ಬಿಜೆಪಿ ರೈತ ವಿರೋಧಿ : ಆಪ್
ಬೆಂಗಳೂರು, ಡಿ.27: ಬಿಜೆಪಿ ಪಕ್ಷ ಸತತವಾಗಿ ರೈತ ವಿರೋಧಿ ನೀತಿ ಅನುಸರಿಸಿಕೊಂಡು ಬರುತ್ತಿದೆ. ಮಹಾದಾಯಿ ಕಳಸಾ-ಬಂಡೂರಿ ವಿಚಾರದಲ್ಲಿ ರೈತರಿಗೆ ಬಿಜೆಪಿ ವಕ್ತಾರರು ಅವಮಾನ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಪ್ ಮುಖಂಡ ಶಿವಕುಮಾರ್, ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡಿರುವವರು ರೈತರೇ ಅಲ್ಲ ಎಂದು ಹೇಳಿಕೆ ನೀಡಿ, ಖರ್ಚು, ವೆಚ್ಚದ ಬಗ್ಗೆ ಪ್ರಶ್ನಿಸಿರುವ ಬಿಜೆಪಿ ನಾಯಕರು ರೈತರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ನಾಯಕರ ಪ್ರಕಾರ ರೈತ ಎಂದರೆ ಪ್ರಯಾಣ, ಊಟದ ಭತ್ತೆ ಭರಿಸಲಾಗದವನು ಎಂದರ್ಥವೇ ಎಂದು ಪ್ರಶ್ನಿಸಿದ ಅವರು, 20 ದಿನದೊಳಗಾಗಿ ಸಮಸ್ಯೆ ಬಗೆಹರಿಸುತ್ತೆನೆಂದು ಯಡಿಯೂರಪ್ಪ ಸುಳ್ಳು ಭರವಸೆ ನೀಡಿ, ರೈತರಿಗೆ ವಂಚಿಸುತ್ತಿದ್ದಾರೆ. ಅಲ್ಲದೇ ಹೋರಾಟದಲ್ಲಿ ಪಾಲ್ಗೊಂಡಿರುವವರು ರೈತರೇ ಅಲ್ಲ ಎಂದು ಅವಮಾನಿಸಿರುವುದು ಅತ್ಯಂತ ಹೇಯ ಸಂಗತಿ ಎಂದು ಹೇಳಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಬಿತ್ತನೆ ಬೀಜ, ರಸಗೊಬ್ಬರ ಕೇಳಿದ, ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದರು. ಕಾವೇರಿ ವಿಚಾರದಲ್ಲಿ ಸರ್ವ ಪಕ್ಷಗಳ ಸಭೆಗೆ ಗೈರು ಹಾಜರಾಗಿ ರೈತ ವಿರೋಧಿ ನಿಲುವು ತಾಳಿದ್ದರು ಎಂದ ಅವರು, ರಾಜಾಸ್ಥಾನ, ಗುಜರಾತ್, ಮಹಾರಾಷ್ಟ್ರ, ಮಧ್ಯ ಪ್ರದೇಶದಲ್ಲಿ ಪೋಲಿಸರಿಂದ ರೈತರ ಮೇಲೆ ದಾಳಿ ಮಾಡಿಸಿದ್ದು ಬಿಜೆಪಿ ಸರಕಾರಗಳು ಎಂದು ಹೇಳಿದರು.
ಮಹಾರಾಷ್ಟ್ರ, ಗೋವಾ ಹಾಗೂ ಕೇಂದ್ರದಲ್ಲೂ ಬಿಜೆಪಿ ಸರಕಾರವಿದೆ. ಕರ್ನಾಟಕದ ಸಂಸದರು ಪ್ರಧಾನಿ ನರೇಂದ್ರ ಮೋದಿಗೆ ಒತ್ತಡ ತಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಹಾದಾಯಿ ವಿವಾದ ಬಗೆಹರಿಸಿ ಎಂದು ರೈತರು ಕೇಳಿಕೊಂಡರೆ, ಯಡಿಯೂರಪ್ಪ ರೈತರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ, ಕಾಂಗ್ರೆಸ್ ಪಕ್ಷಗಳು ರೈತರ ಹಿತಾಸಕ್ತಿ ಮರೆತು ರಾಜಕೀಯ ಲಾಭದಲ್ಲಿ ತೊಡಗಿವೆ. ಎರಡು ಪಕ್ಷಗಳಿಗೆ ನೈತಿಕತೆ ಇದ್ದರೆ ಮಹಾದಾಯಿ ಕಳಸಾ-ಬಂಡೂರಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸದಿದ್ದರೆ ಜನತೆ ಎರಡು ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಿವಕುಮಾರ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಸಂಚಾಲಕರಾದ ಮೋಹನ್, ಶಿವಕುಮಾರ್, ಬಸವರಾಜ್, ವಿನೋದ್ ಜಯಂತ್ ಸೇರಿ ಪ್ರಮುಖರಿದ್ದರು.