ಸರಕಾರಿ ಕಚೇರಿಗಳಲ್ಲಿಯೇ ವಿಶಾಖ ಕಾಯ್ದೆ ಜಾರಿಯಾಗಿಲ್ಲ: ವಿ.ಎಸ್.ಉಗ್ರಪ್ಪ ಬೇಸರ
ಬೆಂಗಳೂರು, ಡಿ.27: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವ ಸಂಬಂಧ ರಚನೆಯಾಗಿರುವ ವಿಶಾಖ ಕಾಯ್ದೆ ಸರಕಾರಿ ಇಲಾಖೆಗಳಲ್ಲಿಯೇ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಹಾಗೂ ಅತ್ಯಾಚಾರ ನಿಯಂತ್ರಣ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಬುಧವಾರ ನಗರದ ಎನ್‌ಜಿಒ ಸಭಾಂಗಣದಲ್ಲಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳ ಮತ್ತು ನೌಕರರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, 10ಮಂದಿ ಕೆಲಸ ಮಾಡುವ ಪ್ರತಿ ಕಚೇರಿಯಲ್ಲಿ ವಿಖಾಸ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚಿಸಬೇಕೆಂಬ ನಿಯಮವಿದೆ. ಆದರೆ, ಸರಕಾರಿ ಇಲಾಖೆಗಳಲ್ಲಿಯೇ ಈ ಸಮಿತಿ ಜಾರಿಯಾಗಿಲ್ಲ. ಇನ್ನು ಖಾಸಗಿ ಕಚೇರಿಗಳಲ್ಲಿ ಇದನ್ನು ನಿರೀಕ್ಷಿಸಲು ಸಾಧ್ಯವೆ ಎಂದು ಪ್ರಶ್ನಿಸಿದರು.
ಸರಕಾರ ಮಹಿಳೆಯರ ರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿ ತರಲಾಗಿದೆ. ಅದನ್ನು ಅನುಷ್ಠಾನಕ್ಕೆ ತರುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ತವ್ಯವಾಗಬೇಕಿತ್ತು. ಆದರೆ, ವಿಶಾಖ ಕಾಯ್ದೆ ಜಾರಿಗೆ ಬಂದು ದಶಕವೇ ಕಳೆದಿದ್ದರೂ ಸರಕಾರಿ ಇಲಾಖೆಗಳಲ್ಲಿಯೇ ಜಾರಿಯಾಗಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಬಳಕೆಯಾಗದ ನಿರ್ಭಯ ನಿಧಿ: ದೆಹಲಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ಸಂಬಂಧ ಅತ್ಯಾಚಾರಕ್ಕೆ ಈಡಾದ ಮಹಿಳೆಯರಿಗಾಗಿ ನಿರ್ಭಯ ನಿಧಿ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಆದರೆ, ಕೇರಳವನ್ನು ಹೊರತು ಪಡಿಸಿ ದೇಶದ ಯಾವುದೇ ರಾಜ್ಯದಲ್ಲಿ ನಿರ್ಭಯ ನಿಧಿ ಬಳಕೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿದಿನ ರಾಜ್ಯದ ವಿವಿಧೆಡೆಯಿಂದ ನಿರ್ಭಯ ನಿಧಿಯ ಬೇಡಿಕೆಗಾಗಿ ಎರಡು ಮೂರು ದೂರವಾಣಿ ಕರೆಗಳು ಬರುತ್ತವೆ. ಅಪ್ರಾಪ್ತ ಯುವತಿ ಅತ್ಯಾಚಾರಕ್ಕೆ ಈಡಾದರೆ ನಿರ್ಭಯ ಯೋಜನೆಯಡಿ ಆಕೆಗೆ ನಾಲ್ಕೂವರೆ ಲಕ್ಷರೂ. ಪರಿಹಾರ ನೀಡಬೇಕು. ಆದರೆ, ರಾಜ್ಯದಲ್ಲಿ ಈ ಯೋಜನೆ ಪರಿಣಾಕಾರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಅವರು ವಿಷಾದಿಸಿದರು.
ಅತ್ಯಾಚಾರಕ್ಕೀಡಾದ ಸಂತ್ರಸ್ಥೆಯ ಭಾವಚಿತ್ರ, ಊರು ಹಾಗೂ ಮನೆಯವರ ವಿವರಗಳನ್ನು ಬಹಿರಂಗ ಪಡಿಸಬಾರದು ಎಂದು ಪೋಕ್ಸೋ ಕಾಯ್ದೆಯಲ್ಲಿ ಸ್ಪಷ್ಟವಾಗಿದೆ. ಆದರೆ, ವಿಜಯಪುರದಲ್ಲಿ ನಡೆದ ದಾನಮ್ಮ ಪ್ರಕರಣ ಸೇರಿದಂತೆ ಹಲವು ಅತ್ಯಾಚಾರ ಪ್ರಕರಣಗಳಲ್ಲಿ ಮಾಧ್ಯಮಗಳು ಸಂತ್ರಸ್ಥೆ ಭಾವಚಿತ್ರ, ಕುಟುಂಬದ ವಿವರಗಳನ್ನು ತೋರಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾಯ್ದೆಯನ್ನು ಉಲ್ಲಂಘಿಸಿದ ಮಾಧ್ಯಮಗಳಿಗೆ ನೋಟಿಸ್ ನೀಡಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ, ನಿವೃತ್ತ ಅಧಿಕಾರಿಗಳಾದ ಜಯರಾಮರಾಜೇ ಅರಸ್, ಗೋನಾಳ್ ಭೀಮಪ್ಪ ಮತ್ತಿತರರಿದ್ದರು.
ರಾಮಾಯಣದ ಸೀತೆಯ ಅಪ್ಪ, ಅಮ್ಮ ಯಾರು. ಆಕೆ ಯಾವ ಜಾತಿಯಲ್ಲಿ ಹುಟ್ಟಿದವಳು ಎಂದು ಇಲ್ಲಿಯವರೆಗೆ ಯಾರಾದರು ಪ್ರಶ್ನಿಸಿದ್ದಾರೆಯೇ. ಆಕೆಯ ಆದರ್ಶವಾದ ಜೀವನಕ್ಕಾಗಿ ಹಿಂದಿನಿಂದಲೂ ಗೌರವಿಸುತ್ತಾ ಬಂದಿದ್ದೇವೆ. ಮುಂದೆಯೂ ಗೌರವಿಸುತ್ತೇವೆ. ವ್ಯಕ್ತಿಯ ಹುಟ್ಟಿಗಿಂತ ಬದುಕುವ ರೀತಿ ಮುಖ್ಯವಾಗುತ್ತದೆ.ಆದರೆ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜಾತ್ಯತೀತ ಚಿಂತನೆಯುಳ್ಳವರಿಗೆ ಅಪ್ಪ-ಅಮ್ಮ ಯಾರಂತ ಗೊತ್ತಿಲ್ಲವೆಂದು ಉದ್ಧಟತನದಿಂದ ಮಾತನಾಡಿದ್ದಾರೆ. ಜಾತ್ಯತೀತರಿಗೆ ಅವರ ಅಪ್ಪ, ಅಮ್ಮ ಯಾರಂತ ಚೆನ್ನಾಗಿ ಗೊತ್ತಿದೆ. ಅದನ್ನು ಸಾಬೀತು ಪಡಿಸುವ ಅಗತ್ಯವಿಲ್ಲ.
-ವಿ.ಎಸ್.ಉಗ್ರಪ್ಪ, ಅಧ್ಯಕ್ಷ, ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ ನಿಯಂತ್ರಣ ಸಮಿತಿ