ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಅಮಿತ್ ಶಾ ಫಲಿತಾಂಶದೊಂದಿಗೆ ರಾಜ್ಯಕ್ಕೆ ಬರಲಿ: ಕೋನರೆಡ್ಡಿ
ಬೆಂಗಳೂರು, ಡಿ. 28: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬರುವಾಗ ಮಹಾದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಫಲಿತಾಂಶದೊಂದಿಗೆ ಬರಲಿ ಎಂದು ಜೆಡಿಎಸ್ ಶಾಸಕ ಕೋನರೆಡ್ಡಿ ಆಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿವಾದ ಇತ್ಯರ್ಥಪಡಿಸುವ ಸಂಬಂಧ ಹೊಸದಿಲ್ಲಿಯ ಅಮಿತ್ ಶಾ ನಿವಾಸದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಸಮ್ಮುಖದಲ್ಲಿ ಸಭೆ ನಡೆದಿದೆ ಎಂದರು.
ರಾಜ್ಯಕ್ಕೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಹಾದಾಯಿ ನದಿಯಿಂದ 7.56 ಟಿಎಂಸಿ ನೀರು ಕೊಡಿಸುವ ಸಂಬಂಧ ಮನೋಹರ್ ಪಾರಿಕ್ಕರ್ ಜತೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದುದರಿಂದ, ಅಮಿತ್ ಶಾ ರಾಜ್ಯಕ್ಕೆ ಬರುವಾಗ ಮಹಾದಾಯಿ ವಿವಾದ ಫಲಿತಾಂಶವನ್ನು ತರಬೇಕು ಎಂದು ಕೋನರೆಡ್ಡಿ ಆಗ್ರಹಿಸಿದರು.
ನಮ್ಮ ಭಾಗದ ಜನರಿಗೆ ಕುಡಿಯುವ ನೀರು ಬೇಕು. ಹೇಗಾದರೂ ಮಾಡಿ ಪ್ರಧಾನಿ ನರೇಂದ್ರಮೋದಿಯನ್ನು ಒಪ್ಪಿಸಿ ಮಹಾದಾಯಿ ನೀರು ತರಬೇಕಿದೆ. ಆದುದರಿಂದ, ಪ್ರಧಾನಿಯನ್ನು ಯಾವುದೇ ಕಾರಣಕ್ಕೂ ಟೀಕೆ ಮಾಡದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪಕ್ಷದ ಎಲ್ಲ ಶಾಸಕರಿಗೆ ಸ್ಪಷ್ಟ ಸೂಚನೆ ನಿೀಡಿದ್ದಾರೆ ಎಂದು ಅವರು ಹೇಳಿದರು.
ಮಹಾದಾಯಿ ನ್ಯಾಯಾಧೀಕರಣದ ಎದುರು ಗೋವಾ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲ ಆತ್ಮಾನಂದನಾಡಕರಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೋನರೆಡ್ಡಿ, ನಮ್ಮ ರಾಜ್ಯಕ್ಕೆ ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಲು ಅವರು ಯಾರು? ಅವರ ಹೇಳಿಕೆಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು.
ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಬರೆದಿರುವ ಪತ್ರವನ್ನು ಬಿಜೆಪಿ ಸಮಾವೇಶದಲ್ಲಿ ಓದಲಾಗಿದೆ. ಇದೇ ನಮಗೆ ಮಾರಕವಾಗಬಹುದೇನೋ ಎಂಬ ಆತಂಕ ಕಾಡುತ್ತಿದೆ. ತಾಯಿ ಸ್ಥಾನದಲ್ಲಿರುವ ಪ್ರಧಾನಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕೋನರೆಡ್ಡಿ ಮನವಿ ಮಾಡಿದರು.