ವಕ್ಫ್ ಆಸ್ತಿ ಸಂರಕ್ಷಣೆಗೆ ಸುತ್ತೋಲೆ ಹೊರಡಿಸಿದ ರಾಜ್ಯ ಸರಕಾರ

Update: 2017-12-26 17:27 GMT

ಬೆಂಗಳೂರು, ಡಿ.26: ರಾಜ್ಯದ ಪುರಸಭೆ, ನಗರ ಸಭೆ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆ ಕುರಿತು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

ವಕ್ಫ್ ಆಸ್ತಿಗಳಿಗೆ ಖಾತೆಯಾಗದೆ ಇರದ ಕಾರಣ ವಕ್ಫ್ ಸಂಸ್ಥೆ ಮತ್ತು ವಕ್ಫ್ ಅಧಿಕಾರಿಗಳಿಂದ ಬಂದ ಅರ್ಜಿಗಳ ಆಧಾರ ಜಿಲ್ಲಾ ವಕ್ಫ್ ಅಧಿಕಾರಿಯಿಂದ ದೃಢೀಕರಿಸಲಾಗಿರುವ ನೋಂದಾಯಿತ ಪತ್ರ ಅಥವಾ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿರುವ ಪ್ರತಿಗಳನ್ನು ಸಲ್ಲಿಸಿದಲ್ಲಿ, ನಿಯಾಮನುಸಾರ ಪರಿಶೀಲಿಸಿ, ಆದ್ಯತೆಯ ಮೇಲೆ ಖಾತೆ ಬದಲಾವಣೆ ಮಾಡಿ ನೀಡಲು ಸ್ಥಳೀಯ-ನಗರಾಭಿವೃದ್ಧಿ ಪ್ರಾಧಿಕಾರಿಗಳಿಗೆ ಸೂಚಿಸಲಾಗಿದೆ.

ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲ ಪ್ರಾಧಿಕಾರಗಳು ವಕ್ಫ್ ಆಸ್ತಿಯ ಮಾರಾಟ, ದಾನ, ಬದಲಾವಣೆ, ಭೋಗ್ಯ ಅಥವಾ ಹಸ್ತಾಂತರ ಸಾಧ್ಯವಿಲ್ಲವೆಂಬ ಅಂಶಗಳನ್ನು ಗಮನದಲ್ಲಿಟ್ಟಕೊಳ್ಳಬೇಕು. ಅದೇ ರೀತಿ, ಬಡಾವಣೆಗಳಲ್ಲಿ ವಕ್ಫ್ ಆಸ್ತಿ ಇದ್ದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹಾಗೂ ಸ್ಥಳೀಯ ವಕ್ಫ್ ಸಂಸ್ಥೆಯ ಪೂರ್ವಾನುಮತಿ ಲಿಖಿತವಾಗಿ ಪಡೆಯಬೇಕು.

ಅನೇಕ ನಗರಾಭಿವೃದ್ಧಿ ಕಾರ್ಯಗಳಿಗೆ ವಕ್ಫ್ ಜಮೀನನ್ನು ಭೂ ಸ್ವಾ ಧೀನಪಡಿಸಿಕೊಳ್ಳಲಾಗುತ್ತಿದ್ದು, ಪರ್ಯಾಯ ಜಮೀನನ್ನು ನೀಡಲು ಹಾಗೂ ಜಮೀನು ಲಭ್ಯವಿಲ್ಲದಿದ್ದಲ್ಲಿ ಮಾತ್ರ ಮಾರುಕಟ್ಟೆ ಬೆಲೆ ಅನುಸಾರ ಗರಿಷ್ಠ ನಷ್ಟ ಭರ್ತಿಯೊಂದಿಗೆ ಮಂಜುರಾತಿ ನೀಡಬೇಕೆಂದಿದೆ. ಹೀಗಾಗಿ, ಎಲ್ಲ ನಗರಾಭಿವೃದ್ಧಿ ಸಂಸ್ಥೆಗಳು ಈ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.

ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆಯ ಪ್ರತಿ ಹಾಗೂ ವಕ್ಫ್ ಮಂಡಳಿಯಲ್ಲಿ ನೋಂದಾಯಿಸಿರುವ ಪ್ರತಿಗಳನ್ನು ಎಲ್ಲ ಸ್ಥಳೀಯ ನಗರಾಭಿವೃದ್ಧಿ ಸಂಸ್ಥೆಗಳು-ಸ್ಥಳೀಯ ಪ್ರಾಧಿಕಾರಗಳಿಗೆ ದೃಢೀಕರಿಸಿ ಸಲ್ಲಿಸಲು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ(ಸಮನ್ವಯ) ಕೆ.ಎ.ಹಿದಾಯತ್ತುಲ್ಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News