×
Ad

ಅಂತಾರಾಜ್ಯ ಸುಪಾರಿ ಕಿಲ್ಲರ್ ಸಿಸಿಬಿ ಬಲೆಗೆ

Update: 2017-12-27 22:09 IST

ಬೆಂಗಳೂರು, ಡಿ.27: ಗಂಭೀರ ಪ್ರಕರಣಗಳಲ್ಲಿ ಅಂತರರಾಜ್ಯ ಪೊಲೀಸರಿಗೆ ಬೇಕಿದ್ದ ಸುಪಾರಿ ಕಿಲ್ಲರ್ ದೀಪಕ್ ಯಾನೆ ಟೀನು ಎಂಬಾತನನ್ನು ನಗರದ ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕುಖ್ಯಾತ ಸುಪಾರಿ ಕಿಲ್ಲರ್ ಲಾರೆನ್ಸ್ ಬಿಸ್ನಾಯಿ ಸಹಚರನಾಗಿದ್ದ ದೀಪಕ್, ಬೇರೆ ಬೇರೆ ರಾಜ್ಯಗಳ ಪೊಲೀಸರ ಕೈಗಳಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಆತನ ಆಯಾ ರಾಜ್ಯಗಳ ಪೊಲೀಸರು ನಮ್ಮೊಂದಿಗೆ ಮಾಹಿತಿ ಹಂಚಿಕೆ ಮಾಡಿದ್ದರು. ಆ ಮಾಹಿತಿ ಆಧರಿಸಿಯೇ ನಗರದ ಸಿಟಿ ರೈಲು ನಿಲ್ದಾಣದ ಬಳಿ ಆತನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಜಾಬ್ ರಾಜ್ಯದಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂಬ ಸಂಘಟನೆ ಹುಟ್ಟು ಹಾಕಿದ್ದ ಸುಪಾರಿ ಕಿಲ್ಲರ್ ದೀಪಕ್, ಅದರ ಸದಸ್ಯರ ಜತೆಗೂಡಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಅಲ್ಲದೆ, ಸಂಘಟನೆಯ ಬಹುತೇಕ ಸದಸ್ಯರು ಅಕ್ರಮವಾಗಿ ಬಂದೂಕುಗಳನ್ನು ಇಟ್ಟುಕೊಂಡು ಅಪರಾಧ ಕೃತ್ಯಗಳಿಗೆ ಮುಂದಾಗುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

ಪಂಜಾಬ್, ಹರಿಯಾಣ ಸೇರಿ ನಾಲ್ಕು ರಾಜ್ಯಗಳಲ್ಲಿ ಆರೋಪಿ ದೀಪಕ್ ವಿರುದ್ಧ ಕೊಲೆ ಸೇರಿ 28ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಹರಿಯಾಣ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು ಎನ್ನಲಾಗಿದೆ.

ವೀಡಿಯೊ ಅಪ್ ಲೋಡ್: ಟೀನು ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದಿದ್ದ ದೀಪಕ್, ಕೃತ್ಯ ಎಸಗುವಾಗ ಅದರ ವೀಡಿಯೊ ಚಿತ್ರೀಕರಣ ಮಾಡಿಕೊಂಡು ಬಳಿಕ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.

ಹರಿಯಾಣದ ಅಂಬಾಲ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡ ಆತ, ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಅಪರಾಧ ಕೃತ್ಯ ಎಸಗುತ್ತಿದ್ದ. ದೆಹಲಿಯಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಆತನನ್ನು ನವೆಂಬರ್‌ನಲ್ಲಿ ಬಂಧಿಸಲು ಅಲ್ಲಿನ ಪೊಲೀಸರು ಹೋಗಿದ್ದರು. ಈ ವೇಳೆ ಅವರ ಮೇಲೆಯೇ ಗುಂಡಿನ ದಾಳಿ ನಡೆಸಿದ ದೀಪಕ್ ಅಲ್ಲಿಂದ ಪರಾರಿಯಾಗಿದ್ದ ಎಂಬ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಕರ್ನಾಟಕದಲ್ಲಿ ಆತ ಯಾವುದೇ ಕೃತ್ಯ ಎಸಗಿಲ್ಲ. ಆತ ಸೆರೆ ಸಿಕ್ಕಿರುವ ಬಗ್ಗೆ ಆ ನಾಲ್ಕೂ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅವರು ನಗರಕ್ಕೆ ಬಂದ ಬಳಿಕ ಆತನನ್ನು ಅವರ ವಶಕ್ಕೆ ಒಪ್ಪಿಸಲಾಗುವುದು. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News