ಬೆಂಗಳೂರು: ಎಂ.ಎಸ್.ಸ್ವಾಮಿನಾಥನ್ ವರದಿಗೆ ಆಗ್ರಹಿಸಿ ಫೆ.23ಕ್ಕೆ ಸಂಸತ್ ಭವನ ಮುತ್ತಿಗೆ
ಬೆಂಗಳೂರು, ಡಿ.29: ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ ಫೆ.23ರಂದು ಸಂಸತ್ ಭವನ ಮುತ್ತಿಗೆ ಹಾಕಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಶುಕ್ರವಾರ ನಗರದ ಗಾಂಧಿಭವನದಲ್ಲಿ ಏರ್ಪಡಿಸಿದ್ದ ರೈತ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಎಂ.ಎಸ್.ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಲು ಆಗ್ರಹಿಸಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ಸಂಸತ್ ಮುತ್ತಿಗೆ ಹಾಕಲು ಒಮ್ಮತ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಅಂದು ನಡೆಯುವ ಪ್ರತಿಭಟನೆಗೆ ರಾಜ್ಯದ ಪ್ರತಿ ಜಿಲ್ಲೆಗಳಿಂದ ರೈತರನ್ನು ಸಂಘಟಿಸಿ ಕರೆದೊಯ್ಯಲಾಗುವುದು. ಸಂಸತ್ ಭವನ ಮುತ್ತಿಗೆ ಹಾಕಲು ಸುಮಾರು ಐನೂರಕ್ಕೂ ಹೆಚ್ಚು ಮಂದಿ ರೈತರು ರಾಜ್ಯದಿಂದ ತೆರಳಲಿದ್ದಾರೆ ಎಂದ ಅವರು, ಕಬ್ಬನ್ನು ಫಸಲ್ ಬಿಮಾ ವಿಮಾ ಯೋಜನಾ ವ್ಯಾಪ್ತಿಗೆ ಸೇರಿಸಬೇಕು. ಹಾಗೂ ಕಬ್ಬಿನ ಎಫ್‌ಆರ್‌ಪಿ ದರವನ್ನು ಶೇ.8.5ಕ್ಕೆ ನಿಗದಿಪಡಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.
ಗುಜರಾತಿನಲ್ಲಿ ಟನ್ ಕಬ್ಬಿಗೆ 4,450 ರೂ.ಬೆಂಬಲ ಬೆಲೆ ನೀಡಲಾಗುತ್ತಿದೆ. ಇದನ್ನು ಪರಿಶೀಲಿಸಲು ರಾಜ್ಯ ಸರಕಾರದ ವತಿಯಿಂದ ರೈತ ಸಂಘಟನೆಗಳ ಮುಖಂಡರ ಒಳಗೊಂಡ ಸಮಿತಿ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದೆ. ಈ ವರದಿಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಯತ್ನಾಳ್, ಅತ್ತಿಹಳ್ಳಿ ದೇವರಾಜ್, ಎಸ್.ಬಿ.ಸಿದ್ನಾಳ್, ಜಗದೀಶ್ ಪಾಟೀಲ್, ದೇವಕುಮಾರ್ ಸೇರಿದಂತೆ ಪ್ರಮುಖರಿದ್ದರು.