ಈ ಗ್ರಾಮದ ಪ್ರತಿ ಮಗುವಿಗೂ ಇದೆ ವಿಶಿಷ್ಟ ‘ಕಾಲರ್ ಟ್ಯೂನ್’!

Update: 2017-12-27 15:33 GMT

ಮೇಘಾಲಯದ ಈ ‘ಗುನುಗುವ ಗ್ರಾಮ’ದಲ್ಲಿ ವಿಶಿಷ್ಟ ಸಂಪ್ರದಾಯವೊಂದು ಶತಮಾನಗಳಿಂದಲೂ ಸಾಂಸ್ಕೃತಿಕ ದ್ಯೋತಕವಾಗಿ ಬೆಳೆದುಕೊಂಡು ಬಂದಿದೆ.

ಕಾಂಗ್‌ಥಾಂಗ್ ಗ್ರಾಮದಲ್ಲಿ ಪ್ರತಿ ಬಾರಿ ಮಗುವೊಂದು ಜನಿಸಿದಾಗ ಅದರ ತಾಯಿ ಜೋಗುಳವೊಂದನ್ನು ಸಂಯೋಜಿಸುತ್ತಾಳೆ ಮತ್ತು ಈ ಜೋಗುಳ ಆ ಮಗುವಿನ ಜೀವನದುದ್ದಕ್ಕೂ ವಿಶಿಷ್ಟ ಗುರುತಾಗಿ ಉಳಿದುಕೊಳ್ಳುತ್ತದೆ. ಅಂದ ಹಾಗೆ ಈ ಜೋಗುಳದಲ್ಲಿ ಯಾವುದೇ ಶಬ್ದವಿರುವುದಿಲ್ಲ. ಅದೊಂದು ಮೂಗಿನಿಂದ ಹೊರಡಿಸುವ ರಾಗವಾಗಿದ್ದು, ಗ್ರಾಮಸ್ಥರಿಗೆ ಮಾತ್ರ ಅದನ್ನು ಗುರುತಿಸಲು ಮತ್ತು ತಿಳಿದುಕೊಳ್ಳಲು ಸಾಧ್ಯ.

ಮೇಘಾಲಯದ ಪೂರ್ವ ಖಾಸಿ ಹಿಲ್ ಜಿಲ್ಲೆಯ ಡಝನ್‌ಗೂ ಅಧಿಕ ಗ್ರಾಮಗಳು ಈ ಸಂಪ್ರದಾಯವನ್ನು ಅನುಸರಿಸುತ್ತಿವೆಯಾದರೂ, ಅದು ಮೊದಲು ಹುಟ್ಟಿದ್ದು ರಾಜಧಾನಿ ಶಿಲಾಂಗ್‌ನಿಂದ 56 ಕಿ.ಮೀ.ದೂರದಲ್ಲಿರುವ ಈ ಕಾಂಗ್‌ಥಾಂಗ್ ಗ್ರಾಮದಲ್ಲಿ. ನಂಬಿದರೆ ನಂಬಿ,ಇಲ್ಲದಿದ್ದರೆ ಬಿಡಿ.....ಇಲ್ಲಿಯ ಸುಮಾರು 700 ಗ್ರಾಮಸ್ಥರು ತಮ್ಮದೇ ಆದ ವಿಶಿಷ್ಟ ಗುರುತಿನ ‘ಕಾಲರ್ ಟ್ಯೂನ್’ ಹೊಂದಿದ್ದಾರೆ.

ತಲೆಮಾರುಗಳಿಂದಲೂ ಈ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪ್ರತಿಯೊಂದು ಜೋಗುಳವೂ ಅರ್ಧ ನಿಮಿಷದಿಂದ ಒಂದು ನಿಮಿಷದ ಅವಧಿಯದಾಗಿರುತ್ತದೆ. ಹಾಗೆಂದು ತಾಯಿ ತನ್ನ ಮಗುವನ್ನು ಕರೆಯಲು ಜೋಗುಳವನ್ನು ಪೂರ್ತಿಯಾಗಿ ಗುನುಗಬೇಕಾಗಿಲ್ಲ, ಐದಾರು ಸೆಕೆಂಡ್‌ಗಳುದ್ದದ ಶೀರ್ಷಿಕೆಯನ್ನು ಗುನುಗಿದರೂ ಸಾಕು....ಮಗು ಎಲ್ಲಿದ್ದರೂ ತಾಯಿಯ ಎದುರು ಪ್ರತ್ಯಕ್ಷವಾಗುತ್ತದೆ.

ಈ ಗ್ರಾಮದಲ್ಲಿ ಜೋಗುಳದ ಐಡಿ ಪ್ರತಿಯೊಂದು ಮಗುವಿಗೂ ಭಿನ್ನವಾಗಿರುತ್ತದೆ, ಯಾವುದೇ ಎರಡು ಜೋಗುಳಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಅದು ತನ್ನ ಪ್ರೀತಿಪಾತ್ರ ನವಜಾತ ಶಿಶುವಿಗಾಗಿ ತಾಯಿಯ ಹೃದಯಾಂತರಾಳದಿಂದ ಹೊರಹೊಮ್ಮು ವುದರಿಂದ ವಿಶಿಷ್ಟವಾಗಿಯೇ ಇರುತ್ತದೆ. ಅಲ್ಲದೆ ಈ ಜೋಗುಳ ಅಥವಾ ಅವರ ಭಾಷೆಯಲ್ಲಿ ಹೇಳುವುದಾದರೆ ‘ಜಿಂಗ್ರವೈ ಲಾಬೀ’ ಇತರ ಜೋಗುಳಗಳಿಗಿಂತ ಭಿನ್ನವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡ ಬಳಿಕವೇ ಅದು ಮಗುವಿನ ಕಾಯಂ ‘ಕಾಲರ್ ಟ್ಯೂನ್’ ಐಡಿ ಆಗುತ್ತದೆ. ಇಲ್ಲಿಯ ಜನರಿಗೆ ಹೆಸರುಗಳು ಇವೆ, ಆದರೆ ತಾಯಂದಿರು ತಮ್ಮ ಮಕ್ಕಳನ್ನು ಕರೆಯಲು ಈ ಸುಮಧುರ ರಾಗಗಳನ್ನೇ ಬಳಸುತ್ತಾರೆ ಮತ್ತು ಮಕ್ಕಳೂ ಅದನ್ನು ಬಹುಬೇಗ ಕಲಿತುಕೊಳ್ಳುತ್ತವೆ. ಇಲ್ಲಿಯ ಪ್ರತಿ ಕುಟುಂಬದಲ್ಲಿಯ ಪ್ರತಿಯೊಂದು ಮಗುವೂ ತನ್ನದೇ ಆದ ಜೋಗುಳವನ್ನು ಹೊಂದಿದೆ.

ನಾಸಿಕದ ಮೂಲಕವೇ ಹೊರಡಿಸುವ ಈ ಮಧುರ ನಾದಗಳಿಗೆ ಪ್ರಕೃತಿ ಮತ್ತು ಪಕ್ಷಿಗಳೇ ಸ್ಫೂರ್ತಿಯಾಗಿವೆ. ಈ ಪದ್ಧತಿ ಆರಂಭಗೊಂಡಿದ್ದು ಹೇಗೆ ಎನ್ನುವುದು ಯಾರಿಗೂ ಖಚಿತವಿಲ್ಲ. ಆದರೆ ದಟ್ಟಾರಣ್ಯಗಳಲ್ಲಿ ಮತ್ತು ನದಿಗಳಲ್ಲಿ ಕಣ್ಣಿಗೆ ಕಾಣದ ಭೂತಪ್ರೇತಗಳಿವೆ ಮತ್ತು ಯಾರನ್ನಾದರೂ ಹೆಸರು ಹಿಡಿದು ಕರೆದಾಗ ಅದನ್ನು ಕೇಳಿಸಿಕೊಂಡು ಆ ವ್ಯಕ್ತಿಗೆ ಅನಾರೋಗ್ಯವನ್ನುಂಟು ಮಾಡುತ್ತವೆ ಎಂಂಬ ನಂಬಿಕೆ ಗ್ರಾಮಸ್ಥರಲ್ಲಿದೆ ಮತ್ತು ಇಂತಹ ದುಷ್ಟಶಕ್ತಿಗಳಿಂದ ರಕ್ಷಣೆಗಾಗಿ ಅವರು ಗುನುಗುಡುವ ಹಾಡುಗಳನ್ನು ಬಳಸುತ್ತಾರೆ. ಈ ಗ್ರಾಮಕ್ಕೆ ಭೇಟಿ ನೀಡಿರುವ ಹಲವಾರು ವಿದೇಶಿ ವಿದ್ವಾಂಸರು ಇಲ್ಲಿಯೇ ಉಳಿದುಕೊಂಡು ವಿಶಿಷ್ಟ ಸಂವಹನ ವ್ಯವಸ್ಥೆಯಾಗಿ ಜೋಗುಳಗಳ ಬಳಕೆಯ ಸಂಪ್ರದಾಯವನ್ನು ಅಧ್ಯಯನ ಮಾಡಿದ್ದಾರೆ. ಸ್ಥಳೀಯ ಮತ್ತು ವಿದೇಶಿ ಮಾಧ್ಯಮಗಳು ಈ ವಿಶಿಷ್ಟ ಕಲೆಯ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆಯಾದರೂ ಸರಕಾರವು ಅದಕ್ಕೆ ಯಾವುದೇ ಮಾನ್ಯತೆಯನ್ನು ನೀಡುವ ಗೋಜಿಗೆ ಹೋಗಿಲ್ಲ.

ಆಡಳಿತವು ಪ್ರವಾಸಿಗಳು ಈ ಗ್ರಾಮದಲ್ಲಿ ಉಳಿದುಕೊಳ್ಳಲು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಮತ್ತು ಗ್ರಾಮಸ್ಥರು ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸಲು ನೆರವಾಗಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರೊಥೇಲ್ ಸೊಂಗಸಿತ್. ಸರಕಾರವು ಈ ಜೋಗುಳಗಳನ್ನು ದಾಖಲೀಕರಿಸಬೇಕು ಮತ್ತು ಗ್ರಾಮವನ್ನು ಪ್ರವಾಸಿ ತಾಣವೆಂದು ಘೋಷಿಸಬೇಕು ಎನ್ನುವುದು ಅವರ ಆಗ್ರಹ.

ಈ ಗ್ರಾಮದಲ್ಲಿಯ ಶೇ.75ರಷ್ಟು ಜನರು ನಿಯಾಂ ಖಾಸಿ ಧರ್ಮಕ್ಕೆ ಸೇರಿದ್ದರೆ ಉಳಿದವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅನಾನಸ್, ಕಿತ್ತಳೆ, ಕಸಬರಿಗೆ ಹುಲ್ಲ್ಲು, ಪಲಾವ್ ಎಲೆ, ಕಾಳುಮೆಣಸು ಇಲ್ಲಿಯ ಮುಖ್ಯ ಕೃಷಿ ಉತ್ಪನ್ನಗಳಾಗಿವೆ.

ಆದರೆ ಗ್ರಾಮದಲ್ಲಿ ಬಡವರ ಸಂಖ್ಯೆಯೇ ಹೆಚ್ಚು. ಪ್ರವಾಸೋದ್ಯಮ ಬೆಳೆದರೆ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂಬ ಆಶಯ ಹೊಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News