ಪುನೀತ್ ರಾಜ್‌ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರ ಸ್ಥಗಿತಕ್ಕೆ ಕೋರ್ಟ್ ಆದೇಶ
ಬೆಂಗಳೂರು, ಡಿ.28: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕನ್ನಡದ ಬಿಗ್ ಬಜೆಟ್ ಸಿನಿಮಾ ಅಂಜನಿಪುತ್ರ ಚಿತ್ರ ಪ್ರದರ್ಶನ ಸ್ಥಗಿತಕ್ಕೆ ನಗರದ ಸಿಟಿ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.
ವಕೀಲರ ವಿರುದ್ಧ ಅವಹೇಳನಕಾರಿ ಸಂಭಾಷಣೆ ಇರುವುದನ್ನು ಪ್ರಶ್ನಿಸಿ ನಾರಾಯಣಸ್ವಾಮಿ, ವಿಜಯ್ ಕುಮಾರ್ ಸೇರಿ ಐವರು ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕಳೆದ ವಿಚಾರಣೆ ವೇಳೆಯೇ ನ್ಯಾಯಾಲಯ ಚಿತ್ರದ ಪ್ರದರ್ಶನ ಸ್ಥಗಿತಕ್ಕೆ ಸೂಚನೆ ನೀಡಿತ್ತು. ಆದರೂ ನಿರ್ಮಾಪಕರು ಹಾಗೂ ಪ್ರದರ್ಶಕರು ಚಿತ್ರ ಪ್ರದರ್ಶನ ಮುಂದುವರೆಸಿದ್ದಾರೆ. ಹೀಗಾಗಿ, ಕೂಡಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮೂಲಕ ರಾಜ್ಯಾದ್ಯಂತ ಚಿತ್ರ ಪ್ರದರ್ಶನ ಸ್ಥಗಿತಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಾಲಯ, ಮುಂದಿನ ಶೋನಿಂದಲೇ ಅನ್ವಯವಾಗುವಂತೆ ಚಿತ್ರ ಪ್ರದರ್ಶನ ಸ್ಥಗಿತಕ್ಕೆ ಕ್ರಮ ಕೈಗೊಳ್ಳಿ ಎಂದು ಡಿಜಿ, ಐಜಿಗೆ ಸೂಚನೆ ನೀಡಿ ಮಧ್ಯಂತರ ಆದೇಶ ನೀಡಿತು.
‘ಸೆನ್ಸಾರ್ ಮಂಡಳಿಯಿಂದ ಹೊಸ ಪ್ರಮಾಣ ಪತ್ರ ಪಡೆದಿದ್ದು, ಅವಹೇಳನಕಾರಿ ಡೈಲಾಗನ್ನು ತೆಗೆದ ಬಳಿಕ ಅಂಜನಿಪುತ್ರ ಚಿತ್ರವನ್ನು ಪ್ರದರ್ಶಿಸಲಾಗುವುದು. ಶುಕ್ರವಾರ ನಗರದ ಸಿಟಿ ಸಿವಿಲ್ ಕೋರ್ಟ್‌ಗೆ ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು.’
-ಜ್ಯಾಕ್ ಮಂಜು, ಚಿತ್ರದ ವಿತರಕ