×
Ad

ಉಪೇಂದ್ರ ಜೀವನ ಕೃತಿರೂಪಕ್ಕೆ ತರಲು 16ವರ್ಷ ಬೇಕಾಯಿತು: ಸದಾಶಿವ ಶೆಣೈ

Update: 2017-12-28 21:39 IST

 ಬೆಂಗಳೂರು, ಡಿ.28: ನಟ ಉಪೇಂದ್ರ ಜೀವನವನ್ನು ಪುಸ್ತಕ ರೂಪಕ್ಕೆ ತರಲು ಸುಮಾರು 16ವರ್ಷ ತೆಗೆದುಕೊಂಡಿದ್ದೇನೆ. ಇದಕ್ಕೆ ನಾನು ವ್ಯಯಿಸಿದ ತಾಳ್ಮೆ, ತ್ಯಾಗ ಅವಿಸ್ಮರಣೀಯವೆಂದು ಕೃತಿಕಾರ ಹಾಗೂ ಪೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ತಿಳಿಸಿದ್ದಾರೆ.

ಗುರುವಾರ ಗಾಂಧಿ ಭವನದಲ್ಲಿ ನಟ ಉಪೇಂದ್ರರ ಜೀವನಾಧಾರಿತ ‘ಉಪ್ಪಿ ಅನ್‌ಲಿಮಿಟೆಡ್’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 16ವರ್ಷದ ಹಿಂದೆ ಉಪೇಂದ್ರರ ಬಾಲ್ಯದ ಬದುಕನ್ನು ಸಂಗ್ರಹಿಸಿ ಬರೆಯಲು ಪ್ರಾರಂಭಿಸಿದೆ. ಆದರೆ, ಅನೇಕ ತಾಪತ್ರಯಗಳ ನಡುವೆ ಈಗ ಕೃತಿ ಮುಕ್ತಾಯಗೊಂಡು, ಬಿಡುಗಡೆಯಾಗುತ್ತಿದೆ. ಇದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲೊಂದು ಎಂದು ಸಂತಸ ಪಟ್ಟರು.

ಬೆಳಗ್ಗೆ 5ಗಂಟೆಗೆ ಉಪೇಂದ್ರ ಮನೆಗೆ ಹೋಗಿ ಅವರೊಂದಿಗೆ ಮಾತನಾಡಿ, ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಿ ಬರುತ್ತಿದ್ದೆ. ಈ ಪುಸ್ತಕದಲ್ಲಿ ಅವರ ಬಾಲ್ಯ, ವಿದ್ಯಾಭ್ಯಾಸ, ಸಿನೆಮಾ ಕ್ಷೇತ್ರಕ್ಕೆ ಬರಲು ಪ್ರೇರಣೆ. ಇಲ್ಲಿಂದ ಬಂದ ಮೇಲೆ ಅವರು ಪಟ್ಟ ಕಷ್ಟ ಸುಖಗಳನ್ನು ಸವಿವರವಾಗಿ ಕಟ್ಟಿಕೊಟ್ಟಿದ್ದೇನೆ. ಒಬ್ಬ ಸಾಧಕನ ಖಾಸಗಿ ಬದುಕು ಹೇಗಿತ್ತು ಎಂಬುದನ್ನು ತಿಳಿಯಲು ಬಯಸುವವರಿಗೆ ಉಪಯುಕ್ತ ಕೃತಿ ಇದಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಖ್ಯಾತನಾಮರ ಆತ್ಮಚರಿತ್ರೆಯನ್ನು ಬರೆಯಲು ಎಲ್ಲರಿಂದಲೂ ಸಾಧ್ಯವಿಲ್ಲ. ಪ್ರಸಿದ್ಧ ವ್ಯಕ್ತಿಗಳು ತಮ್ಮ ವೈಯಕ್ತಿಕ ಜೀವನವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ, ಆ ವಿಷಯಗಳನ್ನೆಲ್ಲಾ ಅವರಾಗಿಯೇ ಹೇಳುವಂತೆ ಮಾಡುವ ಜಾಣ್ಮೆ ಬರಹಗಾರನಿಗಿರಬೇಕು. ಆಗ ಮಾತ್ರ ಕೃತಿ ಯಶಸ್ವಿಯಾಗಲು ಸಾಧ್ಯವೆಂದು ತಿಳಿಸಿದರು.

 ನಟ ಉಪೇಂದ್ರ ಮಾತನಾಡಿ, ‘ಉಪ್ಪಿ ಅನ್‌ಲಿಮಿಟೆಡ್’ ನನ್ನ ಕುರಿತು ಕೃತಿಯಾಗಿದ್ದರೂ, ಹೇಗೆ ಮೂಡಿ ಬಂದಿದೆ, ಜನತೆ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ಆದರೆ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವುದು ಸಂತಸ ತಂದಿದೆ ಎಂದು ಅಭಿಮಾನಪಟ್ಟರು.

ಈ ವೇಳೆ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್, ಹಿರಿಯ ಪತ್ರಕರ್ತ ಜೋಗಿ, ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಎಚ್.ಬಿ.ದಿನೇಶ್, ಹಿರಿಯ ನಿರ್ದೇಶಕ ಟಿ.ಎನ್.ಸೀತಾರಾಮ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News