×
Ad

ಹೋರಾಟಗಾರರು-ಬಿಎಸ್‌ವೈ ಮಾತುಕತೆ ವಿಫಲ: ಡಿ.27ರಂದು ಪಾದಯಾತ್ರೆ ಮೂಲಕ ರಾಜ್ಯಭವನ ಚಲೋ

Update: 2017-12-26 20:11 IST

ಬೆಂಗಳೂರು, ಡಿ.26: ಮಹಾದಾಯಿ ಯೋಜನೆಗೆ ಒತ್ತಾಯಿಸಿ ನಗರದ ಬಿಜೆಪಿ ಕಚೇರಿ ಮುಂಭಾಗ ಕಳೆದ ನಾಲ್ಕು ದಿನದಿಂದ ಧರಣಿ ನಡೆಸುತ್ತಿರುವ ಹೋರಾಟಗಾರರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನಾಳೆ(ಡಿ.27) ರಾಜ್ಯಭವನ, ಚುನಾವಣಾ ಆಯೋಗ, ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

 ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ 15ದಿನದಲ್ಲಿ ಮಹಾದಾಯಿ ಯೋಜನೆಗೆ ನ್ಯಾಯ ಒದಗಿಸುತ್ತೇನೆಂದು ರೈತರಿಗೆ ಭರವಸೆ ನೀಡಿದ್ದರು. ಈ ಭರವಸೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ 4ದಿನಗಳವರೆಗೆ ಬಿಜೆಪಿ ಕಚೇರಿ ಮುಂಭಾಗ ಧರಣಿ ನಡೆಸಿದೆವು. ಆದರೆ, ಈಗ ಬಿ.ಎಸ್.ಯಡಿಯೂರಪ್ಪ ಮಹಾದಾಯಿ ಯೋಜನೆಯ ಇತ್ಯರ್ಥಕ್ಕೆ ನನ್ನಿಂದ ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಈ ಹೀಗಾಗಿ ಹೋರಾಟದ ಸ್ವರೂಪವನ್ನು ಬದಲಾಯಿಸಿದ್ದೇವೆ ಎಂದು ಧರಣಿ ನಿರತ ರೈತ ಮುಖಂಡರು ತಿಳಿಸಿದರು.

  ರೈತರು ನಡೆಸುತ್ತಿರುವ ಬಂದ್‌ಗೆ ವಕೀಲರು, ಸಿನೆಮಾ ಹಾಗೂ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ, ಮಹಾದಾಯಿ ಯೋಜನೆಗೆ ಜಾರಿಗಾಗಿ ರೈತರು ತೆಗೆದುಕೊಳ್ಳುವ ಯಾವುದೇ ನಿರ್ಣಯಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಇದಕ್ಕೆ ಎಲ್ಲರ ಬೆಂಬಲ ಇರಬೇಕೆಂದು ಪ್ರತಿಭಟನಾನಿರತ ವೀರೇಶ್ ಮನವಿ ಮಾಡಿದರು.

ರಾಜ್ಯಭವನ ಚಲೋ: ನಾಳೆ ಬೆಳಗ್ಗೆ 12ಗಂಟೆಗೆ ಮಹಾದಾಯಿ ಹೋರಾಟಗಾರರು ಪಾದಯಾತ್ರೆಯ ಮೂಲಕ ರಾಜ್ಯಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಕೇಂದ್ರ ಸರಕಾರ ಮಹಾದಾಯಿ ಯೋಜನೆ ಜಾರಿಗಾಗಿ ಮಧ್ಯೆಸ್ಥಿಕೆ ವಹಿಸಬೇಕು ಎಂದು ಒತ್ತಾಯ ಮಾಡಲಾಗುವುದು ಎಂದು ಅವರು ತಿಳಿಸಿದರು.

 ಚುನಾವಣಾ ಆಯೋಗಕ್ಕೆ ಮನವಿ: ಮಹಾದಾಯಿ ಯೋಜನೆಯ ಇತ್ಯರ್ಥ ಆಗುವವರೆಗೆ ವಿಧಾನಸಭಾ ಚುನಾವಣೆ ನಡೆಸಕೂಡದು ಎಂದು ಚುನಾವಣಾ ಆಯೋಗಕ್ಕೆ ಮನವಿ ಪತ್ರ ನೀಡಿ ಒತ್ತಾಯ ಮಾಡಲಾಗುವುದು. ತದನಂತರ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ, ಮಹಾದಾಯಿ ವಿಚಾರದ ಕುರಿತು ಜೆಡಿಎಸ್ ನಿಲುವು ಹಾಗೂ ರೈತರ ಬೇಡಿಕೆಯನ್ನು ಸ್ಪಷ್ಟಪಡಿಸಲಾಗುವುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳ ಭೇಟಿ: ಮಹಾದಾಯಿ ವಿಚಾರದಲ್ಲಿ ಬಿಜೆಪಿ ರೈತ ವಿರೋಧಿ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಅಭಿಪ್ರಾಯವನ್ನು ಪಡೆಯುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸ್ಪಷ್ಟನೆ ಕೇಳಲಾಗುವುದು ಎಂದು ರೈತ ಮುಖಂಡರು ತಿಳಿಸಿದರು.

ರೈತ ಹೋರಾಟಕ್ಕೆ ಸಂಘಟನೆಗಳ ಬೆಂಬಲ

 ಮಹಾದಾಯಿ ಯೋಜನೆಯ ಜಾರಿಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ನೀರಾವರಿ ಸಚಿವ ಎಂ.ಬಿ.ಪಾಟೀಲ್ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಸಿನೆಮಾ ಕ್ಷೇತ್ರದ ಬೆಂಬಲ: ಬಿಜೆಪಿ ಕಚೇರಿ ಮುಂಭಾಗ ಕಳೆದ ನಾಲ್ಕು ದಿನದಿಂದ ನಡೆಸುತ್ತಿರುವ ಹೋರಾಟಕ್ಕೆ ಸಿನೆಮಾ ಕ್ಷೇತ್ರ ಬೆಂಬಲಿಸಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದರು.

ಈ ವೇಳೆ ನಟ ಚೇತನ್ ಮಾತನಾಡಿ, ಬಿಜೆಪಿ ನಾಯಕರು ಜಾತಿ-ಧರ್ಮಗಳ ಮಧ್ಯೆ ವಿಷಬೀಜವನ್ನು ಬಿತ್ತುವ ಬದಲು ಜನತೆಗೆ ಒಳ್ಳೆದಾಗುವ ಕೆಲಸದಲ್ಲಿ ತೊಡಗಲಿ. ಮಹಾದಾಯಿ ಯೋಜನೆ ಕುರಿತು ರೈತರ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಆದರೂ ಇಷ್ಟು ವರ್ಷಗಳ ಕಾಲ ನ್ಯಾಯ ದೊರಕದೆ ಇರುವುದು ಸರಿಯಿಲ್ಲ. ಹೀಗಾಗಿ ರೈತರ ಹೋರಾಟದೊಂದಿಗೆ ನನ್ನನ್ನು ಒಳಗೊಂಡಂತೆ ಸಿನೆಮಾ ಕ್ಷೇತ್ರ ಸದಾ ಬೆಂಬಲಕ್ಕಿರುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News