ದಿಲ್ಲಿ ವಿರುದ್ಧ ಮೊದಲ ಬಾರಿ ಪ್ರಶಸ್ತಿ ಗೆಲ್ಲಲು ವಿದರ್ಭ ಸೆಣಸು

Update: 2017-12-28 18:32 GMT

ಇಂದೋರ್, ಡಿ.28: ಮೊದಲ ಬಾರಿ ರಣಜಿ ಟ್ರೋಫಿ ಫೈನಲ್ ತಲುಪಿರುವ ವಿದರ್ಭ ತಂಡ ಶುಕ್ರವಾರ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ದಿಲ್ಲಿ ತಂಡವನ್ನು ಎದುರಿಸಲಿದೆ.

ಕೋಲ್ಕತಾದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡದ ವಿರುದ್ಧ ವಿದರ್ಭ ತಂಡ 5 ರನ್‌ಗಳ ರೋಚಕ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು. ದಿಲ್ಲಿ ತಂಡ ಪುಣೆಯಲ್ಲಿ ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ಬಂಗಾಳ ವಿರುದ್ಧ ಇನಿಂಗ್ಸ್ ಹಾಗೂ 26 ರನ್‌ಗಳ ಜಯ ಗಳಿಸಿತ್ತು. ಅದೃಷ್ಟದ ಮೂಲಕ ವಿದರ್ಭ ಫೈನಲ್ ತಲುಪಿದೆ.

ವಿದರ್ಭ ತಂಡ ಕಳೆದ ಐದು ದಶಕಗಳ ಅವಧಿಯಲ್ಲಿ ರಣಜಿ ಟ್ರೋಫಿಯಲ್ಲಿ 266 ಪಂದ್ಯಗಳನ್ನು ಆಡಿದೆ. ಆದರೆ ಈ ವರೆಗೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ದಿಲ್ಲಿ 8 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.

    ವಿದರ್ಭ ಈ ತನಕ ದಿಲ್ಲಿ ವಿರುದ್ಧ 5 ಪಂದ್ಯಗಳಲ್ಲಿ ಆಡಿದ್ದು, ಕೇವಲ 1 ಪಂದ್ಯದಲ್ಲಿ ಜಯ ಗಳಿಸಿದೆ. ವಿದರ್ಭ 2014-15 ಮತ್ತು 2015-16ರಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು. ಈ ಬಾರಿ ಮೊದಲ ಬಾರಿ ಸೆಮಿಫೈನಲ್ ತಲುಪಿತ್ತು. ಇದೀಗ ಪ್ರಶಸ್ತಿ ಗಾಗಿ ಸೆಣಸಾಡಲು ತಯಾರಾಗಿದೆ.

 ಕರ್ನಾಟಕದ ವಿರುದ್ಧ ಸೆಮಿಫೈನಲ್‌ನಲ್ಲಿ ವಿದರ್ಭ ತಂಡ ಮೊದಲ ಇನಿಂಗ್ಸ್‌ನಲ್ಲಿ 116 ರನ್‌ಗಳ ಹಿನ್ನಡೆ ಸಾಧಿಸಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ 313 ರನ್ ಗಳಿಸುವ ಮೂಲಕ ಕರ್ನಾಟಕ ತಂಡಕ್ಕೆ 198 ರನ್‌ಗಳ ಗೆಲುವಿನ ಸವಾಲು ವಿಧಿಸಿತ್ತು. ಆದರೆ ಕರ್ನಾಟಕ ತಂಡ 192ಕ್ಕೆ ಆಲೌಟಾಗಿ ಸೋಲೊಪ್ಪಿಕೊಂಡಿತು.

ಯುವ ಮಧ್ಯಮ ವೇಗಿ ರಜನೀಶ್ ಗುರ್ಬಾನಿ ಅವರ ಶಿಸ್ತಿನ ಪ್ರಹಾರದ ನೆರವಿನಲ್ಲಿ ಕರ್ನಾಟಕ ತಂಡವನ್ನು ಕಡಿಮೆ ಮೊತ್ತಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಕಟ್ಟಿ ಹಾಕಿತ್ತು. ರಜನೀಶ್ ಒಟ್ಟು 12 ವಿಕೆಟ್ ಪಡೆದು ಮಿಂಚಿದ್ದರು. ಅವರು ಮೊದಲ ಇನಿಂಗ್ಸ್‌ನಲ್ಲಿ 94ಕ್ಕೆ 5 ವಿಕೆಟ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 68ಕ್ಕೆ 7 ವಿಕೆಟ್ ಉಡಾಯಿಸಿ ಕರ್ನಾಟಕದ ಫೈನಲ್ ಕನಸನ್ನು ಮಣ್ಣುಗೂಡಿಸಿದ್ದರು.ಇದು ಅವರ ಜೀವನ ಶ್ರೇಷ್ಠ ಪ್ರದರ್ಶನವಾಗಿತ್ತು.

ರಜನೀಶ್ ಅವರು ಈ ತನಕ 9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.44 ವಿಕೆಟ್‌ಗಳನ್ನು ಜಮೆ ಮಾಡಿದ್ದಾರೆ. ವಿದರ್ಭವನ್ನು ಫೈನಲ್ ತಲುಪಿಸುವಲ್ಲಿ ನಾಯಕ ಫೈರ್ಿ ಫಝಲ್, ಸಂಜಯ್ ರಂಗಸ್ವಾಮಿ, ಗಣೇಶ್ ಸತೀಶ್ ಮತ್ತು ರಜನೀಶ್ ಗುರ್ಬಾನಿ ನೆರವಾಗಿದ್ದಾರೆ.

ದಿಲ್ಲಿ ತಂಡದಂತೆ ವಿದರ್ಭ ತಂಡ ಅಜೇಯ ಗೆಲುವಿನ ಓಟದೊಂದಿಗೆ ಫೈನಲ್ ತಲುಪಿದೆ. ಗೌತಮ್ ಗಂಭೀರ್ , ಕುನಾಲ್ ಚಾಂಡೆಲಾ ಅವರು ದಿಲ್ಲಿ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ.

ದಿಲ್ಲಿ ತಂಡವನ್ನು ರಿಷಬ್ ಪಂತ್ ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ವಿದರ್ಭ ತಂಡಕ್ಕೆ ಫೈಝ್ ಫಝಲ್ ನಾಯಕರಾಗಿದ್ದಾರೆ. ರಿಷಬ್ ಅವರು ಭಾರತದ ಟ್ವೆಂಟಿ-20 ತಂಡದಲ್ಲಿ ಈ ವರ್ಷ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಅವರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ವರ್ಷದ ಸಾಧನೆ ತೃಪ್ತಿಕರವಾಗಿಲ್ಲ. ಅವರು 7 ಇನಿಂಗ್ಸ್‌ಗಳಲ್ಲಿ 262 ರನ್ ಗಳಿಸಿದ್ದಾರೆ.

►ಟೀಮ್ ಇಂಡಿಯಾ : ದಿಲ್ಲಿ ತಂಡದ ವೇಗಿ ವಿಕಾಸ್ ಟೋಕಸ್ ಕಳೆದ ವಾರ ಸೆಮಿಫೈನಲ್‌ನಲ್ಲಿ ಗಾಯಗೊಂಡಿದ್ದರು. ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.ಈ ಕಾರಣದಿಂದಾಗಿ ಅವರು ಆಡುವುದು ಸಂಶಯ.

ಆಕಾಶ್ ಸುದಾನ್ ಕೇವಲ 1 ಪಂದ್ಯದಲ್ಲಿ ಆಡಿದ್ದರು. ಟೋಕಸ್ ಲಭ್ಯವಾಗದಿದ್ದರೆ ಆಕಾಶ್‌ಗೆ ಅವಕಾಶ ಸಿಗಲಿದೆ.

ಸಂಭಾವ್ಯ ತಂಡ

►ದಿಲ್ಲಿ : ರಿಷಬ್ ಪಂತ್(ನಾಯಕ/ವಿಕೆಟ್ ಕೀಪರ್), ಗೌತಮ್ ಗಂಭೀರ್, ಕುನಾಲ್ ಚಾಂಡೆಲಾ, ಧ್ರುವ್ ಶುರೈ, ನಿತೀಶ್ ರಾಣಾ, ಹಿಮ್ಮತ್ ಸಿಂಗ್, ಮನನ್ ಶರ್ಮಾ, ವಿಕಾಸ್ ಟೋಕಸ್/ಆಕಾಶ್ ಸುದಾನ್, ನವ್‌ದೀಪ್ ಸೈನಿ, ವಿಕಾಸ್ ಮಿಶ್ರಾ, ಕುಲ್ವಂತ್ ಖೆಜ್ರೊಲಿಯಾ.

►ವಿದರ್ಭ : ಫೈಝ್ ಫಝಲ್(ನಾಯಕ), ಸಂಜಯ್ ರಂಗಸ್ವಾಮಿ, ವಾಸೀಮ್ ಜಾಫರ್, ಗಣೇಶ್ ಸತೀಶ್, ಅಪೂರ್ವ ವಾಂಖೆಡೆ, ಆದಿತ್ಯ ಸರ್ವಾಟೆ, ಅಕ್ಷಯ್ ವಾಡ್ಕರ್(ವಿಕೆಟ್ ಕೀಪರ್),ಅಕ್ಷಯ್ ವಾಖರೆ, ರಜನೀಶ್ ಗುರ್ಬಾನಿ, ಸಿದ್ದೇಶ್ ನೆರಾಲ್ ಮತ್ತು ಆದಿತ್ಯ ಥಾಕರೆ.

ಪಂದ್ಯದ ಸಮಯ: ಬೆಳಗ್ಗೆ 9:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News