ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ರೋಷನ್‌ಬೇಗ್ ಕರೆ
ಬೆಂಗಳೂರು, ಡಿ.28: ವಿದ್ಯಾರ್ಥಿಗಳು ಯಾವಾಗಲೂ ತಮ್ಮಲ್ಲಿ ಸಕಾರಾತ್ಮಕವಾದ ಮನೋಭಾವನೆಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಯಾವುದೇ ಕಾರಣಕ್ಕೂ ಋಣಾತ್ಮಕ ಮನೋಭಾವನೆಗಳಿಗೆ ಆದ್ಯತೆ ನೀಡಬಾರದು ಎಂದು ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್.ರೋಷನ್‌ಬೇಗ್ ಕರೆ ನೀಡಿದರು.
ಗುರುವಾರ ಶಿವಾಜಿನಗರದಲ್ಲಿರುವ ಹಸ್ನತ್ ಪದವಿ ಪೂರ್ವ ಮಹಿಳಾ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ಕಲಾಂ ದೇಶದ ಯುವ ಸಮೂಹಕ್ಕೆ ಕನಸು ಕಾಣಿರಿ ಎಂಬ ಸಂದೇಶವನ್ನು ನೀಡಿದರು. ಕನಸು ಕಂಡಾಗ ಮಾತ್ರ ಅದನ್ನು ನನಸು ಮಾಡಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿನಿಯರು ತಮ್ಮ ದೈನಂದಿನ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ದಿನಪತ್ರಿಕೆಗಳು, ನಿಯತಕಾಲಿಕೆಗಳು, ಮಹಾನ್ ವ್ಯಕ್ತಿಗಳ ಜೀವನಚರಿತ್ರೆಯನ್ನು ಅಧ್ಯಯನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದಾಗಿ, ನಿಮಗೆ ಭವಿಷ್ಯದ ಗುರಿ ಸಾಧಿಸಲು ಸ್ಫೂರ್ತಿ ಸಿಗುತ್ತದೆ ಎಂದು ರೋಷನ್‌ಬೇಗ್ ತಿಳಿಸಿದರು.
ಪದವಿ ಪೂರ್ವ ಶಿಕ್ಷಣವನ್ನು ಪೂರೈಸುತ್ತಿರುವ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಇಲ್ಲಿಗೆ ನಿಲ್ಲಿಸಬಾರದು. ಪದವಿ, ಸ್ನಾತಕೋತ್ತರ ಪದವಿ ಪಡೆಯುವುದರ ಜತೆಗೆ, ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಗಳಿಗೆ ತೆರಳುವ ಗುರಿಯನ್ನು ಇಟ್ಟುಕೊಳ್ಳಬೇಕು. ರಾಜ್ಯ ಸರಕಾರವು ಮುಸ್ಲಿಮರ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಹೇಳಿದರು.
ಹುಟ್ಟುವಾಗ ಯಾರೂ ಇಂತಹದೆ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿರುವುದಿಲ್ಲ. ದೈವೇಚ್ಛೆಯಂತೆ ನಾವು ಒಂದು ನಿರ್ದಿಷ್ಟ ಧರ್ಮದ ಅನುಯಾಯಿಯಾಗಿ ಜನ್ಮ ಪಡೆದಿದ್ದೇವೆ. ಆದುದರಿಂದ, ವಿದ್ಯಾರ್ಥಿಗಳು ಸರ್ವಧರ್ಮಗಳಿಗೂ ಗೌರವ ನೀಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ರೋಷನ್ ಬೇಗ್ ತಿಳಿಸಿದರು.
ನಾನು ಉರ್ದು ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದೆ. ಪ್ರೌಢ ಶಾಲೆಗೆ ಹೋದಾಗ ನನಗೆ ಸರಿಯಾಗಿ ಆಂಗ್ಲ ಭಾಷೆಯನ್ನು ಬಳಸಲು ಬರುತ್ತಿರಲಿಲ್ಲ. ನಮ್ಮ ವಿದ್ಯಾರ್ಥಿದೆಸೆಯಲ್ಲಿ ಮಾಹಿತಿಗಾಗಿ ಗ್ರಂಥಾಲಯಗಳಿಗೆ ಹೋಗಿ ಹುಡುಕಾಡುತ್ತಿದ್ದೆವು. ಆದರೆ, ಈಗ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಬೆರಳತುದಿಯಲ್ಲಿ ಮಾಹಿತಿ ಲಭ್ಯವಾಗುತ್ತದೆ ಎಂದು ಅವರು ಹೇಳಿದರು.
ಬಡ ಕುಟುಂಬದ ಹಿನ್ನೆಲೆಯುಳ್ಳ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕವಾಗಿ ಬೆಳೆಯಲು ಪ್ರೋತ್ಸಾಹ ನೀಡುತ್ತಿರುವ ಹಸ್ನತ್ ಕಾಲೇಜಿನ ಜತೆಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಈ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಕವಿ ಸಮ್ಮೇಳನ, ವಿಚಾರಗೋಷ್ಠಿಗಳನ್ನು ಆಯೋಜಿಸಿದೆವು. ಅಲ್ಲದೆ, ಈ ಕಾರ್ಯಕ್ರಮಕ್ಕೆ ಜನರನ್ನು ಆಕರ್ಷಿಸಲು ಇಡೀ ನಗರದಲ್ಲಿ ಅಹೋರಾತ್ರಿ ಭಿತ್ತಿಪತ್ರಗಳನ್ನು ಗೋಡೆಗಳ ಮೇಲೆ ಅಂಟಿಸಿದ್ದೇನೆ ಎಂದು ಅವರು ಸ್ಮರಿಸಿಕೊಂಡರು. ನಾಲ್ಕೈದು ವರ್ಷಗಳ ಸತತ ಪ್ರಯತ್ನದಿಂದಾಗಿ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಆವರಣದಲ್ಲಿ 225 ಕೋಟಿ ರೂ.ವೆಚ್ಚದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗುತ್ತಿದೆ. ಸಮೀಪದ ಬಸ್‌ನಿಲ್ದಾಣ ಬಳಿ ಮೆಟ್ರೋ ನಿಲ್ದಾಣವು ತಲೆ ಎತ್ತಲಿದೆ. ಇದರಿಂದಾಗಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೋಷನ್‌ಬೇಗ್ ತಿಳಿಸಿದರು.
ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಸ್ನತ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಯೂನುಸ್ ಮುಹಮ್ಮದ್ ಸೇಠ್, ಕಾರ್ಯದರ್ಶಿ ಎ.ವಹಾಬ್‌ಖಾನ್, ಉಪಾಧ್ಯಕ್ಷ ಸಯೀದ್ ಮುನವ್ವರ್, ಖಜಾಂಚಿ ಹಾಜಿ ಸುಲೇಮಾನ್ ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.