×
Ad

ಬೆಂಗಳೂರು: ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆದ್ಯತೆ; ಅಪರ ಜಿಲ್ಲಾಧಿಕಾರಿ ನಾಗರಾಜ್

Update: 2017-12-30 20:09 IST

ಬೆಂಗಳೂರು, ಡಿ.30: ಬೆಂಗಳೂರು ನಗರ ಜಿಲ್ಲೆಯಲ್ಲಿ 2011ನೆ ಸಾಲಿನ ಪ್ರಕಾರ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್, ಬೌದ್ಧ ಹಾಗೂ ಜೈನ್ ಸಮುದಾಯ ಸೇರಿದಂತೆ 18,55,032 ಜನಸಂಖ್ಯೆ ಇದ್ದಾರೆಂದು ಅಪರ ಜಿಲ್ಲಾಧಿಕಾರಿ ನಾಗರಾಜ್ ತಿಳಿಸಿದರು.

ಶನಿವಾರ ಬನಶಂಕರಿಯಲ್ಲಿರುವ ಬೆಂಗಳೂರು ನಗರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಅಲ್ಪಸಂಖ್ಯಾತರಿಗೆ ವಿವಿಧ ಇಲಾಖೆಯಿಂದ ದೊರೆತಿರುವ ಸೌಲಭ್ಯಗಳ ಕುರಿತು ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತರ ಇಲಾಖೆಯಿಂದ 2ನೇ ತ್ರೈಮಾಸಿಕದ ಅಂತ್ಯಕ್ಕೆ ಸರಕಾರದ ಕೆಲವೊಂದು ಯೋಜನೆಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದ್ದು, ಇನ್ನು ಸಾಧಿಸುವುದು ಬಾಕಿ ಇದೆ ಎಂದು ಅವರು ಹೇಳಿದರು.

ಈ ಸಮುದಾಯದವರಿಗೆ ಸರಕಾರದ ಯೋಜನೆಗಳ ಮಾಹಿತಿ ತಿಳಿಯಲು ಬೆಂಗಳೂರು ಪೂರ್ವ, ದಕ್ಷಿಣ ಹಾಗೂ ಆನೇಕಲ್ ತಾಲ್ಲೂಕುಗಳಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ, ಹಾಗೂ ಅಲ್ಪಸಂಖ್ಯಾತರ ವೃತ್ತಿನಿರತ ಮಹಿಳೆಯರಿಗಾಗಿ 2 ವಸತಿ ಗೃಹಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಾಗರಾಜ್ ತಿಳಿಸಿದರು.

2017-18ನೆ ಸಾಲಿನಲ್ಲಿ ಶಾಲೆಗಳಿಂದ ಹೊರ ಉಳಿದ ಅಲ್ಪಸಂಖ್ಯಾತರ ಮಕ್ಕಳನ್ನು ಮರಳಿ ಶಾಲೆಗೆ ತರಲು ಈಗಾಗಲೇ ಮುಚ್ಚಲ್ಪಟ್ಟಿರುವ ಸರಕಾರಿ ಜಾಗದಲ್ಲಿ ಆಂಗ್ಲ ಮಾಧ್ಯಮದ ಮೌಲಾನಾ ಆಝಾದ್ ಮಾದರಿಯ 10 ಶಾಲೆಗಳನ್ನು ಬೆಂಗಳೂರು ಉತ್ತರ ಮತ್ತು ದಕ್ಷಿಣ ತಾಲ್ಲೂಕುಗಳಲ್ಲಿ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 11 ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ 2 ವಿದ್ಯಾರ್ಥಿನಿಲಯಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಾಸ್ಟೆಲ್ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ನಾಗರಾಜ್ ಹೇಳಿದರು.

ಕೆಲವೊಂದು ಇಲಾಖೆಯ ಪ್ರಗತಿ ವರದಿಯಲ್ಲಿ ಅಸಮರ್ಪಕ ಮಾಹಿತಿಯಿದ್ದು, ಕೂಡಲೆ ಪೂರ್ಣ ಮಾಹಿತಿಯನ್ನು ಸಲ್ಲಿಸಬೇಕೆಂದು ಇಲಾಖಾ ಅಧಿಕಾರಿಗಳಿಗೆ ಅವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯ ಜಾನ್ಸನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ, ಉಪ ಕಾರ್ಯದರ್ಶಿ ನರಸಿಂಹಯ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News