗಿದ್ದರು.

ದೈತ್ಯ ಅಲೆಗಳು ಮುಂದೆ ಥೈಲಾಂಡ್ ಅನ್ನು ಅಪ್ಪಳಿಸಿ ಅಲ್ಲಿ 5,000ದಿಂದ 8,000 ಮಂದಿಯನ್ನು ಬಲಿ ಪಡೆದುಕೊಂಡರೆ, ಶ್ರಿಲಂಕಾದಲ್ಲೂ ರುದ್ರ ತಾಂಡವವಾಡಿ 35,000 ಜನರ ಸಾವಿಗೆ ಕಾರಣವಾಯಿತು. ಭಾರತದಲ್ಲಿ ಸುನಾಮಿಯು 15,000 ಮುಗ್ದ ಜೀವಗಳನ್ನು ಬಲಿ ಪಡೆದುಕೊಂಡಿತು.

ಈ ಸುನಾಮಿ ಒಟ್ಟು 1.9 ಲಕ್ಷ ಜನರ ಸಾವಿಗೆ ಕಾರಣವಾದರೆ 40,000ರಿಂದ 45,000 ಮಂದಿ ನಾಪತ್ತೆಯಾಗಿದ್ದಾರೆ ಅಥವಾ ಸಾವಿಗೀಡಾಗಿದ್ದಾರೆ.

ಈ ದುರಂತ ನಡೆದ ಒಂದು ವರ್ಷಕ್ಕೆ ಮುಂಚಿತವಾಗಿ ಸರಿ ಸುಮಾರು ಅದೇ ಸಮಯಕ್ಕೆ ಇರಾನ್ ದೇಶದ ಬಮ್ ಎಂಬಲ್ಲಿ 6.6 ತೀವ್ರತೆಯ ಭೂಕಂಪವು 30,000 ಜನರನ್ನು ಬಲಿ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News