ಚರಿತ್ರೆಯ ಮೌನದಲ್ಲಿ ಮಾತನಾಡಬಲ್ಲ ಸ್ಥಳನಾಮಗಳು

Update: 2017-12-30 17:56 GMT

ಡಾ.ರಘುಪತಿ ಕೆಮ್ತೂರು ಅವರ ಅಧ್ಯಯನ ಕೃತಿ ‘ತುಳುನಾಡಿನ ಸ್ಥಳನಾಮಾಧ್ಯನ’ವನ್ನು ಶಿರ್ವ ಎಂ.ಎಸ್.ಆರ್.ಎಸ್. ಕಾಲೇಜಿನ ಚರಿತ್ರೆ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಪ್ರೊ.ಒ.ಮುರುಗೇಶಿ ಪ್ರಕಟಿಸಿದ್ದಾರೆ. ಒಟ್ಟು 360 ಪುಟಗಳ ಈ ಕೃತಿ.ಕಳೆದ ಶತಮಾನದ 70-80ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರಿಗೆ ಸಂಚಾರ ವ್ಯವಸ್ಥೆ, ತಂಗುವ ವ್ಯವಸ್ಥೆಗಳು ಅಷ್ಟಾಗಿ ಇಲ್ಲದ ಕಾಲದಲ್ಲಿ ವ್ಯಾಪಕ ಕಾಲ್ನಡಿಗೆ ಪ್ರವಾಸವನ್ನು ನೆಚ್ಚಿಕೊಂಡು ಸಂಶೋಧಕರು ಭೂ ವಿವರ, ಶಾಸನಶಾಸ್ತ್ರ, ಭಾಷಾಶಾಸ್ತ್ರ, ಜಾನಪದ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾನವ ಶಾಸ್ತ್ರಗಳನ್ನು ಒಳಗೊಂಡ ಬಹುಮುಖೀ ಅಧ್ಯಯನವನ್ನು ಕೈಗೊಂಡಿದ್ದಾರೆ ಎಂಬುವುದಕ್ಕೆ ಒಂದು ದಾಖಲೆ. ಡಾ.ಆರ್.ಕೆ. ಎಂಬ ಹೆಸರಿನಿಂದ ಸಾಹಿತ್ಯ, ಸಂಶೋಧನೆ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಪರಿಚಿತರಾಗಿರುವ ರಘುಪತಿ ಕೆಮ್ತೂರು ಅವರು ನಾಮಗಳನ್ನು ಅಂತರ್ಶಿಸ್ತೀಯ ನೆಲೆಯಲ್ಲಿ ಶೋಧಿಸಿದ್ದಾರೆ. ಆದ್ದರಿಂದ ಅವರಿಗೆ ಅವುಗಳು ಪಕ್ಕಾ ಜಾತ್ಯತೀತ ಮೌಲ್ಯವನ್ನು ಹೊಂದಿವೆ ಎಂಬುದನ್ನು ಹೇಳುವುದಕ್ಕೆ ಸಾಧ್ಯವಾಗಿದೆ.

  ಇಡೆಕ್ ಕಿದು ಇದ್ದದ್ದರಿಂದ ಇಡ್ಕಿದು ಆಯಿತು, ಇವನ್ನೆಲ್ಲ ನಾವು ಕ್ಷೇತ್ರಕಾರ್ಯ ಮಾಡಿದರೆ ಮಾತ್ರ ಪತ್ತೆ ಹಚ್ಚಬಹುದು. ‘ಈ ಸ್ಥಳ ನಾಮಗಳ ಅಧ್ಯಯನದಿಂದ ತುಳು ಸಂಸ್ಕೃತಿಯನ್ನು ಅರಿಯಬಹುದು’ ಎಂಬ ಅಂಶವನ್ನು ಜಪಾನಿನ ಕಿಯೋ ವಿಶ್ವವಿದ್ಯಾನಿಲಯದ ಮಸಾತಕಾ ಸುಝುಕಿ ದಾಖಲಿಸಿರುವುದು ಅಧ್ಯಯನದ ಮಹತ್ವವನ್ನು ಸಾರುತ್ತದೆ. ಸಂಶೋಧಕರು ತಮ್ಮ ಅರಿಕೆಯಲ್ಲಿ ತಿಳಿಸಿದಂತೆ ಈ ಅಧ್ಯಯನ ಆರಂಭಿಕ ಹಂತದಲ್ಲಿ ಮಾರ್ಗದರ್ಶಕರಾಗಿದ್ದವರು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕ್ಕೆ ಸಂಬಂಧಿಸಿ ಮಹತ್ವದ ಸಂಶೋಧನೆ ನಡೆಸಿದ ಡಾ.ಗುರುರಾಜ ಭಟ್ಟರು. ಆದರೆ ಅವರ ಅನಿರೀಕ್ಷಿತ ನಿಧನ ಪ್ರೊ. ಮರಿಯಪ್ಪ ಭಟ್ಟರು ಮಾರ್ಗದರ್ಶಕರಾಗಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿತು. ಸ್ಥಳನಾಮ ಅಧ್ಯಯನದಲ್ಲಿ ಸ್ಥಳನಾಮಗಳ ಅರ್ಥವನ್ನು ಅನುಸರಿಸಿ, ಅವುಗಳ ಘಟಕಗಳನ್ನು ಅಂದರೆ ವಸ್ತುಗಳನ್ನು ಆಧರಿಸಿ, ವಿಶ್ಲೇಷಿಸಿ ನಿರೂಪಿಸುವುದು ತುಲನಾತ್ಮಕವಾಗಿ ಸಮರ್ಪಕ ವಿಧಾನ. ಸಂಶೋಧಕರು 3,000 ಸ್ಥಳ ನಾಮಗಳಿಗೆ ಸಂಬಂಧಿಸಿ ಸ್ಥಳ ಸಮೀಕ್ಷೆ ಮಾಡಿರುವುದನ್ನು ದಾಖಲಿಸಿದ್ದಾರೆ.

ಸ್ಥಳನಾಮಗಳೆಂದರೆ ಚರಿತ್ರೆಯ ಪಳೆಯುಳಿಕೆಗಳು. ಇವುಗಳ ಅಧ್ಯಯನದಿಂದ ಪ್ರಯೋಜನ ಏನು ಎಂಬ ಪ್ರಶ್ನೆ ಸಹಜ. ಅದು ಭೌಗೋಳಿಕ ಅಂಶವನ್ನು, ಪ್ರಕೃತಿಯನ್ನು ಪ್ರತಿನಿಧಿಸುತ್ತದೆ. ಪ್ರಕೃತಿಯೇ ಜನತೆಯ ಸಂಸ್ಕೃತಿ ಇತಿಹಾಸವನ್ನು ನಿರ್ಧರಿಸಿದೆ. ಈ ಸ್ಥಳನಾಮಗಳು ಆ ಸ್ಥಳದ ಮೂಲ ನಿವಾಸಿಗಳ ಜೀವನದ ಚಿತ್ರಣ ಒದಗಿಸಬಲ್ಲವು. ಚರಿತ್ರೆ ಮೌನವಾಗುವಲ್ಲಿ ಸ್ಥಳನಾಮಗಳು ಮಾತನಾಡಲಾರಂಭಿಸುತ್ತವೆ. ಡಾ. ರಘುಪತಿ ಕೆಮ್ತೂರು ಅವರು ಸಾಮಾನ್ಯ ಸ್ಥಳನಾಮವಾದ ‘ಬೊಳ್‌ಜೆ’ಯ ಪ್ರತಿರೂಪವನ್ನು ‘ಬೆಲ್ಜಿಯಂ’ನಲ್ಲಿ ಕಾಣುತ್ತಾರೆ. ಬೆಲ್ಜಿಯಂ ಕೂಡ ಜಲವಾಚಕ ಸ್ಥಳನಾಮ. (ಸೆಲ್ಟಿಕ್ - ಮೂಲದ್ರಾವಿಡ ಭಾಷೆಗಳಲ್ಲಿ ಒಂದು). ಪದೇ ಪದೇ ನೆರೆಹಾವಳಿಗೆ ತುತ್ತಾಗುವ ದೇಶ ಬೆಲ್ಜಿಯಂ, ಅದೇ ರೀತಿ ಪದೇ ಪದೇ ನೆರೆ ಹಾವಳಿಗೆ ತುತ್ತಾಗುವ ಜವುಗು, ನದಿ ದಡದ ಊರುಗಳಿಗೆ ಬೊಳ್‌ಜೆ, ಬೊಳ್ಳಜೆ, ಬೊಳ್ಜ ಹೆಸರಿದೆ ಎನ್ನುವುದನ್ನು ಅವರು ಗುರುತಿಸುತ್ತಾರೆ. ಈ ನಿಟ್ಟಿನಲ್ಲಿ ತಲಸ್ಪರ್ಶಿಯಾದ ಅಧ್ಯಯನ ನಡೆದರೆ ಮೂಲ ದ್ರಾವಿಡ ಜನಾಂಗ ಕೇಂದ್ರವನ್ನು, ವಲಸೆಯ ಮಾರ್ಗವನ್ನು ಗುರುತಿಸಲು ಸಾಧ್ಯವಿದೆ ಎಂಬ ಅವರ ವಾದಕ್ಕೆ ಸಾಕಷ್ಟು ಪುಷ್ಟಿ ದೊರೆಯುತ್ತದೆ. ಮರಗಿಡಗಳೂ ಊರಿನ ಹೆಸರನ್ನು ಪ್ರಭಾವಿಸಿವೆ. ಕದಂಬ ವಂಶದ ಅರಸು ಕದಂಬ ವೃಕ್ಷದ ಬಳಿ ಇದ್ದ ಮನೆಯಲ್ಲಿ ನೆಲೆಸಿದ್ದರೆಂಬ ನಂಬಿಕೆ ಇದೆ. ಈ ಸಸ್ಯ ಸಂಬಂಧಿ ಹೆಸರುಗಳ ಬಗ್ಗೆಯೂ ಅಧ್ಯಯನದಲ್ಲಿ ಗಮನಸೆಳೆದಿರುವ ಸಂಶೋಧಕರು ವಿಕಾಸದ ಹಾದಿಯಲ್ಲಿ ಅಥವಾ ಕೃಷಿ ನಾಗರಿಕತೆ/ ಉದ್ಯಮ ಕ್ರಾಂತಿಯ ಹೊಡೆತಕ್ಕೆ ನಾಶವಾಗಿರುವ ಅನೇಕ ಮರಗಿಡಗಳ, ಪಶು ಪಕ್ಷಿಗಳನ್ನು ಕಂಡು ಹುಡುಕುವ ಸಾಧ್ಯತೆಯನ್ನೂ ಮಂಡಿಸುತ್ತಾರೆ. ಒಂದೇ ಊರಿಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಹೆಸರುಗಳಿರುವ ಬಗ್ಗೆ ಗಮನಸೆಳೆಯುವ ಈ ಕೃತಿಯಲ್ಲಿ ಸಂಶೋಧಕರು ಇದಕ್ಕೆ ಉದಾಹರಣೆಯಾಗಿ ಕೊಡುವ ಉಪ್ಪಿನಂಗಡಿ-ಉಬಾರ್, ಶಿಬರೂರು-ತಿಬಾರ್, ಪಾಣೇರ್-ಪಾಣೆಮಂಗಳೂರು ಈಗಲೂ ಬಳಕೆಯಲ್ಲಿವೆ.

ಸಂಶೋಧಕರು ಸ್ಥಳನಾಮಗಳನ್ನು ಜಲವಾಚಕಗಳು, ಜಲಸಂಬಂಧ ವಾಚಕಗಳ, ಉನ್ನತ ಭೂ ವಾಚಕಗಳು, ಶಿಲಾ ವಾಚಕಗಳು, ಕ್ಷೇತ್ರನಾಮಗಳು, ಮಾರ್ಗವಾಚಕಗಳು, ಸಸ್ಯ ಹಾಗೂ ಪ್ರಾಣಿವಾಚಕಗಳು ಎಂಬ ನೆಲೆಯಲ್ಲಿ ವಿಭಜಿಸಿ ಅಧ್ಯಯನ ಕೈಗೊಂಡಿದ್ದಾರೆ. ತುಳು ನಾಮಗಳ ಸಾಂಸ್ಕೃತಿಕ ಹಿನ್ನೆಲೆ, ಭಾಷಾ ವೈಜ್ಞಾನಿಕ ಹಿನ್ನೆಲೆಗಳಲ್ಲಿ ವಿವೇಚಿಸಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ತುಳು ನಾಮಾಧ್ಯಯನಕ್ಕೆ ಸಂಬಂಧಿಸಿ ಇದೊಂದು ಆಕರ ಕೃತಿಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿದೆ. ಪ್ರತಿಯೊಂದು ಹೆಸರಿಗೂ ಒಂದು ಅರ್ಥವಿದೆ. ಈ ಅರ್ಥದ ಪರಿಧಿಯಲ್ಲಿ ಭಾಷೆ, ಭೂಗೋಳ ಸಂಸ್ಕೃತಿಗಳ ಬೊಕ್ಕಸ ಹುದುಗಿದೆ ಎನ್ನುವ ಸಂಶೋಧಕರ ತೀರ್ಮಾನ ಕ್ರಮಬದ್ಧವಾದ ಸ್ಥಳನಾಮ ಕೋಶವನ್ನು ಹೊರತರಬೇಕೆಂಬ ಆಶಯವನ್ನು ಒಳಗೊಂಡಿದೆ. ಜಿಲ್ಲೆಯ ಸ್ಥಳನಾಮಗಳ ಬಗ್ಗೆ ಇರುವ ಸಾಂಪ್ರದಾಯಿಕ ತಿಳುವಳಿಕೆಯನ್ನು ನಿರ್ಲಕ್ಷಿಸುವ ಸಂಶೋಧಕರು ಅದಕ್ಕೆ ಆಧಾರವನ್ನು ಕೊಡುತ್ತಾರೆ. ಮೊಗವೀರಪಟ್ಟಗಳಿಗೆ ಅವರು ಕೊಡುವ ಭೂವಾಚಿಕ ಮತ್ತು ಆ ಸಮುದಾಯ ಏಕೀಕರಣದ ಬಗ್ಗೆ ಹೊಂದಿರುವ ಅಪರೂಪದ ಕಾಳಜಿಯನ್ನು ಪ್ರತಿನಿಧಿಸುತ್ತದೆ. ಇಂದಿಗೂ ಮೊಗವೀರರ ಒಗ್ಗಟ್ಟು ಬಹಳ ಪ್ರಸಿದ್ಧ ಆಡುಮಾತಾಗಿ ಉಳಿದಿರುವುದನ್ನು ಇಲ್ಲಿ ಸ್ಮರಿಸಬಹುದು. ಸಮುದ್ರದ ಸಮೀಪದಲ್ಲಿ ಸ್ವಲ್ಪ ಎತ್ತರದಲ್ಲಿರುವ ಮೊಗವೀರರ ಕೇರಿಯನ್ನು ಈ ಸ್ಥಳನಾಮ ನಿರ್ದೇಶಿಸುತ್ತದೆ ಎನ್ನುವುದಕ್ಕೆ ಮಂಗಳೂರು ಉಳ್ಳಾಲ ಬಳಿ ಇರುವ ಮೊಗವೀರ ವಾಸಸ್ಥಾನವನ್ನು ನೋಡಿದರೆ ತಿಳಿಯುತ್ತದೆ. ಈಗ ಕಡಲು ಕೊರೆತದಿಂದ ಸ್ವಲ್ಪಮಟ್ಟಿಗೆ ಭೂಲಕ್ಷಣಗಳಲ್ಲಿ ವ್ಯತ್ಯಾಸ ಕಂಡುಬರಬಹುದಾದರೂ ಅದು ಸಮುದ್ರಕ್ಕಿಂತ ಕೊಂಚ ಎತ್ತರದ ಪ್ರದೇಶ ಎಂಬುದಕ್ಕೆ ಸ್ಥಳ ಸಾಕ್ಷಿ ಇದೆ. ಮೊಗವೀರರ 14 ಪಟ್ಟಗಳೆಂಬ ಹೆಸರು ಅವರ ಸಾಮಾಜಿಕ ವ್ಯವಸ್ಥೆಯನ್ನು, ಸಮಸ್ಯೆಗಳನ್ನು ಒಂದು ಚೌಕಟ್ಟಿನಲ್ಲಿ ಬಗೆಹರಿಸುವ ವ್ಯವಸ್ಥೆಯನ್ನು ಹೊಂದಿರುವುದರತ್ತ ಸಂಶೋಧಕರು ಗಮನಸೆಳೆದಿದ್ದಾರೆ. ಅದೇ ರೀತಿ ಒಳನಾಡಿನಲ್ಲಿರುವ ಹೊಳೆ ಬದಿಯಲ್ಲಿರುವ ಪಟ್ಟಗಳ ಬಗ್ಗೆಯೂ ಅವರು ವಿವರಗಳನ್ನು ಒದಗಿಸಿದ್ದಾರೆ. ‘‘ಪರಾರಿ’’ ಎಂಬುದು ಒಂದು ಹೀನಾರ್ಥದಲ್ಲಿ ಓಡಿಹೋದವರು ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ. ಸ್ಥಳನಾಮವಾಗಿರುವ ಸಂದರ್ಭದಲ್ಲಿ ಪರಾರಿ ಎಂಬುವುದು ತುಳು ಭಾಷೆಯಲ್ಲಿ ಹಳೆಯ ಅಕ್ಕಿ ದಾಸ್ತಾನಿ ಇರುವ ಶ್ರೀಮಂತರ ನೆಲೆ ಎಂಬುದರತ್ತ ಅವರು ಗಮನಸೆಳೆಯುತ್ತಾರೆ. ಇಂತಹ ಮನೆಗಳಿಗೆ ಪರಾರಿ ಮನೆ ಎಂಬ ಹೆಸರು ಇಂದಿಗೂ ಇದೆ. ಒಂದು ಜಾತಿಯ ‘‘ನೆಕ್ಕರೆ’’. ಅದರ ಹೆಸರಿನಲ್ಲಿರುವ ಊರುಗಳು - ಕೇಪುಳ: ಕೇಪುಗಳ ಜಡ್ಡು, ಕಬ್ಬು: ಕಬ್ಬಿನಾಳೆ, ಅಡಕೆ/ಕಂಗು : ಕಂಗಿಲ, ಕಂಬಿಬೆಟ್ಟು, ಗೇರು: ಗೇರುಕಟ್ಟೆ, ಬೀಜತ್ತಡ್ಕ, ಬಾಳೆ: ಬಾಳಿಲ, ಬಾಳೆಪುಳಿ, ಬಾರ್ದಿಲ, ನುಗ್ಗೆ: ನುಗ್ಗೆಕೋಡಿ. ಇತ್ಯಾದಿಗಳು ಆಸಕ್ತರಿಗೆ ಅರಿವಿನ ಮರು ಓದಿನ ಖಜಾನೆಯನ್ನು ತೆರೆಯಬಲ್ಲವು.

ಸಂಶೋಧಕರು ವಹಿಸಿದ ಚಾರಿತ್ರಿಕ ಎಚ್ಚರ, ತುಲನಾತ್ಮಕ ಅಧ್ಯಯನ, ಶಾಸನಗಳಿಂದ ಸಂಗ್ರಹಿಸಿದ ಮಾಹಿತಿ, ಜೊತೆಗೆ ಸ್ಥಳವೀಕ್ಷಣೆಯಿಂದ ಕಂಡುಕೊಂಡ ಸತ್ಯಗಳು, ಸ್ಥಳೀಯರೊಂದಿಗೆ ಬೆರೆತು ಸಂಗ್ರಹಿಸಿದ ಪಾರಂಪರಿಕ ಜ್ಞಾನ- ಇವೆಲ್ಲವೂ ಈ ಕೃತಿಯ ಮಹತ್ವವನ್ನು ಹೆಚ್ಚಿಸಿವೆ, ತುಳುನಾಡಿನ ಸ್ಥಳನಾಮಗಳ ಬಗ್ಗೆ ಸಂಶೋಧನೆಗೆ ಹೊರಡುವವರಿಗೆ ಇದು ದಾರಿ ತೋರಿಸುವ ಮಾರ್ಗದರ್ಶಿಯೂ ಆಗಿದೆ.

 

 ಡಾ. ರಘುಪತಿ ಕೆಮ್ತೂರು

Writer - ಡಾ. ನಾಗವೇಣಿ ಮಂಚಿ

contributor

Editor - ಡಾ. ನಾಗವೇಣಿ ಮಂಚಿ

contributor

Similar News