×
Ad

ಜನವರಿಯೊಳಗೆ ಮಹಾದಾಯಿ ಇತ್ಯರ್ಥಪಡಿಸಲು ವೀರೇಶ್ ಸೊಬರದಮಠ ಒತ್ತಾಯ

Update: 2017-12-27 18:23 IST

ಬೆಂಗಳೂರು, ಡಿ.27: ಮಹಾದಾಯಿ ರೈತ ಹೋರಾಟಗಾರರು ನಗರದಲ್ಲಿ ಪಾದಯಾತ್ರೆಯ ಮೂಲಕವೇ ರಾಜ್ಯಭವನ, ಚುನಾವಣಾ ಆಯೋಗ, ಮುಖ್ಯಮಂತ್ರಿ ಕಚೇರಿ, ಜೆಪಿಭವನ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಮುಂದಿನ ಜನವರಿಯೊಳಗೆ ಮಹಾದಾಯಿ ಯೋಜನೆಯನ್ನು ಇತ್ಯರ್ಥಗೊಳಿಸಲು ಪಕ್ಷಭೇದ ಮರೆತು ಒಟ್ಟಾಗಿ ಶ್ರಮಿಸಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯ ಮಾಡಿದರು.

ಮಧ್ಯಾಹ್ನ 12ಕ್ಕೆ ಮಹಾದಾಯಿ ಹೋರಾಟಗಾರರು ರಾಜ್ಯಭವನ ಚಲೋ ಪ್ರಾರಂಭಿಸಿದರು. ಈ ವೇಳೆ ರೈತರು ರಾಜ್ಯಭವನದ ಸಮೀಪ ಬರುತ್ತಿದ್ದಂತೆ ಪೊಲೀಸರು ಹೋರಾಟಗಾರರನ್ನು ತಡೆದರು. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಕೇವಲ 7ಮಂದಿ ರೈತ ಮುಖಂಡರನ್ನು ಮಾತ್ರ ರಾಜ್ಯಭವನ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು.

ರಾಜ್ಯಭವನದ ಸಿಬ್ಬಂದಿ ಮನವಿ ಕೊಡಲು ಬಂದ ರೈತರಿಗೆ ಕಾಫಿ, ಟೀ ಕೊಡಲು ಬಂದಾಗ, ಅದನ್ನು ತಿರಸ್ಕರಿಸಿದ ರೈತರು ರಾಜ್ಯಪಾಲರಿಗೆ ಮನವಿ ಪತ್ರನೀಡಿ ಹೊರಬಂದರು. ನಂತರ ಚುನಾವಣಾ ಆಯೋಗಕ್ಕೆ ತೆರಳಿ, ಮಹಾದಾಯಿ ಯೋಜನೆ ಜಾರಿಯಾಗುವವರೆಗೆ ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ನಿಗದಿ ಪಡಿಸಬಾರದೆಂದು ಒತ್ತಾಯಿಸಿದರು.

ನಂತರ ಮುಖ್ಯಮಂತ್ರಿ ನಿವಾಸ ಕಾವೇರಿಯತ್ತ ಕಾಲ್ನಡಿಗೆ ಮೂಲಕ ಹೊರಟ ರೈತರನ್ನು ಕುಮಾರಕೃಪಾ ವಸತಿ ಗೃಹದ ಬಳಿ ಪೊಲೀಸರು ತಡೆದರು. ಈ ವೇಳೆ ರೈತರು ‘ನಾವೇನು ಭಯೋತ್ಪಾದಕರಾ, ನಮ್ಮನ್ನೇಕೆ ತಡೆಯುತ್ತಿದ್ದೀರಿ. ನಾವು ಮನವಿ ಪತ್ರ ಕೊಟ್ಟು ಹೋಗುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಪೊಲೀಸರು ಕೇವಲ 10ರೈತರಿಗೆ ಮಾತ್ರ ಅವಕಾಶ ಮಾಡಿಕೊಟ್ಟರು.

10ಮಂದಿ ರೈತರು ಮುಖ್ಯಮಂತ್ರಿ ನಿವಾಸ ಕಾವೇರಿ ಬಳಿ ಬರುತ್ತಿದ್ದಂತೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ತುಷಾರ್ ಗಿರಿನಾಥ್ ನಿವಾಸದ ಹೊರಗಡೆಯೇ ನಿಂತು ಮನವಿಪತ್ರ ಸ್ವೀಕರಿಸಿದರು. ಈ ವೇಳೆ ಮಹಾದಾಯಿ ಹೋರಾಟ ಸಮನ್ವಯ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ಮಾತನಾಡಿ, ಮುಂದಿನ ಜನವರಿಯೊಳಗೆ ಮಹಾದಾಯಿ ಯೋಜನೆ ಇತ್ಯರ್ಥಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಠಿಣ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು.

ಮಹಾದಾಯಿ ಯೋಜನೆಯ ಇತ್ಯರ್ಥಕ್ಕೆ ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ, ಬಿಜೆಪಿ, ಜೆಡಿಎಸ್ ಹಾಗೂ ರೈತರನ್ನೊಳಗೊಂಡ ಸರ್ವಪಕ್ಷಗಳ ನಿಯೋಗದ ಜೊತೆಗೂಡಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಹಾದಾಯಿ ಯೋಜನೆಗೆ ಒತ್ತಾಯಿಸಬೇಕು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ನಿವಾಸದ ನಂತರ ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ಭೇಟಿ ನೀಡಿದರು. ಆದರೆ, ಅಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇರಲಿಲ್ಲ. ಇದರಿಂದ ರೈತರು ಬೇಸರಗೊಂಡರು. ಈ ವೇಳೆ ಪರಿಷತ್ ಸದಸ್ಯ ಶರವಣರಿಗೆ ಮನವಿ ಸಲ್ಲಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿದರು.

ಸಿಪಿಐ(ಎಂ): ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಉತ್ತರ ಕರ್ನಾಟಕ ಬಂದ್ ಬೆಂಬಲಿಸಿ ಸಿಪಿಐ(ಎಂ) ಪಕ್ಷದ ಉತ್ತರ ಮತ್ತು ದಕ್ಷಿಣ ಸಮಿತಿ ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನರಗುಂದಲ್ಲಿ ಬೃಹತ್ ಸಮಾವೇಶ
ರೈತ ಸಂಘಟನೆಗಳು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆಗೂಡಿ ಜನವರಿ ಮೊದಲನೆ ವಾರದಲ್ಲಿ ನರಗುಂದದಲ್ಲಿ ಮಹಾದಾಯಿ ಯೋಜನೆಯ ಇತ್ಯರ್ಥಕ್ಕೆ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು. ಈ ಮಹಾವೇಶಕ್ಕೆ ಚಿತ್ರನಟರಾದ ಶಿವರಾಜ್‌ಕುಮಾರ್, ಜಗ್ಗೇಶ್, ಸಾ.ರಾ.ಗೋವಿಂದ್ ಸೇರಿದಂತೆ ನೂರಾರು ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ಭಾಗವಹಿಸುವ ನಿರೀಕ್ಷೆಯಿದೆ. ಮಹಾದಾಯಿ ಹೋರಾಟಕ್ಕೆ ಸಿನಿಮಾ ನಟರ ಬೆಂಬಲದಿಂದಾಗಿ ಆನೆ ಬಲ ಬಂದಂತಾಗಿದೆ.

-ವೀರೇಶ್ ಸೊರಬದಮಠ.

ಸಮನ್ವಯ ಸಮಿತಿಯ ಅಧ್ಯಕ್ಷ ರೈತರ ನಡೆಸುವ ಹೋರಾಟಕ್ಕೆ ಸಿನಿಮಾ ಕ್ಷೇತ್ರದ ಬೆಂಬಲ ಯಾವಾಗಲೂ ಇರುತ್ತೆ. ಆದರೆ, ಕೆಲವು ವೇಳೆ ನೇರವಾಗಿ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಪ್ರತಿಭಟನೆಗಳಲ್ಲಿ ಭಾಗವಹಿಸಿದರು ಜನತೆ ಫೋಟೊ ಕ್ಲಿಕ್ಕಿಸಿ ಹೋಗುತ್ತಿರುತ್ತಾರೆ. ಇದರಿಂದ ಹೋರಾಟದ ಗಂಭೀರತೆ ಹಾಳಾಗಲಿದೆ. ಈಗ ಮಹಾದಾಯಿ ಯೋಜನೆ ಜಾರಿಗೆ ನಿರ್ಣಾಯಕ ಹೋರಾಟಕ್ಕೆ ಅಲ್ಲಿನ ರೈತರು ಮುಂದಾಗಿರುವುದು ಸಂತೋಷದ ವಿಚಾರ. ಮುಂದಿನ ಜನವರಿಯಲ್ಲಿ ನರಗುಂದದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ಆ ಸಮಾವೇಶಕ್ಕೆ ಚಿತ್ರನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ಭಾಗವಹಿಸಲಿದ್ದಾರೆ.

-ಶಿವರಾಜ್‌ಕುಮಾರ್ ಚಿತ್ರನಟ

ಕಲಾವಿದರು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ನಾಡು, ನುಡಿಯ ವಿಚಾರದಲ್ಲಿ ಕನ್ನಡವೇ ನಮ್ಮ ಪಕ್ಷವಾಗಲಿದೆ. ಸಿನಿಮಾ ನಟರಿಗೆ ರಾಜಕೀಯ ಬಣ್ಣ ಬಳಿಯಬೇಡಿ. ಮಹಾದಾಯಿ ವಿಷಯ ಕೇವಲ ಉತ್ತರ ಕರ್ನಾಟಕ ಸಮಸ್ಯೆಯಲ್ಲ. ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರ ಸಮಸ್ಯೆಯಾಗಿಯೇ ನೋಡಬೇಕಾಗಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಸಮಸ್ಯೆ ಎದುರಾದರು ಸಿನಿಮಾ ಕ್ಷೇತ್ರ ಆ ಸಮಸ್ಯೆಗೆ ಸ್ಪಂದಿಸಲಿದೆ.
-ಜಗ್ಗೇಶ್ ಚಿತ್ರನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News