×
Ad

ಬೆಂಗಳೂರು; ಮನೆಯಲ್ಲಿ ಅಗ್ನಿ ಅವಘಡ : ದಂಪತಿ,ಮಗು ಸೇರಿ ಮೂವರು ಸಜೀವ ದಹನ

Update: 2017-12-27 18:53 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.27: ಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ದಂಪತಿ ಹಾಗೂ ಮಗು ಸಜೀವ ದಹನಗೊಂಡಿರುವ ದಾರುಣ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಟಿನ್‌ಫ್ಯಾಕ್ಟರಿ ಸಮೀಪದ ಉದಯನಗರದ ನಿವಾಸಿಗಳಾದ ಸಂತೋಷ್(35), ಇವರ ಪತ್ನಿ ಸೋಫಿಯಾ(30) ಮತ್ತು ಪುತ್ರಿ ಫ್ಲೋರ (6) ಎಂಬುವರ ಸಜೀವ ದಹನಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಸಂತೋಷ್ ಅವರು ಟಿವಿ ರಿಪೇರಿ ಹಾಗೂ ಕೇಬಲ್ ಅಳವಡಿಸುವ ಕೆಲಸ ಮಾಡುತ್ತಿದ್ದು, ಸೋಫಿಯಾ ಗೃಹಿಣಿಯಾಗಿದ್ದರು. ಮಂಗಳವಾರ ರಾತ್ರಿ ವಿದ್ಯುತ್ ಕಡಿತಗೊಂಡ ಪರಿಣಾಮ ಮುಂಬತ್ತಿ ಹಚ್ಚಿಕೊಂಡು ನೆಲದ ಮೇಲೆ ಹಾಸಿಗೆ ಹಾಸಿಕೊಂಡು ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ.

ಬುಧವಾರ ಮುಂಜಾನೆ ಸುಮಾರು 6 ಗಂಟೆಯಲ್ಲಿ ಇವರ ಮನೆಯಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ತಿಳಿಸಿ ಬಾಗಿಲು ಒಡೆದು ನೋಡಿದಾಗ ಬೆಂಕಿಯಿಂದ ದಂಪತಿ ಸಜೀವ ದನಗೊಂಡಿರುವುದು ಕಂಡು ಬಂದಿದೆ.
ಪೋಷಕರೊಂದಿಗೆ ಮಲಗಿದ್ದ ಮಗು ಶೇ.70ರಷ್ಟು ಸುಟ್ಟ ಗಾಯಗಳಿಂದ ಚೀರುತ್ತಿದ್ದಾಗ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದಾಗಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ಹಾನಿಗೀಡಾಗಿವೆ ಎನ್ನಲಾಗಿದೆ.

ಬೆಂಕಿ ಹೇಗೆ ಕಾಣಿಸಿಕೊಂಡಿದೆ ಎಂಬ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಮುಂಬತ್ತಿ ಹಾಗೂ ಸೊಳ್ಳೆಬತ್ತಿ ಪತ್ತೆಯಾಗಿದೆ. ಇದರ ಕಿಡಿಯಿಂದ ಬೆಂಕಿ ಆವರಿಸಿ ಈ ಅವಘಡ ಸಂಭವಿಸಿದೆಯೇ ಅಥವಾ ಇತರೆ ಕಾರಣ ಇರಬಹುದೆ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News