×
Ad

ಬೆಂಗಳೂರು: ಬಿಗಿ ಬಂದೋಬಸ್ತ್ ನಡುವೆ ಹೊಸ ವರ್ಷ ಆಚರಣೆ

Update: 2017-12-30 22:44 IST

ಬೆಂಗಳೂರು, ಡಿ.30: ಡಿ.31 ರಂದು ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ನಗರದ ಎಂಜಿ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಭದ್ರತೆಗೆ ಸಜ್ಜಾಗಿದ್ದಾರೆ.

ರವಿವಾರ ರಾತ್ರಿ ಮತ್ತು ನಾಳೆ ನಡೆಯುವ ಸಂಭ್ರಮ ಆಚರಣೆ ವೇಳೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು 15 ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಪೊಲೀಸ್ ಭದ್ರತೆ: ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 19 ಮಂದಿ ಡಿಸಿಪಿಗಳು, 49 ಮಂದಿ ಎಸಿಪಿಗಳು, 250 ಮಂದಿ ಪೊಲೀಸ್ ಇನ್ಸ್‌ಪೆಕ್ಟರ್, 400 ಸಬ್ ಇನ್ಸ್‌ಪೆಕ್ಟರ್,700 ಮಂದಿ ಎಎಸ್‌ಐ, 40 ಕೆಎಸ್‌ಆರ್‌ಪಿ, 30 ಸಿಎಆರ್ ತುಕಡಿ, 1500 ಮಂದಿ ಹೋಂಗಾರ್ಡ್ಸ್, ಸಾವಿರ ಮಂದಿ ಸಿವಿಲ್ ಡಿೆನ್ಸ್ ಸಿಬ್ಬಂದಿಯನ್ನು ಕೂಡ ಭದ್ರತೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಅದೇ ರೀತಿ, ಎಂಜಿ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗೆ ವಿಶೇಷ ಆದ್ಯತೆ ನೀಡಿ ಅಲ್ಲಿ 300 ಸಿಸಿಟಿವಿ ಹಾಗೂ ಇತರ ಕಡೆ 200 ಸಿಸಿಟಿವಿಯನ್ನು ಪೊಲೀಸರು ಅಳವಡಿಸಿದ್ದಾರೆ.

ಪಬ್, ಬಾರ್ ಪರಿಶೀಲನೆ: ಮುಂಬೈನ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದ ಬೆನ್ನಲ್ಲೇ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ಅಗ್ನಿಶಾಮಕ ದಳದ ಸಿಬ್ಬಂದಿ ನಗರದ ಎಂ.ಜಿ ರಸ್ತೆ ಸೇರಿ ವಿವಿಧ ಪ್ರದೇಶಗಳ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಿದರು. ದುರಂತದ ಹಿನ್ನೆಲೆಯಲ್ಲಿ ನಗರದಲ್ಲಿರುವ ಪಬ್ ಹಾಗೂ ಬಾರ್‌ಗಳನ್ನು ಪರಿಶೀಲಿಸುವಂತೆ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಎಂ.ಎನ್.ರೆಡ್ಡಿ ಅವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News