ರಾಜಕೀಯ ಚದುರಂಗದಾಟಕ್ಕೆ ಜಾಧವ್ ಬಲಿಯಾಗದಿರಲಿ

Update: 2017-12-29 03:54 GMT

ಅನೇಕ ಸಂದರ್ಭಗಳಲ್ಲಿ ಉಭಯ ದೇಶಗಳ ಎರಡು ಸರಕಾರಗಳ ನಡುವಿನ ರಾಜಕೀಯ ಚದುರಂಗದಾಟಕ್ಕೆ ಹಲವು ಅಮಾಯಕರು ಬಲಿಯಾಗಬೇಕಾಗುತ್ತದೆ. ದೇಶದ ಅಗತ್ಯಕ್ಕಾಗಿಯೇ ಯುದ್ಧ ನಡೆಯಬೇಕಾಗಿಲ್ಲ. ಕೆಲವೊಮ್ಮೆ ದೇಶವನ್ನು ಆಳುವವರ ಅಗತ್ಯಕ್ಕಾಗಿಯೂ ಯುದ್ಧ ನಡೆಯಬಹುದು. ಎರಡು ದೇಶಗಳ ನಡುವಿನ ಶತ್ರುತ್ವ ಶಾಶ್ವತವಾಗಿ ಉಳಿಯುವುದು ಜನರಿಗೆ ಇಷ್ಟವಿಲ್ಲದೇ ಇದ್ದರೂ, ರಾಜಕಾರಣಿಗಳಿಗೆ ಅಗತ್ಯವಿರುತ್ತದೆ. ಭಾರತ-ಪಾಕಿಸ್ತಾನ ನಡುವಿನ ಶತ್ರುತ್ವವನ್ನೇ ಇದಕ್ಕೆ ನಾವು ಉದಾಹರಣೆಯಾಗಿ ನೀಡಬಹುದು. ಪಾಕಿಸ್ತಾನವನ್ನು ತೋರಿಸಿ ಭಾರತೀಯ ರಾಜಕಾರಣಿಗಳು, ಹಾಗೆಯೇ ಭಾರತವನ್ನು ತೋರಿಸಿ ಪಾಕಿಸ್ತಾನದ ರಾಜಕಾರಣಿಗಳು ಹಲವು ದಶಕಗಳಿಂದ ತಮ್ಮ ತಮ್ಮ ದೇಶಗಳಲ್ಲಿ ಅಧಿಕಾರ ಅನುಭವಿಸುತ್ತಾ ಬಂದಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಪದೇ ಪದೇ ಪಾಕಿಸ್ತಾನವನ್ನು ಬೆಟ್ಟು ಮಾಡುತ್ತಿದ್ದರು. ದೇಶದ ಸೈನಿಕರ ರುಂಡ ಕತ್ತರಿಸಿದ ಪ್ರಕರಣವನ್ನು ಮುಂದಿಟ್ಟು ಅವರು ಮತಯಾಚಿಸಿದ್ದರು. ಮೋದಿಯವರು ಅಧಿಕಾರಕ್ಕೆ ಬಂದರೆ, ಪಾಕಿಸ್ತಾನಕ್ಕೆ ತಕ್ಕ ಪಾಠವಾಗುತ್ತದೆ ಎಂದು ಮತ ನೀಡಿದ ಅಮಾಯಕರು ದೊಡ್ಡ ಪ್ರಮಾಣದಲ್ಲಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಮರು ಕ್ಷಣವೇ ಪಾಕಿಸ್ತಾನದೊಂದಿಗಿನ ತನ್ನ ನಿಲುವನ್ನು ಬದಲಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿಗೂ ಭರ್ಜರಿ ಆಹ್ವಾನ ದೊರಕಿತು.

ಇದಾದ ಕೆಲ ಸಮಯದ ಬಳಿಕ, ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಪ್ರಧಾನಿ ನವಾಝ್ ಶರೀಫ್ ಕುಟುಂಬದ ಮದುವೆಯಲ್ಲಿ ಬಿರಿಯಾನಿ ಉಂಡು ಬಂದರು. ಇದೀಗ ಮತ್ತೆ ಚುನಾವಣೆ ಹತ್ತಿರ ಬಂದಿದೆ. ಗುಜರಾತ್‌ನಲ್ಲಿ ಮತ್ತೆ ‘ಪಾಕಿಸ್ತಾನ’ದ ಹೆಸರು ಪ್ರಸ್ತಾಪವಾಗಿದೆ. ಜೊತೆಗೆ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿರುವುದು ಮತ್ತು ಮತ್ತೆ ಮೋದಿ ನೇತೃತ್ವದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿರುವುದು ಕಾಕತಾಳೀಯ ಎನ್ನುವಂತಿಲ್ಲ. ಸಂಘಪರಿವಾರದ ಪಾಲಿಗೂ ಪಾಕಿಸ್ತಾನ ಶತ್ರು ರಾಷ್ಟ್ರವಾಗಿ ಉಳಿದಷ್ಟೂ ತನ್ನ ದ್ವೇಷ ಸಿದ್ಧಾಂತವನ್ನು ಹರಡಲು ಸುಲಭ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉಭಯ ರಾಷ್ಟ್ರಗಳ ನಡುವೆ ಸ್ನೇಹದ ರೈಲೊಂದನ್ನು ಓಡಿಸಿದಾಗ, ಸಂಘಪರಿವಾರದ ಉಗ್ರರು ಅದನ್ನು ಸ್ಫೋಟಿಸಿ ಅವರ ಕನಸನ್ನು ಭಗ್ನಗೊಳಿಸಿದ್ದು ಇತಿಹಾಸ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಗಂತೂ ಭಾರತ ಶತ್ರು ರಾಷ್ಟ್ರವಾಗಿಯೇ ಉಳಿಯಬೇಕು. ಅಲ್ಲಿಯ ಪ್ರಜಾಸತ್ತಾತ್ಮಕ ಸರಕಾರ ಭಾರತ ಜೊತೆಗೆ ಸ್ನೇಹವನ್ನು ಬೆಳೆಸಲು ಸಣ್ಣ ಪ್ರಯತ್ನ ನಡೆಸಿದರೂ ಅದನ್ನು ಪಾಕಿಸ್ತಾನ ಸೇನೆ ಭಗ್ನಗೊಳಿಸುತ್ತದೆ. ಪಾಕಿಸ್ತಾನದ ಚುಕ್ಕಾಣಿ ಅಂತಿಮವಾಗಿ ತನ್ನ ಕೈಯಲ್ಲೇ ಉಳಿಯಬೇಕಾದರೆ ಅಲ್ಲಿನ ಸೇನೆಗೆ ಭಾರತವೆನ್ನುವ ‘ಗುಮ್ಮ’ ಅತ್ಯಗತ್ಯ. ಇವರ ರಾಜಕಾರಣಕ್ಕಾಗಿ ಬಲಿಯಾದ ಸೈನಿಕರ ಸಂಖ್ಯೆ, ನಾಗರಿಕ ಸಂಖ್ಯೆಗಳಿಗೆ ಲೆಕ್ಕವಿಲ್ಲ. ಇದೀಗ ಆ ಸಾಲಲ್ಲಿ ತಲೆಕೊಟ್ಟು ನಿಂತ ಇನ್ನೊಂದು ಹೆಸರು ಕುಲಭೂಷಣ್ ಜಾಧವ್.

ನಮ್ಮ ದೇಶದ ಸೈನಿಕರಲ್ಲಿ ಹಲವರು ಪಾಕಿಸ್ತಾನದ ವಶದಲ್ಲಿದ್ದಾರೆ. ಹಾಗೆಯೇ ಪಾಕಿಸ್ತಾನದ ಹಲವು ಬಂಧಿತ ಕೈದಿಗಳು ನಮ್ಮ ದೇಶದಲ್ಲೂ ಇದ್ದಾರೆ. ಪಾಕಿಸ್ತಾನದ ಸೈನಿಕರು ದುಷ್ಟರು, ನಮ್ಮ ಸೈನಿಕರು ಯೋಧರು ಎನ್ನುವುದನ್ನು ನಾವು ನಮ್ಮ ದೇಶದ ಕಣ್ಣಲ್ಲಿ ನೋಡಿದಾಗ ಸರಿಯೇ ಆಗಿದೆ. ಇದೇ ಸಂದರ್ಭದಲ್ಲಿ ಶತ್ರು ದೇಶದ ಸೈನಿಕ ತನ್ನ ದೇಶಕ್ಕಾಗಿ ಕೋವಿ ಹಿಡಿದಿರುತ್ತಾನೆಯೇ ಹೊರತು, ವೈಯಕ್ತಿಕ ದ್ವೇಷದಿಂದಲ್ಲ. ನಮ್ಮ ದೇಶದ ಸೈನಿಕನಂತೆ ಆ ದೇಶದ ಸೈನಿಕನಿಗೂ ಅದು ಹೊಟ್ಟೆ ಪಾಡೇ ಆಗಿರಬಹುದು. ಎರಡು ಸರಕಾರಗಳ ನಡುವಿನ ಬಲಿ ಪಶುಗಳು ಅವರು. ಆದುದರಿಂದಲೇ, ಉಭಯ ದೇಶಗಳಲ್ಲಿ ಸೆರೆ ಸಿಕ್ಕಿರುವ ಯೋಧರ ಕುರಿತಂತೆ ಆಯಾ ಸರಕಾರಗಳು ಮಾನವೀಯತೆಯನ್ನು ತೋರ್ಪಡಿಸಬೇಕು. ಸೈನಿಕರ ಹೆಸರು, ದೇಶ ಬೇರೆಯಾಗಿರುವುದರಿಂದ ಆತ ಮನುಷ್ಯತ್ವದ ಹೊಣೆಗಾರಿಕೆಯಿಂದ ಹೊರಗೆ ನಿಲ್ಲುವುದಿಲ್ಲ. ಶತ್ರು ಕೈದಿಗಳನ್ನು ಘನತೆಯಿಂದ ನೋಡಿಕೊಳ್ಳುವುದು ಉಭಯ ದೇಶಗಳ ಕರ್ತವ್ಯವಾಗಿದೆ. ಆದರೆ ಸರಬ್‌ಜಿತ್ ಪ್ರಕರಣವನ್ನು ಗಮನಿಸಿದರೆ ಉಭಯ ದೇಶಗಳೂ ಹೇಗೆ ಈ ಕರ್ತವ್ಯವನ್ನು ನಿಭಾಯಿಸಲು ವಿಫಲವಾದವು ಎನ್ನುವುದನ್ನು ನಾವು ನೋಡಬಹುದು. ಎರಡು ಸರಕಾರಗಳ ಪ್ರತಿಷ್ಠೆಗೆ ಸರಬ್‌ಜಿತ್‌ನಂತಹ ಅಸಂಖ್ಯ ಜನರು ಬಲಿಯಾಗಿದ್ದಾರೆ. ಜಾಧವ್ ಪ್ರಕರಣವೂ ಇದೇ ಹಾದಿಯಲ್ಲಿ ಸಾಗುತ್ತಿದೆಯೋ ಎಂಬ ಆತಂಕ ಇದೀಗ ಎಲ್ಲರನ್ನು ಕಾಡುತ್ತಿದೆ.

 ಜಾಧವ್ ಅವರು ಭಾರತದ ಬೇಹುಗಾರರು ಎಂದು ಪಾಕಿಸ್ತಾನ ಆರೋಪಿಸುತ್ತಿದೆ. ಇದಕ್ಕೆ ಬೇಕಾಗಿರುವ ಸಾಕ್ಷ ನಮ್ಮಲ್ಲಿದೆ ಎಂದೂ ಹೇಳಿಕೊಂಡಿದೆ. ಆದರೆ ಇದೀಗ ಜಾಧವ್ ಪ್ರಕರಣ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿದೆ. ಭಾರತದ ಮೇಲಿನ ಕೋಪವನ್ನು, ದ್ವೇಷವನ್ನು ಜಾಧವ್ ಎನ್ನುವ ವ್ಯಕ್ತಿಯ ಮೇಲೆ ತೀರಿಸಲು ಹೊರಡುವುದು ಒಂದು ಸರಕಾರದ ಘನತೆಗೆ ತಕ್ಕುದಲ್ಲ. ಜಾಧವ್ ಗೂಢಚಾರನೆನ್ನುವುದು ಸಾಬೀತಾದರೆ ಅವರನ್ನು ಶಿಕ್ಷಿಸುವ ಅಧಿಕಾರ ಪಾಕಿಸ್ತಾನಕ್ಕೆ ಇದ್ದೇ ಇದೆ. ಅಲ್ಲಿಯವರೆಗೆ ಜಾಧವ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಪಾಕಿಸ್ತಾನದ ಕರ್ತವ್ಯ. ಜಾಧವ್ ಅವರನ್ನು ಭೇಟಿ ಮಾಡಲು ಅವರ ಕುಟುಂಬಕ್ಕೆ ಪಾಕಿಸ್ತಾನ ಅನುವು ಮಾಡಿಕೊಟ್ಟಾಗ, ಅದನ್ನು ಎಲ್ಲರೂ ಸ್ವಾಗತಿಸಿದ್ದರು. ಪಾಕಿಸ್ತಾನದ ಪ್ರಸ್ತಾಪ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ, ಒಪ್ಪಂದಂತೆ ಪಾಕಿಸ್ತಾನ ನಡೆದುಕೊಂಡಿಲ್ಲ ಎಂದು ಭಾರತ ಆರೋಪಿಸುತ್ತಿದೆ. ಜೊತೆಗೆ ಜಾಧವ್ ಕುಟುಂಬದ ಜೊತೆಗೆ ಪಾಕಿಸ್ತಾನ ತೀರಾ ಕೆಟ್ಟದಾಗಿ ನಡೆದುಕೊಂಡಿದೆ, ಅವರನ್ನು ಅವಮಾನಿಸಿದೆ.

ಜಾಧವ್ ಅವರನ್ನು ಗೂಢಚಾರ ಎಂದು ಪಾಕಿಸ್ತಾನ ಭಾವಿಸುವುದರಿಂದ ಸೂಕ್ತ ಭದ್ರತೆಯನ್ನು ಅಳವಡಿಸುವುದು ಅದರ ಹಕ್ಕಾಗಿದೆ. ಆದರೆ ಭದ್ರತೆಯ ನೆಪದಲ್ಲಿ ಅಲ್ಲಿನ ಅಧಿಕಾರಿಗಳ ಕೆಲವು ವರ್ತನೆಗಳು ಉದ್ದೇಶಪೂರ್ವಕವಾಗಿದ್ದವು ಎನ್ನುವ ಆರೋಪ ಕೇಳಿ ಬರುತ್ತಿದೆ. ಅದನ್ನು ಪಾಕಿಸ್ತಾನ ಸಮರ್ಥಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಯಾಕೆಂದರೆ, ಜಾಧವ್‌ರ ಕುರಿತಂತೆ ಪಾಕಿಸ್ತಾನ ಕ್ರೂರಿಯಾದಂತೆ, ಅದರ ಪರಿಣಾಮ ಭಾರತದ ಜೈಲಲ್ಲಿರುವ ಪಾಕಿಸ್ತಾನದ ಕೈದಿಗಳ ಮೇಲೆ ಬೀರಬಹುದು. ಇದೇ ಸಂದರ್ಭದಲ್ಲಿ ಜಾಧವ್ ಹೆಸರನ್ನು ಭಾರತದ ರಾಜಕಾರಣಿಗಳು ತಮ್ಮ ರಾಜಕೀಯಕ್ಕೆ ಬಳಸುವುದು ನಿಲ್ಲಿಸಬೇಕು. ಮುಖ್ಯವಾಗಿ ಅನಗತ್ಯ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಬೇಜವಾಬ್ದಾರಿ ಹೇಳಿಕೆ ನೀಡಿದರೆ ಉಭಯ ದೇಶಗಳು ಈ ಪ್ರಕರಣವನ್ನು ಪ್ರತಿಷ್ಠೆ ಪ್ರಶ್ನೆಯಾಗಿ ತೆಗೆದುಕೊಳ್ಳ ತೊಡಗುತ್ತಾ ಅಂತಿಮವಾಗಿ ಅದು ಜಾಧವ್ ಅವರಿಗೆ ಅಥವಾ ಭಾರತದಲ್ಲಿರುವ ಇತರ ಪಾಕಿಸ್ತಾನಿ ಕೈದಿಗಳಿಗೆ ದುಬಾರಿಯಾಗಬಹುದು. ವೈಯಕ್ತಿಕ ಪ್ರತಿಷ್ಠೆಗಾಗಿ, ಅಥವಾ ರಾಜಕಾರಣಿಗಳ ರಾಜಕೀಯ ದುರುದ್ದೇಶಗಳಿಗಾಗಿ ದೇಶದ ಮೇಲೆ ನಿಜವಾದ ಪ್ರೀತಿಯಿಟ್ಟು ಹೋರಾಟ ಮಾಡಿದ ಜೀವಗಳಿಗೆ ತೊಂದರೆಯಾಗಬಾರದು. ಆದುದರಿಂದ ಉಭಯ ದೇಶಗಳೂ ಭಾವೋದ್ವೇಗಗಳಿಗೆ ಅವಕಾಶ ನೀಡದೆ ಜಾಧವ್ ಪ್ರಕರಣವನ್ನು ಅತ್ಯಂತ ಮುತ್ಸದ್ದಿತನದಿಂದ, ವಿವೇಕದಿಂದ, ಪ್ರಬುದ್ಧತೆಯಿಂದ ನಿರ್ವಹಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News