ನಾವು ಸಚಿವ ಹೆಗಡೆಯಂತವರಲ್ಲ, ನಮಗೆ ತಾಯಂದಿರ ಬಗ್ಗೆ ಗೌರವವಿದೆ: ಸಿ.ಎಸ್.ದ್ವಾರಕಾನಾಥ್

Update: 2017-12-26 16:13 GMT

ಬೆಂಗಳೂರು,ಡಿ.26: ಶ್ರೀರಾಮನ ಹೆಸರಿನಲ್ಲಿ ಸಂಘ ಪರಿವಾರದವರು ವ್ಯಾಪಾರ ಮಾಡಲು ಮುಂದಾಗಿದ್ದಾರೆ ಎಂದು ಚಿಂತಕ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಹೇಳಿದರು.

 ಮಂಗಳವಾರ ನಗರದ ಫ್ರೀಡಂಪಾರ್ಕ್ ಸಮೀಪದ ಕುರುಬರ ಸಂಘದ ಕನಕ ಸಭಾಂಗಣದಲ್ಲಿ ಸಮ ಸಮಾಜ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ಸಂಘಪರಿವಾರ’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಶ್ರೀರಾಮಚಂದ್ರ ಇದ್ದ ಎನ್ನುವುದು ನಂಬಿಕೆ ಅಷ್ಟೆಯೇ ಹೊರತು ಪುರಾವೆ ಹುಡುಕಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಇದನ್ನೇ ನಾನು ಕಳೆದ ಒಂದು ಸಭೆಯಲ್ಲಿ ಹೇಳಿದ್ದಕ್ಕೆ ಸಂಘ ಪರಿವಾರ ವಿವಾದವನ್ನಾಗಿ ಸೃಷ್ಟಿಸಿದ್ದರು ಎಂದು ಅವರು ಹೇಳಿದರು.

ಶ್ರೀರಾಮನ ಬಗ್ಗೆ ಮಾತನಾಡಿದರೆ ಸಂಘ ಪರಿವಾರದವರಿಗೆ ಸಿಟ್ಟು ಬರುತ್ತದೆ. ಆದರೆ, ನಮ್ಮ ನಾಯಕರಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕು ಇವರಿಗಿದೆಯೇ ಎಂದು ದ್ವಾರಕಾನಾಥ್ ಪ್ರಶ್ನಿಸಿದರು.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಜಾತ್ಯತೀತರಿಗೆ ಅಪ್ಪ-ಅಮ್ಮ ಯಾರು ಎಂದು ಕೇಳುತ್ತಾರೆ. ಹೆತ್ತ ತಾಯಿಯ ಮೇಲೆ ಗೌರವ ಇಲ್ಲದಿರುವವರು ಇಂತಹ ಪದಗಳನ್ನು ಬಳಕೆ ಮಾಡುತ್ತಾರೆ. ನಮಗೂ ಅವರಂತೆ ಭಾಷೆ ಬಳಕೆ ಮಾಡಲು ಬರುತ್ತದೆ. ಆದರೆ ಅನಂತ್ ಕುಮಾರ್ ಹೆಗಡೆ ಅವರಂತೆ ನಾವು ನೀಚರಲ್ಲ ನಮಗೆ ತಾಯಂದಿರ ಬಗ್ಗೆ ಗೌರವವಿದೆ ಎಂದರು.

ಅನಂತ್ ಕುಮಾರ್ ಹೆಗಡೆಯ ಪೂರ್ವಿಕರು ಸಂಸ್ಕೃತ ಬಳಸುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಅವರು ಇದೀಗ ಈ ರೀತಿಯ ಅವಿವೇಕದ ಮಾತುಗಳನ್ನಾಡುತ್ತಿದ್ದಾರೆ. ಅಲ್ಲದೆ, ಸಂವಿಧಾನ ವಿರೋಧ ಮಾಡುವ ವ್ಯಕ್ತಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದೇಕೆ ಎಂದು ಪ್ರಶ್ನಿಸಿದರು.

  ದಲಿತ ಮುಖಂಡ ಮಾವಳ್ಳಿ ಶಂಕರ್, ಬಹುಸಂಖ್ಯಾತರಾದ ಅಹಿಂದ ಸಮುದಾಯಗಳು ಮೌನವಾಗಿರುವ ಕಾರಣದಿಂದಲೇ ಅನಂತ್ ಕುಮಾರ್ ಹೆಗಡೆ ಯಂತವರು ಸಿದ್ದರಾಮಯ್ಯ ಪಾಪದ ಪಿಂಡ, ಜಾತ್ಯತೀತರಿಗೆ ತಂದೆ ತಾಯಿ ಇಲ್ಲ ಎನ್ನುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

 ಯಾರೊಬ್ಬರಿಗೂ ಸಾಮಾಜಿಕ ನ್ಯಾಯದ ಮೇಲೆ ದಾಳಿ ಮಾಡುವ ಹಕ್ಕಿಲ್ಲ ಇಂತವರು ದೇಶವನ್ನು ಸಂಪೂರ್ಣ ಮಧ್ಯಕಾಲೀನ ಯುಗಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದು, ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಿಂದುತ್ವದ ಆಧಾರದ ಮೇಲೆ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದು, ದೇಶವನ್ನು ಸರ್ವನಾಶ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂದು ನುಡಿದರು.

 ಸಂವಾದದಲ್ಲಿ ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್, ಸಮಾ ಸಮಾಜ ವೇದಿಕೆ ರಾಜ್ಯಾಧ್ಯಕ್ಷ ಸುಭಾಷ್, ವಕೀಲ ಅನಂತನಾಯ್ಕೊ, ಹೋರಾಟಗಾರ ನರಸಿಂಹಮೂರ್ತಿ ಸೇರಿ ಪ್ರಮುಖರಿದ್ದರು.

 ‘ಹಿಂದೂ ನಾವೆಲ್ಲ ಒಂದು’ ಎಂದು ಘೋಷಣೆ ಕೂಗುವ ಸಂಘ ಪರಿವಾರದವರು ವಿಜಯಪುರದಲ್ಲಿ ದಾನಮ್ಮ ಎಂಬ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರವೆಸಗಿ, ಕೊಲೆ ಪ್ರಕರಣ ನಡೆದರು ಧ್ವನಿಗೂಡಿಸಲ್ಲ ಏಕೆ?’

-ಸಿ.ಎಸ್.ದ್ವಾರಕಾನಾಥ್, ಚಿಂತಕ

‘ಬಿಜೆಪಿಯ ಅನಂತಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ತಿರಸ್ಕಾರ ಮಾಡಲೂ ಯೋಗ್ಯರಲ್ಲ. ಇವರ ಬಗ್ಗೆ ನಾವು ಯೋಚನೆ ಮಾಡಿದರೆ, ನಮ್ಮ ಸ್ಮರಣಾ ಶಕ್ತಿ ಹರಣವಾಗುತ್ತದೆ.

-ಪ್ರೊ.ಜಿ.ಕೆ.ಗೋವಿಂದರಾವ್, ಚಿಂತಕ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News