ಜ.11ಕ್ಕೆ ಸದಾಶಿವ ವರದಿ ಜಾರಿಗಾಗಿ ರಾಜ್ಯಾದ್ಯಂತ ಪ್ರತಿಭಟನೆ
ಬೆಂಗಳೂರು, ಡಿ.29: ನ್ಯಾ.ಸದಾಶಿವ ಆಯೋಗದ ವರದಿಯನ್ನು ಶಿಫಾರಸ್ಸು ಮಾಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಜ.11ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ಹೇಳಿದೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ಮಾರಸಂದ್ರ ಮುನಿಯಪ್ಪ ಮಾತನಾಡಿ, ಅಂದು ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಲಿದೆ. ಇನ್ನು ಸದಾಶಿವ ಆಯೋಗದ ವರದಿಯನ್ನು ಸರಕಾರವು ಒಪ್ಪಿಕೊಳ್ಳುವಂತೆ ಕೋರಿ ರಾಜ್ಯದ ಎಲ್ಲ ಶಾಸಕರು, ಸಂಸದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಬೇಕೆಂದು ಹೇಳಿದರು.
ಪರಿಶಿಷ್ಟ ಜಾತಿ ಮೀಸಲಾತಿ ಹಂಚಿಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ಸರಕಾರ ನ್ಯಾ.ಎ.ಜೆ.ಸದಾಶಿವ ಆಯೋಗ ರಚನೆ ಮಾಡಿತು.
ಈ ಆಯೋಗವು ಪರಿಶಿಷ್ಟ ಜಾತಿಯೊಳಗೆ ಇರುವಂತಹ 11 ಜಾತಿಗಳಿಗೆ ಇದುವರೆಗೂ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಲಭ್ಯವಾಗಿರುವ ಮೀಸಲಾತಿ ಪ್ರಮಾಣ, ಜನಸಂಖ್ಯೆ ಸೇರಿ ಇನ್ನಿತರೆ ಅಂಶಗಳನ್ನು ಒಳಗೊಂಡಂತೆ, ವರದಿಯನ್ನು 2012ರಲ್ಲಿ ಸರಕಾರಕ್ಕೆ ಸಲ್ಲಿಸಿತ್ತು. ಆದರೆ, ಇದುವರೆಗೂ ರಾಜ್ಯ ಸರಕಾರ ಈ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದಾಶಿವ ಆಯೋಗದ ವರದಿಯ ಬಗ್ಗೆ ಇರುವ ತಪ್ಪು ಗ್ರಹಿಕೆ, ಅನುಮಾನ, ಗೊಂದಲ ನಿವಾರಿಸಬೇಕು. 101 ಜಾತಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷರಾದ ಎಚ್.ಹನುಮಂತಪ್ಪ, ಸಿದ್ದರಾಜು, ಮಠಾಧೀಶ ಶ್ರೀ ಹರಳಯ್ಯ ಸ್ವಾಮಿ ಸೇರಿ ಪ್ರಮುಖರಿದ್ದರು.