×
Ad

ಬೆಂಗಳೂರು: ಡಿಆರ್‌ಡಿಒ ಸಂಶೋಧನೆ, ಉತ್ಪಾದನೆ ಖಾಸಗೀಕರಣ ಬೇಡ

Update: 2017-12-29 23:02 IST

ಬೆಂಗಳೂರು, ಡಿ.29: ರಕ್ಷಣಾ ಇಲಾಖೆಗೆ ಸಂಬಂಧಿತ ಸಂಶೋಧನೆ, ಉತ್ಪಾದನೆ, ನಿರ್ವಹಣೆ, ಸೇವೆಗಳನ್ನು ಖಾಸಗೀಕರಣ ಮಾಡಬಾರದೆಂದು ಅಖಿಲ ಭಾರತ ರಕ್ಷಣಾ ಇಲಾಖೆ ನೌಕರರ ಒಕ್ಕೂಟ ಆಗ್ರಹಿಸಿದೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಸ್.ಎನ್.ಪಾಠಕ್, ರಕ್ಷಣಾ ಸಂಬಂಧಿತ ಚಟುವಟಿಕೆಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ನಿರ್ಣಯ ರಾಷ್ಟ್ರ ರಕ್ಷಣಾ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಆಯುಧ ಕಾರ್ಖಾನೆಗಳಲ್ಲಿ ತಯಾರಿಸುವ 200ಕ್ಕೂ ಹೆಚ್ಚು ಉತ್ಪಾದನೆಗಳನ್ನು ನಾನ್‌ಕೋರ್ ಉತ್ಪನ್ನಗಳೆಂದು ಘೋಷಿಸಿ, ರಕ್ಷಣಾ ಉತ್ಪನ್ನಗಳ ಉತ್ಪಾದನೆಗಳನ್ನು ನಿಲ್ಲಿಸಿ, ಖಾಸಗಿ ಕಂಪೆನಿಗಳಿಗೆ ವಹಿಸಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ಸರಿಯಲ್ಲ ಎಂದ ಅವರು, ಇದರಿಂದ ಖಾಸಗಿ ಶಕ್ತಿಗಳು ಸರಕಾರ ಮತ್ತು ಶಶಸ್ತ್ರಪಡೆಗಳ ಕಾರ್ಯವನ್ನು ನಿರ್ಧರಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಡಿಆರ್‌ಡಿಒ ಸಂಶೋಧನೆ ಮತ್ತು ಸಂಬಂಧಿತ ಅಭಿವೃದ್ಧಿ ಚಟುವಟುಕೆಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದು ಹಾಗೂ ಶಾಶ್ವತ ಕೌಶಲ್ಯಪೂರಿತ ಮತ್ತು ಉತ್ತಮ ಕೆಲಸಗಾರರನ್ನು ಡಿಆರ್‌ಡಿಒದಿಂದ ತೆಗೆದುಹಾಕುವುದು ಗಂಭೀರ ವಿಷಯವಾಗಿದೆ. ಡಿಆರ್‌ಡಿಒ ತಾನು ಅಭಿವೃದ್ಧಿಪಡಿಸಿದ ಎಲ್ಲ ಹೊಸ ತಂತ್ರಜ್ಞಾನಗಳನ್ನು ಖಾಸಗಿ ವಲಯಕ್ಕೆ ನೀಡುವ ಮೂಲಕ ರಕ್ಷಣಾ ಸಂಸ್ಥೆಗಳನ್ನು ಸರಕಾರ ನಿರ್ಲಕ್ಷಿಸುತ್ತಿದೆ ಎಂದು ದೂರಿದರು.

ಕೇಂದ್ರ ಸರಕಾರದ ನಿರ್ಧಾರದಿಂದ ಆಯುಧ ಕಾರ್ಖಾನೆಗಳಲ್ಲಿ 2 ಸಾವಿರ ಮಹಿಳಾ ಉದ್ಯೋಗಿಗಳು ಸೇರಿದಂತೆ 12 ಸಾವಿರ ನೌಕರರು, ಇನ್ನು ರಕ್ಷಣಾ ಉತ್ಪನ್ನಗಳ ತಯಾರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 4 ಲಕ್ಷ ನೌಕರರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.

ಖಾಸಗೀಕರಣದ ಮೂಲಕ ಸರಕಾರದ ಉದ್ಯೋಗ ಸೃಷ್ಟಿಸುವ ನಿಯಮ ವಿವಿಧ ವರ್ಗಗಳಿಗೆ ನೀಡುವ ಮೀಸಲಾತಿಗೆ ವಿರುದ್ಧವಾಗಿದೆ. ಹೀಗಾಗಿ, ಇಂತಹ ನಿರ್ಧಾರವನ್ನು ಸರಕಾರ ಕೈಬಿಡಬೇಕು ಎಂದ ಅವರು, ಒಂದು ವೇಳೆ ಸರಕಾರ ಈ ನಿರ್ಧಾರವನ್ನು ಮುಂದುವರೆಸಿದರೆ ನೌಕರರ ಒಕ್ಕೂಟದಿಂದ ಹೋರಾಟ ನಡೆಸಲಾಗುವುದೆಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹರಭಜನ್‌ ಸಿಂಗ್, ಸತ್ಯನಾರಾಯಣ, ಬಾಲಕೃಷ್ಣನ್, ಪ್ರಧಾನ ಕಾರ್ಯದರ್ಶಿ ಶ್ರೀಕುಮಾರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News