×
Ad

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬೇಡಿಕೆಗಳಿಗೆ ಕೇಂದ್ರ ಸರಕಾರದಿಂದ ಸಕಾರಾತ್ಮಕ ಬೆಂಬಲ: ಎಸ್.ಜಿ.ಸಿದ್ದರಾಮಯ್ಯ

Update: 2017-12-28 20:07 IST

ಬೆಂಗಳೂರು, ಡಿ. 28: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸ್ಥಳೀಯರಿಗೆ ಪ್ರಧಾನ ಆದ್ಯತೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಪ್ರಶ್ನೆ ಪತ್ರಿಕೆ, ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸೌಲಭ್ಯಗಳು ನೀಡುವಿಕೆ ಸೇರಿದಂತೆ ಕನ್ನಡ ಜನತೆ ಹಾಗೂ ಭಾಷೆಯ ಉಳಿವಿಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಲ್ಲಿಸಿದ ಹಲವು ಬೇಡಿಕೆಗಳಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ತಿಳಿಸಿದರು.

 ಗುರುವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಪುಸ್ತಕ ಪ್ರಾಧಿಕಾರದ ನಿಯೋಗವು ಕಳೆದ ಮಂಗಳವಾರ ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‌ರನ್ನು ಭೇಟಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಮನವಿ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಜಾವಡೇಕರ್, ಉದ್ಯೋಗದ ವಿಷಯದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೆ ಸ್ಥಳೀಯ ಭಾಷೆ ಹಾಗೂ ಉದ್ಯೋಗದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜಿಎಸ್‌ಟಿ ಕ್ಷೇತ್ರದಲ್ಲಿ ಸಾವಿರಾರು ಹುದ್ದೆಗಳು ಸೃಷ್ಟಿಯಾಗಲಿದೆ. ಆ ಹುದ್ದೆಗಳನ್ನು ಸ್ಥಳೀಯ ಕನ್ನಡ ಭಾಷಿಕರು ಪಡೆಯುವ ನಿಟ್ಟಿನಲ್ಲಿ ಸೂಕ್ತ ತರಬೇತಿ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಜಾರಿ ಆಗಬೇಕಿದೆ. ಇನ್ನು ಬ್ಯಾಂಕ್ ಹಾಗೂ ರಾಷ್ಟ್ರೀಯ ಸಂಸ್ಥೆಗಳಲ್ಲಿಯೂ ಹುದ್ದೆಗಳ ನೇಮಕಾತಿಗೆ ಸ್ಥಳೀಯ ಭಾಷೆಗೆ ಹೆಚ್ಚಿನ ಆದ್ಯತೆ ಸಿಕ್ಕಾಗ ಮಾತ್ರ ಕನ್ನಡಿಗರಿಗೆ ಹುದ್ದೆಗಳು ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.

 ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯಾಗಿ ಶಿಫಾರಸು ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಮನವಿ ಸಲ್ಲಿಸಿದರೆ ಪರವಾನಿಗೆ ನೀಡಲಾಗುವುದು. ಹಾಗೂ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನಕ್ಕೆ ಅಗತ್ಯವಿರುವಷ್ಟು ಅನುದಾನ ಕೊಡಲಾಗವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಹಿರಿಯ ಕವಿ ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.

ನಲಿ-ಕಲಿ ಅವೈಜ್ಞಾನಿಕವಾದದ್ದು

-ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಲಿ-ಕಲಿ ಮೂಲಕ ಶಿಕ್ಷಣ ನೀಡುತ್ತಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ಮಕ್ಕಳು ವ್ಯಾಕರಣವನ್ನು ಕಲಿಯಲು ಸಾಧ್ಯವಾಗುತ್ತಿಲ್ಲ. ಹೈಸ್ಕೂಲ್ ವಿದ್ಯಾರ್ಥಿಗಳು ಕನ್ನಡವನ್ನು ತಪ್ಪು ತಪ್ಪಾಗಿ ಬರೆಯುವಂತಾಗಿದೆ. ಹೀಗಾಗಿ ಹಿಂದೆ ಇದ್ದ ಕಾಗುಣಿತ ಮಾದರಿಯ ಶಿಕ್ಷಣ ಕಲಿಕೆಯನ್ನೇ ಮುಂದುವರೆಸುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು.

-ಪಿಯಸಿ ವಿಜ್ಞಾನ ವಿಭಾಗದ ವಿಷಯಗಳು ಕನ್ನಡದಲ್ಲಿ ಮುದ್ರಣಗೊಳ್ಳುತ್ತಿಲ್ಲ. ವಿಜ್ಞಾನದಲ್ಲಿ ಕನ್ನಡವೇ ಮಾಯವಾಗುವ ಪರಿಸ್ಥಿತಿ ನಿರ್ಮಾಣ ಮಾಡಿರುವುದು ಸರಿಯಲ್ಲ. ಈ ಸಂಬಂಧ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಮುಂದಿನ ಜೂನ್‌ವೊಳಗೆ ವಿಜ್ಞಾನ ವಿಷಯಗಳು ಕನ್ನಡದಲ್ಲೂ ಮುದ್ರಣವಾಗಬೇಕು.

-ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News