×
Ad

ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಸಾರ್ವಜನಿಕ ಚರ್ಚೆಗೆ ಒಳಪಡಿಸಲು ಆಗ್ರಹ

Update: 2017-12-29 19:58 IST

ಬೆಂಗಳೂರು, ಡಿ.29: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಯಿಲ್ಲದೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾಗಬಾರದು ಎಂದು ಬೋವಿ, ಕೊರಮ, ಕೊರಚ, ಲಂಬಾಣಿ ಸೇರಿದಂತೆ 99 ಪರಿಶಿಷ್ಟ ಜಾತಿಗಳ ಐಕ್ಯತಾ ಸಮಾವೇಶ ಒಕ್ಕೊರಲಿನಿಂದ ಆಗ್ರಹಿಸಿದೆ.

ಶುಕ್ರವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ 99 ಪರಿಶಿಷ್ಟ ಜಾತಿಗಳ ಹತ್ತು ಸಾವಿರಕ್ಕೂ ಅಧಿಕ ಜನರು ಐಕ್ಯತಾ ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನಂತರ ಸ್ವಾತಂತ್ರ ಉದ್ಯಾನವನದಲ್ಲಿ ಸಮಾವೇಶ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ದೇವುನಾಯ್ಕ ಬೆಳಮಗಿ, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಸಮಪಾಲು-ಸಮಬಾಳು ನೀಡಿದ್ದಾರೆ. ಆದರೆ, ನಮ್ಮನ್ನಾಳುತ್ತಿರುವ ಜನಪ್ರತಿನಿಧಿಗಳು ಪರಿಶಿಷ್ಟರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಶಿಷ್ಟ ಸಮುದಾಯಗಳು ಎಲ್ಲರೂ ಅಣ್ಣ-ತಮ್ಮಂದಿರಂತೆ ಜೀವಿಸುತ್ತಿದ್ದಾರೆ. ಆದರೆ, ಸಮಾಜ ಕಲ್ಯಾಣ ಸಚಿವ ಆಂಜನೇಯ ಒಂದು ಸಮುದಾಯದ ವಕ್ತಾರನಂತೆ ವರ್ತಿಸುತ್ತಿದ್ದು, 99 ಸಮುದಾಯಗಳನ್ನು ಕಡೆಗಣಿಸುತ್ತಿದ್ದಾರೆ ಎಂದ ಅವರು, ಅವೈಜ್ಞಾನಿಕವಾಗಿರುವ ಸದಾಶಿವ ಆಯೋಗದ ವರದಿಯನ್ನು ಮುಂದುವರಿಸುವ ಬದಲಿಗೆ ಸುಟ್ಟು ಹಾಕಬೇಕು ಎಂದು ಕರೆ ನುಡಿದರು.

ಸಿದ್ದರಾಮೇಶ್ವರ ಮಹಾ ಸಂಸ್ಥಾನದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯ ಸರಕಾರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಗೆ 1 ಲಕ್ಷ ಶಿಕ್ಷಕರನ್ನು ನೇಮಕ ಮಾಡಿ ವೈಜ್ಞಾನಿಕ ಸಮೀಕ್ಷೆ ನಡೆಸಿದ್ದರೂ ತಳ ಸಮುದಾಯಗಳನ್ನು ಸಂಪೂರ್ಣವಾಗಿ ತಲುಪಲು ಸಾಧ್ಯವಾಗಿಲ್ಲ. ಆದರೆ, 7-8 ಜನರಿದ್ದ ಆಯೋಗದ ಸದಸ್ಯರು 15 ತಿಂಗಳಲ್ಲಿ ಒಂದು ಕೋಟಿ ಸಮುದಾಯ ಜನರನ್ನು ಹೇಗೆ ಸಮೀಕ್ಷೆ ಮಾಡಲು ಸಾಧ್ಯವಾಯಿತು ಎಂದು ಪ್ರಶ್ನಿಸಿದರು.

ನ್ಯಾಯಾಧೀಶರು ಡೀಲರ್‌ಗಳಾಗಿದ್ದಾರೆ: ಕರ್ನಾಟಕದಲ್ಲಿ ಬೇಲ್ ಡೀಲ್ ಮಾಡುವ ನ್ಯಾಯಾಧೀಶರಿದ್ದಾರೆ. ಅದೇ ರೀತಿಯಲ್ಲಿ ನ್ಯಾ.ಸದಾಶಿವ ಆಯೋಗದ ಸದಸ್ಯರು ಡೀಲ್ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ ಎಂದ ಸ್ವಾಮೀಜಿ, ವೈಜ್ಞಾನಿಕ ಅಥವಾ ಅವೈಜ್ಞಾನಿಕ ಎಂದು ಸಂಪೂರ್ಣವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ಸೋರಿಕೆಯಾದ ವರದಿ ಅನ್ವಯ ಗಣಕೀಕೃತ ವರದಿಯಲ್ಲಿ ಕೈ ಬರಹದಲ್ಲಿ ಬರೆದಿರುವ ಹಾಳೆಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದರು.

ಇಂದಿಗೂ ಹಲವು ಸಮುದಾಯಗಳು ಹರಕಲು ಚಾಪೆ, ಹೊದಿಕೆಯಲ್ಲಿ ಮಲಗುತ್ತಿದ್ದು, ವಾಸಿಸಲು ಮನೆಯಿಲ್ಲದೆ ಅಲೆಯುತ್ತಿದ್ದಾರೆ. ನಿರಂತರವಾಗಿ ಬಡತನವನ್ನೇ ಬದುಕಾಗಿಸಿಕೊಂಡು ಪೌಷ್ಠಿಕ ಆಹಾರವಿಲ್ಲದೆ ನಲುಗಿ ಸಾಯುತ್ತಿದ್ದಾರೆ. ಆದರೆ, ಸದಾಶಿವ ಆಯೋಗದ ವರದಿ ಮಾಡುವ ಸಂದರ್ಭದಲ್ಲಿ ಇದನ್ನು ಪರಿಗಣಿಸದೇ ಮುಚ್ಚಿಟ್ಟಿರುವ ಉದ್ದೇಶವಾದರೂ ಏನು ಎಂಬುದು ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಹಿಂದೊಮ್ಮೆ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ವರದಿ ನ್ಯೂನತೆಯಿಂದ ಕೂಡಿದೆ ಎಂಬ ಅಂಶ ಚರ್ಚೆಯಾಗಿತ್ತು. ಅದಕ್ಕೆ ಇಂದಿನ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೇರಿದಂತೆ ಸಂಪುಟ ದರ್ಜೆಯ ಎಲ್ಲರೂ ಸಹಿ ಹಾಕಿದ್ದಾರೆ. ಹೀಗಾಗಿ, ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿ ತಯಾರಿಸುವ ನ್ಯಾ.ಸದಾಶಿವ ಆಯೋಗದ ಅಧಿಕೃತ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು ಹಾಗೂ ಅದನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ಅನಂತರ ಅದು ವೈಜ್ಞಾನಿಕವಾಗಿದೆ ಎಂದು ದೃಢಪಟ್ಟರೆ ನಾವು ಅದನ್ನು ಬೆಂಬಲಿಸುತ್ತೇವೆ ಎಂದರು.

ರಸ್ತೆ ಸಂಚಾರ ದಟ್ಟಣೆ: ನ್ಯಾ.ಸದಾಶಿವ ಆಯೋಗದ ವರದಿ ವಿರೋಧಿಸಿ ಪರಿಶಿಷ್ಟ ಜಾತಿಗಳ ಸಾವಿರಾರು ಜನರು ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ರ್ಯಾಲಿ ನಡೆಸಿದ್ದರಿಂದ ನಗರದ ಮೆಜೆಸ್ಟಿಕ್, ಗೂಡ್ಸ್ ಶೆಡ್ ರಸ್ತೆ, ಶೇಷಾದ್ರಿ ರಸ್ತೆ, ಮಂತ್ರಿ ಮಾಲ್, ಚಿಕ್ಕಪೇಟೆ, ಕಾಟನ್ ಪೇಟೆ, ಮೈಸೂರು ಬ್ಯಾಂಕ್ ವೃತ್ತ, ಕೆ.ಆರ್.ವೃತ್ತ ಸೇರಿದಂತೆ ಹಲವು ಮಾರ್ಗಗಳಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನ ಸಂಚಾರರು ಪ್ರತಿಭಟನಾಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅಡಚಣೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಲಾಗಿತ್ತು.

ವರದಿಯನ್ನು ಲಾಕರ್‌ನಲ್ಲಿಟ್ಟು ವ್ಯಾಪಾರ ಮಾಡುವ ಬದಲಿಗೆ, ಸಾರ್ವಜನಿಕ ಚರ್ಚೆಗೆ ನೀಡಬೇಕು. ಸಂಪುಟ ದರ್ಜೆಯ ಯಾರೊಬ್ಬರಿಗೂ ಇದುವರೆಗೂ ಸದಾಶಿವ ಆಯೋಗದ ವರದಿ ಸಿಕ್ಕಿಲ್ಲ. ಹೀಗಿದ್ದರೂ, ಅದನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಇದು ಪ್ರಜಾಪ್ರಭುತ್ವನಾ ಅಥವಾ ತುಘಲಕ್ ಆಡಳಿತನಾ ಎಂದು ಪ್ರಶ್ನಿಸಿದರು. ಹಾಗೂ ಸೋರಿಕೆಯಾದ ವರದಿಯಲ್ಲಿ ಬೋವಿ, ಕೊರಚ, ಲಂಬಾಣಿ ಸಮುದಾಯಗಳು ಗಂಟಲ ಮುಳ್ಳಾಗಿವೆ ಎಂದು ಉಲ್ಲೇಖಿಸಿದ್ದಾರೆ ಎಂದು ಒಕ್ಕೂಟದ ಉಪಾಧ್ಯಕ್ಷ ಸುಭಾಷ ರಾಠೋಡ್ ಆಕ್ರೋಶ ವ್ಯಕ್ತಪಡಿಸಿದರು.
 

‘ಸದಾಶಿವ ಆಯೋಗದ ವರದಿಯಲ್ಲಿ ಮಾದಿಗರಿಗೆ ಶೇ.3, ಹೊಲೆಯರಿಗೆ ಶೇ.5 ಹಾಗೂ ಉಳಿದ ಜಾತಿಗಳಿಗೆ ಶೇ.3 ರಷ್ಟು ಒಳ ಮೀಸಲಾತಿ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ’

-ಎಸ್.ಎನ್.ಗಂಗಾಧರ, ನಿವೃತ್ತ ಐಎಎಸ್ ಅಧಿಕಾರಿ


ಮುಖ್ಯಮಂತ್ರಿ ಸಿದ್ದರಾಮಯ್ಯ ಜ.13 ರವರೆಗೆ ರಾಜ್ಯ ಪ್ರವಾಸದಲ್ಲಿರುತ್ತಾರೆ. ಅವರು ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಹಿಂದುರಿಗಿದ ನಂತರ ಸಿಎಂರೊಂದಿಗೆ ಚರ್ಚಿಸಿ ಒಕ್ಕೂಟದ ಮುಖಂಡರೊಂದಿಗೆ ಸಭೆ ನಡೆಸಲು ದಿನಾಂಕ ಪ್ರಕಟಿಸಲಾಗುತ್ತದೆ. ನಿಮ್ಮ ಮನವಿಯನ್ನು ಸರಕಾರಕ್ಕೆ ಸಲ್ಲಿಸುತ್ತೇನೆ.
-ಕೆ.ಜೆ.ಜಾರ್ಜ್, ಬೆಂಗಳೂರು ನಗಾರಾಭಿವೃದ್ಧಿ ಸಚಿವ


ಒಗ್ಗಟ್ಟು ಪ್ರದರ್ಶನದಲ್ಲಿ ವಿಫಲ
ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಐಕ್ಯತಾ ಸಮಾವೇಶದಲ್ಲಿ 99 ಜಾತಿಗಳು ಪಾಲ್ಗೊಳ್ಳಲಿವೆ ಎಂದು ಹೇಳಿದ್ದರೂ ಎಲ್ಲರನ್ನೂ ಒಳಗೊಳ್ಳುವಲ್ಲಿ ಸಾಧ್ಯವಾಗಿರಲಿಲ್ಲ ಎಂದು ಸಮಾವೇಶ ಎತ್ತಿ ತೋರಿಸುತ್ತಿತ್ತು. ಮತ್ತೊಂದು ಕಡೆ ವೇದಿಕೆ ಮೇಲೆರಲು ನೂಕು ನುಗ್ಗಲು ಉಂಟಾಗಿ 12 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ, ಮೂರು ಗಂಟೆಗೆ ಆರಂಭವಾಗುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News