ಕುವೆಂಪು ನಿಜ ಸಾಹಿತ್ಯ ಜಗತ್ತಿಗೆ ಪರಿಚಯಿಸಿದರು: ನಲ್ಲೂರು ಪ್ರಸಾದ್
ಬೆಂಗಳೂರು, ಡಿ.29: ರಾಷ್ಟ್ರಕವಿ ಕುವೆಂಪು ಅವರು ಆಂಗ್ಲ ಸಾಹಿತ್ಯ, ಕಾದಂಬರಿ, ನಾಟಕ, ಮಕ್ಕಳ ಕತೆ, ಮಹಾಕಾವ್ಯಗಳನ್ನೆಲ್ಲಾ ಬರೆದು ವಿಶ್ವವನ್ನೇ ಜಾಗೃತಗೊಳಿಸಿ ನಿಜ ಸಾಹಿತ್ಯ ಸತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದು ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ನುಡಿದರು.
ಶುಕ್ರವಾರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕುವೆಂಪು ಜಯಂತ್ಯುತ್ಸವ, ಕನ್ನಡರಾಜ್ಯೋತ್ಸವದ ಅಂಗವಾಗಿ ಕುವೆಂಪು ಕನ್ನಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುವೆಂಪು ಕನ್ನಡ ಸಾಹಿತ್ಯ ಪರಂಪರೆಯೊಳಗೆ ಇರದಿದ್ದರೆ ನಿಜ ಸಾಹಿತ್ಯ ಸತ್ವದ ಪರಿಚಯ ಕಾವ್ಯ ಜಗತ್ತಿಗೆ ಆಗುತ್ತಿರಲಿಲ್ಲ ಎಂದ ಅವರು, ಹಳ್ಳಿಯವರಾದ ನಾವು ಪ್ರಾಥಮಿಕ ಶಾಲೆಯಿಂದ, ಸ್ನಾತಕೋತ್ತರ ಪದವಿ ಪಡೆಯುವವರೆಗೂ ಕುವೆಂಪುರವರ ಬರಹಗಳನ್ನ ಓದಿಕೊಂಡು ಬೆಳೆದಿದ್ದೇವೆ ಎಂದು ಹೇಳಿದರು
ಲಕ್ಷಾಂತರ ಜನರಿಗೆ ಧೈರ್ಯ, ಸ್ಥೈರ್ಯ, ತುಂಬಿ ಆತ್ಮಾಭಿಮಾನ ತಂದುಕೊಟ್ಟ ಮಹಾನ್ ಚೇತನ ಕುವೆಂಪು. ನಾಡಿಗೆ ವಿಶ್ವಮಾನವ ಸಂದೇಶವನ್ನು ಕೊಟ್ಟ ಕುವೆಂಪು ನಮ್ಮ ಹೆಮ್ಮೆ. ಅಂತಹ ಮಹಾನ್ ಸಾಹಿತಿಯ ಜನ್ಮದಿನಾಚರಣೆಯನ್ನು ಮಾಡುವ ಮೂಲಕ ಅವರ ಆದರ್ಶಗಳನ್ನು ಜನರಿಗೆ ತಿಳಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ನಲ್ಲೂರು ಪ್ರಸಾದ್ ಹೇಳಿದರು.
ಕವಿ ಶ್ರೀನಿವಾಸಮೂರ್ತಿ ಮಾತನಾಡಿ, ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ ಅವೈಜ್ಞಾನಿಕ ಪಠ್ಯಕ್ರಮವಾಗಿದ್ದು, ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕೆಂಬುದು ಕುವೆಂಪುರವರ ಆಶಯವಾಗಿತ್ತು ಅವರ ಆಶಯದಂತೆ ಕನ್ನಡ ಮಾಧ್ಯಮದಲ್ಲಿ ಸಾರ್ವತ್ರಿಕ ಶಿಕ್ಷಣ ನೀಡಲು ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದಾಗ ಕಲಿಕೆ ಸುಲಭವಾಗುತ್ತೆ. ಹೀಗಾಗಿ ಕನ್ನಡ ಮಾಧ್ಯಮವನ್ನು ಸಾರ್ವತ್ರಿಕಗೊಳಿಸುವ ಮೂಲಕ ಕುವೆಂಪು ಅವರಿಗೆ ಗೌರವ ಸಲ್ಲಿಸಬೇಕೆಂದು ಮನವಿ ಮಾಡಿದರು.
ಗಡಿನಾಡಿನಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭಾಷಾ ಪ್ರೇಮವನ್ನು ಜನರಲ್ಲಿ ಮೂಡಿಸಬೇಕಿದೆ. ಕನ್ನಡ ನಾಡು, ನುಡಿಗಾಗಿ ಕುವೆಂಪು ಅವರ ಸೇವೆ ಅಪಾರವಾದದ್ದು. ಅಂತಹ ಮಹನೀಯರ ಜನ್ಮದಿನಾಚರಣೆಯನ್ನು ಜಾತಿ, ಮತ ಭೇದವಿಲ್ಲದೆ ನಾವೆಲ್ಲ ಒಂದುಗೂಡಿ ಆಚರಿಸಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಆರಕ್ಷಕ ಉಪ ಅಧೀಕ್ಷಕ ಎಂ.ಗಂಗಾಧರ್, ಕವಿ ಕಾ.ವೆಂ.ಶ್ರೀನಿವಾಸಮೂರ್ತಿ, ಲೇಖಕ ಡಾ.ಕಾಂತರಾಜಪುರ ಸುರೇಶ್ ಅವರಿಗೆ ‘ಕುವೆಂಪು ಕನ್ನಡ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ವಿರೋಧ ಪಕ್ಷ ನಾಯಕ ಎ.ಎಚ್.ಬಸವರಾಜು, ಸದ್ಭಾವನ ಪ್ರತಿಷ್ಠಾನ ಅಧ್ಯಕ್ಷ ಎಂ.ಪ್ರಕಾಶ್‌ಮೂರ್ತಿ, ಪುಟ್ಟರಾಜು ಸೇರಿದಂತೆ ಪ್ರಮುಖರಿದ್ದರು.