ಸಚಿವ ತನ್ವೀರ್ ಸೇಠ್‌ಗೆ ಬಸವರಾಜ ಹೊರಟ್ಟಿ ಪತ್ರ
ಬೆಂಗಳೂರು, ಡಿ.28: ಗುತ್ತಿಗೆ ಆಧಾರದ ಮೇಲೆ ನೇಮಕವಾದ ಶಿಕ್ಷಕರಿಗೆ, ಉಪನ್ಯಾಸಕರಿಗೆ ನಿಗದಿಪಡಿಸಿದ ವೇತನವನ್ನು ಹಿಂಪಡೆಯುವ ಬಗ್ಗೆ ತಜ್ಞರ ಸಮಿತಿಯು ಸರಕಾರಕ್ಕೆ ವರದಿ ನೀಡುವವರೆಗೆ ಅಧಿಕಾರಿಗಳು ಸುತ್ತೋಲೆಗಳನ್ನು ಹೊರಡಿಸದಂತೆ ಆದೇಶಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸಚಿವ ನ್ವೀರ್ ಸೇಠ್‌ಗೆ ಪತ್ರ ಬರೆದಿದ್ದಾರೆ.
1999ರಲ್ಲಿ ಅಧಿಕಾರಕ್ಕೆ ಬಂದ ಸರಕಾರವು ಉಪನಿಯಮ 4(1)ಕ್ಕೆ ತಿದ್ದುಪಡಿ ತಂದು ಅದರನ್ವಯ 1974 ರಿಂದ 1987ರಲ್ಲಿ ಗುತ್ತಿಗೆ ಆಧಾರದ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸಿದ ದಿನಾಂಕಕ್ಕೆ ವೇತನ ಶ್ರೇಣಿಯ ಕನಿಷ್ಠ ವೇತನವನ್ನು ನಿಗದಿಪಡಿಸುವಂತೆ ಆದೇಶಿಸಲಾಯಿತು. ನಂತರ ಸರಕಾರವು ಈ ತಿದು್ದಪಡಿ ಆದೇಶವನ್ನು ತಡೆ ಹಿಡಿದಿತ್ತು.
2008ರನ್ವಯ ಮತ್ತೆ ವಿವಿಧ ವೃಂದದ ಶಿಕ್ಷಕರ ಹಾಗೂ ಉಪನ್ಯಾಸಕರ ವೇತನ ಪುನರ್ ನಿಗದಿಪಡಿಸುವ ಬಗ್ಗೆ ಸರಕಾರ ಚಾಲನೆ ನೀಡಿತ್ತು. ಆಗ ಮತ್ತೆ ಸರಕಾರ ಈ ಆದೇಶ ತಡೆ ಹಿಡಿದಿತ್ತು.
ಬೇರೆ ಇಲಾಖೆಗಳ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಿರುವುದನ್ನೆ ಆಧಾರವಾಗಿಟ್ಟುಕೊಂಡು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರ ಅಧ್ಯಕ್ಷತೆಯ ಸಮಿತಿಯು ವರದಿ ನೀಡುವವರೆಗೆ ಅಧಿಕಾರಿಗಳು ಹೊರಡಿಸುವ ಸುತ್ತೋಲೆಗಳನ್ನು ತಡೆ ಹಿಡಿಯಬೇಕೆಂದು ಸಚಿವ ತನ್ವೀರ್ ಸೇಠ್‌ಗೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಮನವಿ ಪತ್ರ ಬರೆದಿದ್ದಾರೆ.