ಭಾರತದ ಮೊದಲ ಮಹಿಳಾ ಶಿಕ್ಷಕಿ : ಸಾವಿತ್ರಿಬಾಯಿ ಫುಲೆ

Update: 2017-12-30 12:08 GMT

‘ಭಾರತದ ಮೊದಲ ಮಹಿಳಾ ಶಿಕ್ಷಕಿ’ ಎಂಬ ಬಿರುದನ್ನು ಬ್ರಿಟಿಷರಿಂದ ಪಡೆದ ಮಾತೆ ಸಾವಿತ್ರಿಬಾಯಿ ಫುಲೆ ಅವರ ಸಾಧನೆಯನ್ನು ಸ್ವತಂತ್ರ ಭಾರತದ ಚರಿತ್ರೆ ರೂಪಿಸಿದ ಮನಸ್ಸುಗಳು ಅಂಚಿಗೆ ತಳ್ಳಿದ್ದು ಈ ದೇಶದ ಇತಿಹಾಸ ರಚನಾ ಕ್ರಮ (Historiography) ಯಾವ ಮೌಲ್ಯಗಳನ್ನು ಪ್ರತಿಪಾದಿಸುವ ಉದ್ದೇಶ ಹೊಂದಿದೆ ಎಂಬುದನ್ನು ಸೂಚಿಸುತ್ತದೆ.

ಆದರೆ ಚರಿತ್ರೆ ಎಂದರೆ ಕೇವಲ ಅಕ್ಷರ ತರ್ಕಗಳ ಮೂಲಕ ಕಟ್ಟಲ್ಪಟ್ಟ ಪದಪುಂಜಗಳಲ್ಲ, ಬದಲಾಗಿ ನಿಜವಾದ ಚರಿತ್ರೆ ಜನರ ಚಲನಶೀಲ ಬದುಕಿನ ಭಾಗವಾಗಿ ಪೀಳಿಗೆಯಿಂದ ಪೀಳಿಗೆಗೆ ಮಾತಾಗಿ, ಕಥೆಯಾಗಿ, ಹಾಡಾಗಿ ದಾಟುತ್ತದೆ ಎಂಬುದನ್ನು ಸಾವಿತ್ರಿಬಾಯಿ ಫುಲೆ ವಿಷಯದಲ್ಲಿ ಈ ದೇಶದ ತಳಸಮುದಾಯದ ಪ್ರಜ್ಞೆ ನಿರೂಪಿಸಿದೆ.

ಇಂದು ಭಾರತದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಹೆಸರು ಚರ್ಚೆಯಲ್ಲಿದೆ ಎಂದರೆ ಇದಕ್ಕೆ ನಿಜವಾದ ಕಾರಣ ಅಕ್ಷರ ಚರಿತ್ರೆಯ ಆಚೆಗೆ ಈ ನೆಲದ ತಳಸಮುದಾಯದ ಬದುಕು ಮತ್ತು ಚಳವಳಿಗಳು ಆಕೆಯ ಸಾಧನೆಯನ್ನು ಹೃದಯಲ್ಲಿ ಇಟ್ಟುಕೊಂಡು ತಲೆಮಾರುಗಳಿಗೆ ದಾಟಿಸಿದ್ದು ಎಂಬುದನ್ನು ಯಾವುದೇ ಸಂಶಯ ಇಲ್ಲದೆ ಹೇಳಬಹುದು.

ಸಾವಿತ್ರಿ ಬಾಯಿಫುಲೆ 1831, ಜನವರಿ ಮೂರರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದರು. ಆ ಕಾಲದ ಕಟ್ಟುಪಾಡುಗಳಂತೆ ಸ್ವತಃ ಬಾಲ್ಯವಿವಾಹ ಬಂಧನಕ್ಕೆ ಒಳಗಾಗಿ ತನ್ನ ಒಂಬತ್ತನೆ ವಯಸ್ಸಿನಲ್ಲಿ ಕೈ ಹಿಡಿದದ್ದು ಸಾಮಾಜಿಕ ಬದಲಾವಣೆಯ ಹರಿಕಾರರಾದ 12 ವರ್ಷ ವಯಸ್ಸಿನ ಜ್ಯೋತಿ ಬಾ ಫುಲೆ ಅವರನ್ನು. ಆದರೆ ಆ ಘಟನೆ ಮಾತೆ ಸಾವಿತ್ರಿ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಪ್ರೇರಣೆಯಾಯಿತು. ಸಾವಿತ್ರಿ ಬಾಯಿ ಅವರ ಬದುಕಿನಲ್ಲಿ ಇಬ್ಬರು ವ್ಯಕ್ತಿಗಳು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಅವರಲ್ಲಿ ಮೊದಲನೆಯವರು ಸಾವಿತ್ರಿ ಅವರಿಗೆ ಅಕ್ಷರ ತಿದ್ದಿಸಿ ಅವರ ವ್ಯಕ್ತಿತ್ವ ರೂಪುಗೊಳ್ಳಲು ನೆರವಾದ ಪತಿ ಜ್ಯೋತಿಬಾ ಫುಲೆ. ಮತ್ತೊಬ್ಬರು 1846-47ರಲ್ಲಿ ಅಹ್ಮದ್ ನಗರದಲ್ಲಿ ಶಿಕ್ಷಕರ ತರಬೇತಿ ಪಡೆಯುವಾಗ ಪರಿಚಿತವಾದ ಗೆಳತಿ ಫಾತಿಮಾ ಶೇಖ್. ಹಾಗೆ ನೋಡಿದರೆ ಗೆಳತಿ ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆ ಅವರು ಪರಸ್ಪರ ನೆರಳಿನಂತೆ ಇದ್ದರು ಎಂಬ ಸಂಗತಿಯನ್ನು ಚರಿತ್ರೆಕಾರರು ಗುರುತಿಸುತ್ತಾರೆ.

19ನೇ ಶತಮಾನದಲ್ಲಿ ಭಾರತ ಸಮಾಜದಲ್ಲಿ ಹಾಸು ಹೊಕ್ಕಾಗಿದ್ದ ಜಾತಿ ಮನಸ್ಥಿತಿ ತಳಸಮುದಾಯದ ಜನರು ಮತ್ತು ಎಲ್ಲಾ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣವನ್ನು ನಿರಾಕರಿಸುತ್ತಿತ್ತು ಅದರ ವಿರುದ್ಧ ಹೋರಾಟಕ್ಕೆ ನಿಂತ ಅಕ್ಷರದವ್ವ ಸಾವಿತ್ರಿ ಬಾಯಿ ಅವರು 1848 ರ ಕಾಲದಲ್ಲೇ ಪುಣೆಯ ನಾರಾಯಣ ಪೇಟೆಯ ಬಿಂದೇವಾಡದಲ್ಲಿ ದೇಶದಲ್ಲಿ ಮೊದಲ ಬಾಲಕಿಯರ ಶಾಲೆ ತೆರೆದರು.

ಸಾವಿತ್ರಿ ಬಾಯಿ ಅವರ ಈ ನಿರ್ಧಾರವನ್ನು ಆ ಕಾಲದ ಅತಾರ್ಕಿಕ ಜಾತಿಮನಸ್ಥಿತಿ ಹಾಸು ಹೊಕ್ಕಾಗಿದ್ದ ಕೆಲವು ಭಾರತೀಯ ಮನಸ್ಸುಗಳು ಹಿಂಸಾತ್ಮಕ ಪ್ರತಿರೋಧದ ಮೂಲಕ ಸೋಲಿಸಬೇಕು ಎಂಬ ಕಾರಣಕ್ಕೆ ಸಾವಿತ್ರಿಬಾಯಿ ಶಾಲೆಗೆ ಹೋಗುವಾಗ ಆಕೆಯ ಮೇಲೆ ಸೆಗಣಿ ಎರಚಲಾಯಿತು, ಹೀನಾಯ ವಾಗಿ ಬಯ್ಯಲಾಯಿತು, ಸಮಾಜ ವಿದ್ರೋಹಿ ಎಂಬ ಪಟ್ಟ ಕಟ್ಟಲಾಯಿತು, ಆಕೆಯ ಮೇಲೆ ಕಲ್ಲು ಎಸೆಯಲಾಯಿತು ಆದರೆ ಇದ್ಯಾವುದಕ್ಕೂ ಜಗ್ಗದ, ಉತ್ತರಿಸದ ಸಾವಿತ್ರಿಬಾಯಿ ತನ್ನ ಕಾರ್ಯವನ್ನು ಮುಂದುವರಿಸಿದರು ಒಂದು ಹಂತಕ್ಕೆ ಶಾಲೆಗೆ ಬರುವಾಗ ತನ್ನ ಬ್ಯಾಗಿನಲ್ಲಿ ಒಂದು ಸೀರೆ ಇಟ್ಟುಕೊಂಡು ಬರುತ್ತಿದ್ದರು. ಶಾಲೆಗೆ ಬರುವಾಗ ಸೆಗಣಿ/ಕೆಸರು ಎರಚಿದ್ದ ಸೀರೆಯನ್ನು ಮಕ್ಕಳು ಬರುವುದಕ್ಕೆ ಮುಂಚೆ ಶಾಲೆಯಲ್ಲೇ ಬದಲಿಸಿ ಪಾಠಕ್ಕೆ ನಿಲ್ಲುತ್ತಿದ್ದರು ಎಂಬ ಸಂಗತಿಯನ್ನು ಚಿಂತಕರು ಗುರುತಿಸುತ್ತಾರೆ.

ಈ ಬದ್ಧತೆಯ ಪರಿಣಾಮ 1852 ರ ವೇಳೆಗೆ ಅವರು ನಡೆಸುತ್ತಿದ್ದ ಶಾಲೆಗಳ ಸಂಖ್ಯೆ ಹದಿನೆಂಟಕ್ಕೆ ಮುಟ್ಟಿ ಸುಮಾರು 500 ಮಕ್ಕಳು ಆ ಶಾಲೆಗಳಲ್ಲಿ ಕಲಿಯುವ ಹಂತ ನಿರ್ಮಾಣವಾಯಿತು ಇದರ ಜೊತೆ ಜೊತೆಗೆ ಸಾವಿತ್ರಿ ಬಾಯಿ ಫುಲೆ ಅವರು ಸಣ್ಣ ವಯಸ್ಸಿನಲ್ಲಿ ಮದುವೆಯಾಗಿ ವಿಧವೆಯಾದ, ಆತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿದರು, ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಶಿಶುಕೇಂದ್ರಗಳನ್ನು ಸ್ಥಾಪಿಸಿದರು, ಕೂಲಿಕಾರರಿಗಾಗಿ ರಾತ್ರಿ ಪಾಳಿಯ ಶಾಲೆಗಳನ್ನು ಆರಂಭಿಸಿದರು, ದಲಿತ ಸಮುದಾಯದ ಜನರಿಗೆ ಸ್ವತಃ ತಮ್ಮ ಮನೆಯ ಬಾವಿಯನ್ನು ಬಿಟ್ಟುಕೊಟ್ಟು ಸಮಾನತೆಯ ತತ್ವವನ್ನು ಕ್ರಿಯೆಯಾಗಿ ನಿರೂಪಿಸಿದರು.

ಮುಖ್ಯವಾಗಿ ಆ ಕಾಲದಲ್ಲಿಯೇ ಅಕ್ಷರ ಕಲಿಯಲು ಆರ್ಥಿಕ ಸಮಸ್ಯೆ ಇದ್ದ ಮಕ್ಕಳಿಗೆ ಶಿಷ್ಯವೇತನವನ್ನು ಕೊಡುವ ಕೆಲಸವನ್ನು ಸಾವಿತ್ರಿ ಬಾಯಿ ನಡೆಸುತ್ತಿದ್ದ ಶಾಲೆಗಳು ನಿರ್ವಹಿಸುತ್ತಿದ್ದವು. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಭಾರತದಲ್ಲಿ ನಿಧಾನವಾಗಿ ಶಿಕ್ಷಣದ ಮಹತ್ವ ತಳಸಮುದಾಯದ ಜನರ ಅರಿವಿನ ಭಾಗವಾಗಿ ಬೆಳೆದು ಅಕ್ಷರದವ್ವ ಕಟ್ಟಿದ ಚಳವಳಿ ದೇಶದ ತುಂಬಾ ವ್ಯಾಪಿಸತೊಡಗಿತು.

ಅದರ ಪರಿಣಾಮ 1856 ರಲ್ಲಿ ಆಗಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಕರ್ನಾಟಕದ ಧಾರವಾಡದಲ್ಲಿ ದಲಿತ (ಮಹರ್ ಜಾತಿಗೆ ಸೇರಿದ) ಹುಡುಗನೊಬ್ಬ ಶೈಕ್ಷಣಿಕ ಸಂಸ್ಥೆಯೊಳಕ್ಕೆ ಪ್ರವೇಶ ಪಡೆಯಲು ಸಾಧ್ಯವಾಯಿತು.

ಆ ಕಾಲದಲ್ಲಿ ಆತನನ್ನು ಶಾಲೆಗೆ ಸೇರಿಸಿಕೊಂಡದ್ದಕ್ಕೆ ದೊಡ್ಡ ಪ್ರತಿಭಟನೆಯನ್ನು ಈ ದೇಶದ ಸುಸಂಸ್ಕೃತ ಜನರು ಮಾಡಿದ್ದರು. ಇದಕ್ಕೆ ಸೊಪ್ಪು ಹಾಕದ ಬ್ರಿಟಿಷರು 1872ರ ಹೊತ್ತಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ/ಧರ್ಮ ತಾರತಮ್ಯವನ್ನು ಕೊನೆಗೊಳಿಸುವ 1836ರ ಕಾಯ್ದೆಯನ್ನು ಇನ್ನೂ ಪ್ರಬಲವಾಗಿ ಜಾರಿಗೊಳಿಸಿದರು. ಇದರ ಹಿಂದೆ ಇದ್ದದ್ದು ಸಾವಿತ್ರಿಬಾಯಿ ಕಟ್ಟಿದ ಶಿಕ್ಷಣ ಚಳವಳಿ.

ಅಕ್ಷರ ಮಾತೆ ಕಟ್ಟಿದ ಪ್ರಜ್ಞೆಯ ಮುಂದುವರಿದ ಭಾಗವಾಗಿ 1874ರ ಕಾಲದಲ್ಲೇ ಮೊದಲ ಬಾರಿಗೆ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಮೈಸೂರು ಸಂಸ್ಥಾನ ಜಾರಿಗೊಳಿಸಿತು ಪೋಲಿಸ್ ಇಲಾಖೆಯ ಮಧ್ಯಮ ಮತ್ತು ಕೆಳಹಂತದ ಒಟ್ಟು ಹುದ್ದೆಗಳಲ್ಲಿ ಶೇ.20ರಷ್ಟು ಬ್ರಾಹ್ಮಣರಿಗೆ ಮಿಕ್ಕ ಶೇ.80 ಬ್ರಾಹ್ಮಣೇತರರು, ದಲಿತರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಮೀಸಲು ಕಲ್ಪಿಸಿ ಆದೇಶ ಹೊರಡಿಸಲಾಯಿತು.

ಇದರ ಪರಿಣಾಮ 1902ರಲ್ಲಿ ಮುಂಬೈ ಪ್ರೆಸಿಡೆನ್ಸಿಯ ಭಾಗವಾಗಿದ್ದ ಸಣ್ಣ ಸಂಸ್ಥಾನ ಕೊಲ್ಹಾಪುರದ ಮಹಾರಾಜ ತನ್ನ ಸಂಸ್ಥಾನದ ಶೇ.50ರಷ್ಟು ಹುದ್ದೆಗಳನ್ನು ಬ್ರಾಹ್ಮಣೇತರ ಸಮುದಾಯಗಳಿಗೆ ಮೀಸಲಿಟ್ಟು ಆದೇಶ ಹೊರಡಿಸಿದನು.

ತಳಸಮುದಾಯಗಳ ರಚನಾತ್ಮಕ ಬೆಳವಣಿಗೆ ಪೂರಕ ವಾತಾವರಣ ರೂಪುಗೊಳ್ಳುತ್ತಿದ್ದ ಕಂಗೆಟ್ಟ ‘‘ಜಾತಿವಾದಿಗಳು’’ ಬ್ರಿಟಿಷ್ ಸರಕಾರದ ವಿರುದ್ಧ ಪ್ರತಿಭಟನೆಗೆ ಇಳಿದರು ಆದರೆ ಬ್ರಿಟಿಷರು ಇದಕ್ಕೆ ಸೊಪ್ಪು ಹಾಕದಿದ್ದಾಗ ತಮ್ಮ ಚಳವಳಿಯ ಕೇಂದ್ರವಾದ ‘‘ಜಾತಿಪ್ರಜ್ಞೆಯನ್ನು’’ ಗೌಣಗೊಳಿಸಿ/ಮರೆಮಾಚಿ ಅದನ್ನೇ ಧರ್ಮದ ಹೆಸರಿನ ವಿಚಾರವಾಗಿ ರೂಪಿಸಿ ಪ್ರಚಾರ ಮಾಡುವ ಹಂತಕ್ಕೆ ಇಳಿದರು.

ಇಲ್ಲಿಂದ ಸಾವಿತ್ರಿಬಾಯಿ ಭಾರತದಲ್ಲಿ ಆರಂಭಿಸಿದ್ದ ತಳಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣೆಗೆಗಳ ಕುರಿತು ನಡೆಯುತ್ತಿದ್ದ ರಚನಾತ್ಮಕ ಕೆಲಸಗಳ ವೇಗಕ್ಕೆ ಕಡಿವಾಣ ಬಿದ್ದಿತು. ಒಂದು ಹಂತದಲ್ಲಿ ಹಿಮ್ಮುಖ ಚಲನೆ ಆರಂಭವಾಯಿತು ಎನ್ನಬಹುದು. ಪರಿಣಾಮ ಸ್ವತಂತ್ರ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದ ಮಹನೀಯರ ಪ್ರಯತ್ನಗಳ ಆಚೆಗೆ ಇಂದಿಗೂ ನಮಗೆ ನಮ್ಮ ಅಸ್ಮಿತೆಗಳ ಕುರಿತು 1966ರಲ್ಲಿ ರೂಪುಗೊಂಡ ಧರ್ಮ ಕೇಂದ್ರಿತ ವಿಚಾರಗಳಿಂದ ನಮ್ಮ ಯುವಕರು ಬಿಡಿಸಿಕೊಳ್ಳಲು ಆಗುತ್ತಿಲ್ಲ...

ಮುಂದೆ ನಿಧಾನವಾಗಿ ಜಾತಿವಾದ ತನ್ನ ಮೂಲರೂಪ ಬದಲಿಸಿ ಕೊಂಡು ಮತೀಯ ಚರಿತ್ರೆಯಾಗಿ ವ್ಯಾಪಕವಾಗಿ ಪ್ರಚಾರ ಪಡೆದ ಕಾರಣ ಈ ನೆಲದ ಸಮುದಾಯಸ್ಥಾಯಿ ಚರಿತ್ರೆ ರೂಪಿಸುತ್ತಿದ್ದ ಸಹಜಪ್ರಜ್ಞೆ ಮರೆವಿಗೆ ಒಳಗಾಯಿತು.

 ಅದರ ಜೊತೆ ಜೊತೆಗೆ 1848ರಲ್ಲೇ ಹೆಣ್ಣುಮಕ್ಕಳು/ ದಲಿತರು/ ನಿರ್ಲಕ್ಷಕ್ಕೆ ಒಳಗಾದ ವರಿಗೆ ಶಾಲೆ ತೆರೆದ ಫುಲೆ ದಂಪತಿಯ ಅಸ್ತಿತ್ವದ ಕುರುಹುಗಳನ್ನು, ಫಾತಿಮಾ ಶೇಖ್ ತ್ಯಾಗವನ್ನು ಅಳಿಸುವ ವ್ಯವಸ್ಥಿತ ಪ್ರಯತ್ನ ನಡೆಯಿತು ಇದರ ಒಟ್ಟು ಪರಿಣಾಮವನ್ನು ಇಂದು ಚಾರಿತ್ರಿಕ ಬೆಳವಣಿಗೆಯ ಕುರಿತು ಮರೆವಿಗೆ (Amnesia) ಒಳಗಾಗಿ ಬದುಕುತ್ತಿರುವ ಯುವಕರು ಜಾತಿವಾದದ ರೂಪಾಂತರವಾದ ಧರ್ಮಕೇಂದ್ರಿತ ಚರಿತ್ರೆಯ ಉಪ-ಉತ್ಪನ್ನವಾದ ಹಿಂದುತ್ವವನ್ನು ಬೆಂಬಲಿಸುವ ಸ್ಥಿತಿಗೆ ಬಂದಿದ್ದಾರೆ.

ಒಂದು ಕಾಲದಲ್ಲಿ ಬ್ರಾಹ್ಮಣ, ಗೋವು, ಸ್ತ್ರೀ ಹಾಗೂ ಬಾಲಕ ಇವರ ರಕ್ಷಣೆಗಾಗಿ ಈ ಸಂಕರ ಜಾತಿಯ ಜನರು ಪ್ರಾಣತ್ಯಾಗ ಮಾಡಿದರೆ ಅದರಿಂದ ಅವರಿಗೆ ಸ್ವರ್ಗ ಹಾಗೂ ಸದ್ಗತಿ ದೊರೆಯುತ್ತದೆ. (ಮನುಸ್ಮತಿ-ಅಧ್ಯಾಯ-10, 62) ಎಂದಿದ್ದ ಮನುಧರ್ಮ ಶಾಸ್ತ್ರದ ಸಿದ್ಧಾಂತದಲ್ಲಿನ ಜಾತಿ ಸೂಚಕ ಬ್ರಾಹ್ಮಣ ಎಂಬ ಪದ ಬದಲಿಸಿ ಧರ್ಮ ಸೂಚಕ ಹಿಂದೂ ಪದವನ್ನು ಸೇರಿಸಿ ಹಿಂದೂವಿನ ಗೋವು, ಸ್ತ್ರೀ ಹಾಗೂ ಬಾಲಕ ಇವರ ರಕ್ಷಣೆಗಾಗಿ ಈ ಸಂಕರ ಜಾತಿಯ ಜನರು ಪ್ರಾಣತ್ಯಾಗ ಮಾಡಿದರೆ ಅದರಿಂದ ಅವರಿಗೆ ಸ್ವರ್ಗ ಹಾಗೂ ಸದ್ಗತಿ ದೊರೆಯುತ್ತದೆ ಎಂಬ ನವಿರಾದ ಭಾಷೆಯಲ್ಲಿ ಕಟ್ಟಿದ ಉಗ್ರಧಾರ್ಮಿಕ, ಸಾಂಸ್ಕೃತಿಕ ರಾಜಕೀಯವನ್ನು ಅರಿಯದಷ್ಟು ಮರೆವು ಇಂದು ಸ್ವತಃ ತಳಸಮುದಾಯದ ಹುಡುಗರನ್ನು ಅವರಿಸಿದೆ.

21ನೇ ಶತಮಾನದ ಯುವಮನಸ್ಸುಗಳ ಪ್ರಜ್ಞೆಯನ್ನು ಅವರಿಸಿರುವ ಈ ಸಂಕುಚಿತ ಪರದೆಯನ್ನು ಮೀರಲು ನೈಜ ಚರಿತ್ರೆ ಮತ್ತು ಅದನ್ನು ನಿರ್ವಹಿಸುವ ಸಾಂಸ್ಕೃತಿಕ ರಾಜಕಾರಣದ ಜರೂರು ಇಂದಿದೆ.

ಈ ಹಿನ್ನೆಲೆಯಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಡಿಸೆಂಬರ್ 24ರಂದು ಶಿವಮೊಗ್ಗದಲ್ಲಿ ನಡೆಸಿದ ಸಭೆಯಲ್ಲಿ ಒಂದು ವಿಷಯ ಪ್ರಸ್ತಾಪಿಸಲ್ಪಟ್ಟು ಎಲ್ಲರ ಸಮ್ಮತಿಯೊಡನೆ ಜನವರಿ 3ನೇ ತಾರೀಕು ಭಾರತದ ಮೊದಲ ಶಿಕ್ಷಕಿ, ಜಾತಿ-ಧರ್ಮ-ವರ್ಗ ಭೇದ ಮಾಡದೆ ಎಲ್ಲರಿಗೂ ಅಕ್ಷರದೂಟ ಉಣಬಡಿಸಿದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ. ಆ ದಿನವನ್ನು ಶಿಕ್ಷಕಿಯರ ದಿನಾಚರಣೆ ಎಂದು ನಾವೆಲ್ಲ ಆಚರಿಸುತ್ತಾ ಬಂದಿದ್ದೇವೆ. ಅದನ್ನು ಸರಕಾರವೂ ಘೋಷಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪೋಸ್ಟ್ ಕಾರ್ಡಿನಲ್ಲಿ ಪತ್ರ ಬರೆಯುವ ಅಭಿಯಾನ ನಡೆಸಬೇಕೆಂದು ಯೋಜನೆ ರೂಪಿಸಿದೆ ಎಲ್ಲರೂ ಆ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಸಾವಿತ್ರಿಬಾಯಿ ಫುಲೆಯ ತಾಯ್ತನಕ್ಕೆ ಸೆಗಣಿಯಲ್ಲಿ ಹೊಡೆದ ಕೆಲವು ಜನರ ಮನಸ್ಸು ಇನ್ನೂ ಸೆಗಣಿಯಲ್ಲೆ ಇದೆ. ಅವುಗಳನ್ನು ನೈಜ ಚರಿತ್ರೆಯ ನೆರವಿನಿಂದ ಶುದ್ದೀಕರಿಸೋಣ...

ಮಾನ್ಯ ಮುಖ್ಯಮಂತ್ರಿಗಳೇ,

ಜನವರಿ 3, ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆಯವರ ಜನ್ಮದಿನ. ಆ ತಾಯಿಗೆ ಅಕ್ಷರ ಕಲಿಸುವಲ್ಲಿ ಇದ್ದ ಬದ್ಧತೆ, ಪ್ರೀತಿ, ಕಾಳಜಿಗಳು ಎಲ್ಲರಿಗೂ ಅನುಕರಣೀಯ. ಎಂದೇ ಅವರು ಹುಟ್ಟಿದ ದಿನವನ್ನು ‘ಶಿಕ್ಷಕಿಯರ ದಿನ’ವನ್ನಾಗಿ ಸರಕಾರ ಘೋಷಿಸಬೇಕೆಂದು ಈ ಮೂಲಕ ತಮ್ಮಲ್ಲಿ ಒತ್ತಾಯಿಸುತ್ತಿದ್ದೇವೆ.

 

ಫುಲೆ ದಂಪತಿಗಳು

 

Writer - ಡಾ. ಕಿರಣ್ ಎಂ. ಗಾಜನೂರು

contributor

Editor - ಡಾ. ಕಿರಣ್ ಎಂ. ಗಾಜನೂರು

contributor

Similar News