ಮೌಲ್ಯಮಾಪನ ಬಹಿಷ್ಕರಿಸಿ ಉಪನ್ಯಾಸಕರ ಪ್ರತಿಭಟನೆ
ಬೆಂಗಳೂರು, ಡಿ.26: ಯುಜಿಸಿ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ವೇತನ ತುಟ್ಟಿ ಭತ್ತೆ ವಾಪಸ್ಸು ಪಡೆಯುವ ಸರಕಾರಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳ ಪ್ರಾಧ್ಯಾಪಕರು ಪದವಿ ಪರೀಕ್ಷೆಯ ವೌಲ್ಯಪಾಪನ ಬಹಿಷ್ಕರಿಸಿ ಇಂದಿಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರದಿಂದ ನಗರದ ಸೆಂಟ್ರಲ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಆರಂಭವಾಗಬೇಕಿದ್ದ ಪದವಿ(ಬಿಕಾಂ ಹಾಗೂ ಇಂಗ್ಲಿಷ್) ಪರೀಕ್ಷೆಗಳ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಸರಕಾರದ ಆದೇಶ ಹಿಂಪಡೆಯುವವರೆಗೂ ಹಾಗೂ ನಮ್ಮ ಬೇಡಿಕೆ ಈಡೇರುವವರೆಗೂ ವೌಲ್ಯಮಾಪನ ಮಾಡದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಅದ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಎಸ್.ಜಿ.ನಾಗರಾಜು ಮಾತನಾಡಿ, ಯುಜಿಸಿ ಬಾಕಿ ವೇತನ ತುಟ್ಟಿಭತ್ತೆಯನ್ನು ವಾಪಸ್ಸು ಪಡೆಯಬೇಕೆಂದು ಕಾಲೇಜುಗಳ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿದೆ. ಆದರೆ, ವಿಶ್ವವಿದ್ಯಾಲಯಗಳ ಅಧ್ಯಾಪಕರಿಗೆ ಈ ಆದೇಶ ಹೊರಡಿಸದೆ ತಾರತಮ್ಯ ಧೋರಣೆಯನ್ನು ಅನುಸರಿಸಲಾಗಿದೆ. ಅಲ್ಲದೆ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ 62 ವರ್ಷವಿರುವ ನಿವೃತ್ತಿ ವಯೋಮಿತಿಯನ್ನು ಕಾಲೇಜು ಅಧ್ಯಾಪಕರಿಗೆ 60 ವರ್ಷಕ್ಕೆ ನಿಗದಿಪಡಿಸಲಾಗಿದೆ. 2006 ರ ನಂತರ ನೇಮಕವಾದ ಕಾಲೇಜುಗಳ ಅಧ್ಯಾಪಕರುಗಳಿಗೆ ಯುಜಿಸಿ ಬಾಕಿ ವೇತನ ನೀಡಿಲ್ಲ. ಈ ಸಂಬಂಧ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರನಿಂದ ಆಗಮಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜುಗಳ ಅಧ್ಯಾಪಕರು ಮೌಲ್ಯಮಾಪನ ನಡೆಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಅನುದಾನ ರಹಿತ ಮತ್ತು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು. ಬಿ.ಎಡ್.ಕಾಲೇಜುಗಳ ಅಧ್ಯಾಪಕರಿಗೆ ವೇತನ ಬಿಡುಗಡೆಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು. ಪ್ರಸ್ತುತ ವಿಶ್ವವಿದ್ಯಾಲಯಗಳಲ್ಲಿ ಖಾಯಂ ಕುಲಪತಿಗಳೇ ಇಲ್ಲ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಯಂ ಆಯುಕ್ತರಿಲ್ಲ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಯಂ ಪ್ರದಾನ ಕಾರ್ಯದರ್ಶಿಗಳು ಇಲ್ಲ. ಸರಕಾರಿ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇಲ್ಲ. ಹೀಗೆ ಹಂಗಾಮಿ ವ್ಯವಸ್ಥೆಯಲ್ಲಿ ಸರಕಾರ ಕಾಲೇಜುಗಳನ್ನು ನಡೆಸುತ್ತಿವೆ. ಈ ರೀತಿ ಉನ್ನತ ಶಿಕ್ಷಣವನ್ನು ಕಡೆಗಣಿಸುತ್ತಿರುವ ಸರಕಾರಕ್ಕೆ ಮತ್ತು ಉನ್ನತ ಶಿಕ್ಷಣ ಸಚಿವರ ವಿರುದ್ಧ ಪ್ರತಿಭಟನಾ ನಿರತ ಅಧ್ಯಾಪಕರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯರ ಸಾಥ್: ಸರಕಾರ ಸ್ಪಂದಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಪ್ರತಿಭಟನಾಕಾರರು ದೃಢ ನಿರ್ಧಾರ ಕೈಗೊಂಡಿದ್ದಾರೆ. ಪ್ರಾಧ್ಯಾಪಕರ ಸಂಘಕ್ಕೆ ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು, ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ, ಪುಟ್ಟಣ್ಣ, ಶರಣಪ್ಪ ಮಟ್ಟೂರು ಸೇರಿದಂತೆ ಹಲವು ಪರಿಷತ್ ಸದಸ್ಯರು ಸಾಥ್ ನೀಡಿದ್ದಾರೆ.
ವಿವಿ ಕುಲಸಚಿವ ಪ್ರೊ.ಸಿ.ಶಿವರಾಜು ಮಾತನಾಡಿ, ನಾನೊಬ್ಬ ಪ್ರಾಧ್ಯಾಪಕನಾಗಿ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೆ, ಯುಜಿಸಿ ಕಾಯ್ದೆ ಪ್ರಕಾರ ವೌಲ್ಯಮಾಪನ ಮಾಡುವುದು ಪ್ರಾಧ್ಯಾಪಕರ ಕರ್ತವ್ಯವಾಗಿದ್ದು, ವೌಲ್ಯಮಾಪನದಲ್ಲಿ ಪಾಲ್ಗೊಳ್ಳಬೇಕು. 2018ರ ಜ.10ಕ್ಕೆ ಕಾಲೇಜು ಪುನಾರಂಭವಾಗಲಿದ್ದು, ಅಷ್ಟರಲ್ಲಿ ವೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಬೇಕು. ಪ್ರತಿಭಟನೆ ಜತೆಜತೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಾಧ್ಯಾಪಕರು ವೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಂ.ಆರ್. ಶಶಿಧರ್, ಬಿ.ಇಡಿ ಕಾಲೇಜು ಪ್ರಾಧ್ಯಾಪಕರ ಸಂಘದ ಅಧ್ಯಕ್ಷೆ ಮಧುಮತಿ ಸೇರಿದಂತೆ ಕರ್ನಾಟಕ ರಾಜ್ಯ ಕಾಲೇಜು ಅದ್ಯಾಪಕರ ಸಂಘ ಮತ್ತು ಅನುದಾನಿತ ಬಿ.ಇಡಿ. ಶಿಕ್ಷಣ ಕಾಲೇಜುಗಳ ಅದ್ಯಾಪಕರ ಸಂಘ ಮತ್ತು ಕರ್ನಾಟಕ ಸರಕಾರಿ ಪದವಿ ಕಾಲೇಜುಗಳ ಮತ್ತು ಅನುದಾನಿತ ಪದವಿ ಕಾಲೇಜುಗಳ ಅದ್ಯಾಪಕರ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವೌಲ್ಯಮಾಪನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಭಟನೆ ನಿರತ ಕಾಲೇಜು ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಇದೇ ಪ್ರಾಧ್ಯಾಪಕರು ವೌಲ್ಯಮಾಪನ ಕೈಗೊಳ್ಳಬೇಕಿರುವ ಕಾರಣ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲ.
-ಪ್ರೊ.ಸಿ.ಶಿವರಾಜು, ಬೆಂವಿವಿ ಕುಲಸಚಿವ(ವೌಲ್ಯಮಾಪನ)