ಆಹಾರವನ್ನೇ ವಿಷವಾಗಿಸಿದ ‘ಕೃಷಿ ಕ್ರಾಂತಿ’

Update: 2017-12-29 18:39 GMT

ಮಾನ್ಯರೇ,

ಇಂದು ಜಾಗತೀಕರಣ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನದ ಸುಳಿಗೆ ಸಿಲುಕಿ ರೈತ ತತ್ತರಿಸಿ ಹೋಗಿದ್ದಾನೆ. ಜೈವಿಕ ಕ್ರಿಯೆ ನಡೆಯುತ್ತಿದ್ದ ನಮ್ಮ ಫಲವತ್ತಾದ ಮಣ್ಣು ತುಂಬಿದ ಭೂಮಿ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸಿ ಬಂಜೆಯಾಗಿದೆ. ಜೈವಿಕ ತಂತ್ರಜ್ಞಾನದ ಮೂಲಕ ಜೀನ್‌ಗಳನ್ನು ಬದಲಾಯಿಸಿ, ಕುಲಾಂತರಿಗಳನ್ನು ಹುಟ್ಟುಹಾಕಿ ನಾವು ತಿನ್ನುವ ಆಹಾರವನ್ನು ಫುಡ್ ಪಾಯಿಸನ್ ಅನ್ನುವ ರೀತಿಯಲ್ಲಿ ‘ಕೃಷಿ ಕ್ರಾಂತಿ’ ನಮ್ಮನ್ನು ತಂದು ನಿಲ್ಲಿಸಿಬಿಟ್ಟಿದೆ.
 
ಕೇಂದ್ರ ಸರಕಾರದ ಪರವಾನಿಗೆಯಿಲ್ಲದೆ ಯಾವ ಕುಲಾಂತರಿ ತಳಿಯ ಬೀಜಗಳನ್ನು ಕಂಪೆನಿಗಳು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಕುಲಾಂತರಿಯ ಕೆಲವು ಬೀಜಗಳಿಗೆ ಮಾತ್ರ ಕೇಂದ್ರ ಸರಕಾರದ ಪರವಾನಿಗೆ ಇದೆ. ಆದರೆ ಪರವಾನಿಗೆ ಇಲ್ಲದೆಯೇ ಹಲವು ರೀತಿಯ ಕುಲಾಂತರಿ ಬೀಜಗಳು ರೈತರ ಕೈಗೆ ಸಿಗುತ್ತಿವೆ. ಕೆಲವು ಕಂಪೆನಿಗಳು ಬೀಜಗಳನ್ನು ವಿತರಿಸುತ್ತವೆೆ. ಆದರೆ ಈ ಬೀಜಗಳಿಂದ ರೈತ ತನ್ನ ಬೆಳೆಯನ್ನು ಕಳೆದುಕೊಂಡರೆ ಯಾವುದೇ ಕಂಪೆನಿಗಳಿಂದ ರೈತನಿಗೆ ರಕ್ಷಣೆ ಸಿಗುತ್ತಿಲ್ಲ. ಭಾರತದಲ್ಲಿ ಪ್ರಾದೇಶಿಕ ಆಹಾರದ ಬೆಳೆಗಳ ಮೂಲ ಬಿತ್ತನೆ ಬೀಜಗಳನ್ನು ನಾವು ಕಳೆದುಕೊಂಡು ಬಿಟ್ಟಿದ್ದೇವೆ. ಈಗ ಏನಿದ್ದರೂ ರೈತ ಬೀಜಗಳಿಗಾಗಿ ಕಂಪೆನಿಗಳ ಹತ್ತಿರ ಕೈಚಾಚಬೇಕು. ಇನ್ನು ಸಾವಯವ ಕೃಷಿ ಮಾಡುವ ವಿಚಾರ ಹಾಸ್ಯಾಸ್ಪದ ಸಂಗತಿಯಾಗಿದೆ.

ನಮ್ಮ ತೀರ್ಥಹಳ್ಳಿ ತಾಲೂಕಿನಲ್ಲಿ ಈಗ ಎಲ್ಲೆಂದರಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಅಡಿಕೆ ಬೆಳೆ ಬೆಳೆಯುವ ಆಧಾರದ ಮೇಲೆಯೇ ತೀರ್ಥಹಳ್ಳಿಯ ಎಲ್ಲಾ ಆರ್ಥಿಕ ವ್ಯವಹಾರಗಳು ನಡೆಯುತ್ತಿವೆ. ಭತ್ತದಿಂದಲ್ಲ. ಆಹಾರ ಬೆಳೆ ಕಣ್ಮರೆಯಾಗಿ ಹೋಗಿದೆ. ಸುರಕ್ಷಿತ ಆಹಾರ ಜಗತ್ತಿನ ಪ್ರತಿಯೊಬ್ಬರಿಗೂ ಸಿಗದೇ ಇದ್ದರೆ ಯಾವ ವಿಜ್ಞಾನ, ತಂತ್ರಜ್ಞಾನದ ಬುದ್ಧಿವಂತಿಕೆ ಮನುಷ್ಯನಲ್ಲಿ ಇದ್ದೇನು ಪ್ರಯೋಜನ. ನಾವು ತಿನ್ನುವ ಆಹಾರವನ್ನೇ ವಿಷವಾಗಿಸುವ ವಿಜ್ಞಾನ, ತಂತ್ರಜ್ಞಾನದ ಬುದ್ಧಿವಂತಿಕೆಗೆ ಏನೆನ್ನಬೇಕು? ಇದನ್ನು ಬದಲಾಯಿಸಬೇಕಾದವರು ಯಾರು?

Writer - -ನಾಗೇಶ್ ನಾಯಕ್, ಇಂದಾವರ

contributor

Editor - -ನಾಗೇಶ್ ನಾಯಕ್, ಇಂದಾವರ

contributor

Similar News