ಬೇನಾಮಿ ಆಸ್ತಿಗಳನ್ನು ಹೊಂದಿರುವವರಿಗೆ ಹೆಚ್ಚಿದ ಸಂಕಷ್ಟ

Update: 2017-12-26 11:10 GMT

ಓರ್ವ ವ್ಯಕ್ತಿಯ ಹೆಸರಿನಲ್ಲಿ ಆಸ್ತಿಯಿದ್ದರೂ, ಅದರ ನಿಜವಾದ ಮಾಲಿಕ ತನ್ನ ಆದಾಯವನ್ನು ಬಚ್ಚಿಟ್ಟುಕೊಂಡಿರುವ ಇನ್ನೋರ್ವ ವ್ಯಕ್ತಿಯಾಗಿದ್ದರೆ ಅಂತಹ ಆಸ್ತಿಯನ್ನು ಬೇನಾಮಿ ಆಸ್ತಿಯೆಂದು ಕರೆಯಲಾಗುತ್ತದೆ. ಕಾಳಧನ ಖದೀಮರು ತಮ್ಮ ಬಂಧುಗಳು, ಆಪ್ತೇಷ್ಟರ ಹೆಸರುಗಳಲ್ಲಿ ಆಸ್ತಿಗಳನ್ನು ಖರೀದಿಸುವ ಮೂಲಕ ತಮ್ಮ ಆದಾಯವನ್ನು ಮುಚ್ಚಿಟ್ಟು ತೆರಿಗೆಯನ್ನು ವಂಚಿಸುತ್ತಾರೆ.

ಬೇನಾಮಿ ವಹಿವಾಟುಗಳ ನಿಷೇಧ

ಬೇನಾಮಿ ವಹಿವಾಟುಗಳ ಕೇಂದ್ರಬಿಂದುವಾಗಿರುವ ಯಾವುದೇ ಆಸ್ತಿಯನ್ನು ಕೇಂದ್ರ ಸರಕಾರವು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಬೇನಾಮಿ ಆಸ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಅದನ್ನು ಅದರ ನಿಜವಾದ ಮಾಲಿಕ ಅಥವಾ ಆತನ ಪರವಾಗಿ ಕಾರ್ಯ ನಿರ್ವಹಿಸುವ ವ್ಯಕ್ತಿಗೆ ಮರುವರ್ಗಾವಣೆ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಅಂತಹ ವರ್ಗಾವಣೆ ರದ್ದುಗೊಳ್ಳುತ್ತದೆ.

ಜಪ್ತಿ, ನ್ಯಾಯನಿರ್ಣಯ ಮತ್ತು ಮುಟ್ಟುಗೋಲು

ಯಾವುದೇ ವ್ಯಕ್ತಿಯು ಬೇನಾಮಿ ಆಸ್ತಿಯನ್ನು ಹೊಂದಿದ್ದಾನೆ ಎಂದು ನಂಬಲು ಆದಾಯ ತೆರಿಗೆ ಇಲಾಖೆಯ ವಿಚಾರಣಾಧಿಕಾರಿಗೆ ಸಕಾರಣಗಳಿದ್ದರೆ ಆತ ಅಂತಹ ಕಾರಣಗಳನ್ನು ಬರವಣಿಗೆಯಲ್ಲಿ ದಾಖಲಿಸಿ ಆಸ್ತಿಯನ್ನು ಬೇನಾಮಿಯನ್ನಾಗಿ ಪರಿಗಣಿಸ ಬಾರದೇಕೆ ಎನ್ನುವುದಕ್ಕೆ ಕಾರಣ ಕೇಳಿ ನೋಟಿಸ್‌ನ್ನು ಜಾರಿಗೊಳಿಸಬಹುದಾಗಿದೆ. ಇಂತಹ ಶೋ ಕಾಸ್ ನೋಟಿಸ್ ನಿಗದಿತ ಅವಧಿಯನ್ನು ಹೊಂದಿದ್ದು, ಈ ಅವಧಿಯೊಳಗೆ ಉತ್ತರಿಸಬೇಕಾಗುತ್ತದೆ. ಆಸ್ತಿಯ ನಿಜವಾದ ಮಾಲಿಕನ ಗುರುತು ತಿಳಿದಿದ್ದರೆ ಆತನಿಗೂ ನೋಟಿಸ್‌ನ್ನು ಜಾರಿಗೊಳಿಸಲಾಗುತ್ತದೆ. ನೋಟಿಸಿನ ಅವಧಿಯಲ್ಲಿ ಬೇನಾಮಿ ಆಸ್ತಿದಾರ ಆಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಬಹುದೆಂದು ಅಧಿಕಾರಿಯು ಭಾವಿಸಿದ್ದರೆ ಆತ ನೋಟಿಸ್‌ನ ದಿನಾಂಕದಿಂದ 90 ದಿನಗಳನ್ನು ಮೀರದ ಅವಧಿಗೆ ಅಂತಹ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಬಹುದಾಗಿದೆ. ನೋಟಿಸ್‌ನ ದಿನಾಂಕದಿಂದ 90 ದಿನಗಳಲ್ಲಿ ವಿಚಾರಣೆಗಳನ್ನು ನಡೆಸಿದ ಬಳಿಕ ಅಧಿಕಾರಿಯು ಆಸ್ತಿಯ ತಾತ್ಕಾಲಿಕ ಜಪ್ತಿ ಆದೇಶವನ್ನು ಮುಂದುವರಿಸಬಹುದು ಅಥವಾ ಮೊದಲು ಜಪ್ತಿ ಮಾಡಿರದಿದ್ದರೆ ತಾತ್ಕಾಲಿಕ ಜಪ್ತಿಗೆ ಆದೇಶಿಸಬಹುದು. ಆಸ್ತಿಯನ್ನು ಜಪ್ತಿ ಮಾಡದಿರಲು ನಿರ್ಧರಿಸಿದರೆ ಆತ ತನ್ನ ಮೊದಲಿನ ತಾತ್ಕಾಲಿಕ ಜಪ್ತಿ ಆದೇಶವನ್ನು ಹಿಂದೆಗೆದು ಕೊಳ್ಳಬಹುದು.

ಅಪರಾಧಗಳು ಮತ್ತು ಕಾನೂನು ಕ್ರಮ

ಆಸ್ತಿಯ ನಿಜವಾದ ಮಾಲಿಕ, ಬೇನಾಮಿದಾರ ಮತ್ತು ಬೇನಾಮಿ ವಹಿವಾಟುಗಳಲ್ಲಿ ತೊಡಗಲು ಪ್ರೇರೇಪಿಸುವ ಯಾವುದೇ ವ್ಯಕ್ತಿ ಬೇನಾಮಿ ವಹಿವಾಟುಗಳ ಅಪರಾಧ ವೆಸಗಿದ ತಪ್ಪಿತಸ್ಥರಾಗುತ್ತಾರೆ. ಇಂತಹ ವ್ಯಕ್ತಿಗಳಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಕಠಿಣ ಜೈಲುಶಿಕ್ಷೆಯನ್ನು ಮತ್ತು ಆಸ್ತಿಯ ನ್ಯಾಯಯುತ ಮಾರುಕಟ್ಟೆ ವೌಲ್ಯದ ಶೇ.25ರವರೆಗೆ ದಂಡವನ್ನು ವಿಧಿಸಬಹುದಾಗಿದೆ. ಬೇನಾಮಿ ಆಸ್ತಿ ಕಾಯ್ದೆಯಡಿ ಮಾಹಿತಿಗಳನ್ನು ಸಲ್ಲಿಸುವುದು ಅಗತ್ಯವಾಗಿರುವ ಯಾವುದೇ ವ್ಯಕ್ತಿಯು ಗೊತ್ತಿದ್ದೂ ಸುಳ್ಳು ಮಾಹಿತಿಗಳನ್ನು ಯಾವುದೇ ಅಧಿಕಾರಿಗೆ ಒದಗಿಸಿದಲ್ಲಿ ಆತನಿಗೆ ಆರು ತಿಂಗಳಿನಿಂದ ಐದು ವರ್ಷದವರೆಗೆ ಕಠಿಣ ಜೈಲುಶಿಕ್ಷೆಯನ್ನು ಮತ್ತು ಆಸ್ತಿಯ ನ್ಯಾಯಯುತ ಮಾರುಕಟ್ಟೆ ವೌಲ್ಯದ ಶೇ.10ರವರೆಗೆ ದಂಡವನ್ನು ವಿಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News