ಭಾರತ-ಪಾಕ್ ಭದ್ರತಾ ಸಲಹೆಗಾರರಿಂದ ಥೈಲ್ಯಾಂಡ್‌ನಲ್ಲಿ ರಹಸ್ಯ ಸಭೆ!

Update: 2018-01-01 17:19 GMT

ಇಸ್ಲಾಮಾಬಾದ್,ಜ.1: ಭಾರತ ಹಾಗೂ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು, ಕಳೆದ ವಾರ ಥೈಲ್ಯಾಂಡ್‌ನಲ್ಲಿ ರಹಸ್ಯ ಮಾತುಕತೆ ನಡೆಸಿರುವುದಾಗಿ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.ಆದರೆ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

   ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಅವರ ಪಾಕ್ ಸಹವರ್ತಿ ಲೆ.ಜ. (ನಿವೃತ್ತ) ನಾಸರ್ ಖಾನ್ ಜನುಜಾ ನಡುವೆ ಥೈಲ್ಯಾಂಡ್‌ನಲ್ಲಿ ಡಿಸೆಂಬರ್ 27ರಂದು ರಹಸ್ಯ ಮಾತುಕತೆ ನಡೆದಿರುವುದಾಗಿ ಹೆಸರು ಬಹಿರಂಗಪಡಿಸಲಿಚ್ಛಿಸದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಪಾಕಿಸ್ತಾನದ ಸುದ್ದಿಪತ್ರಿಕೆ ಡಾನ್‌ನಲ್ಲಿ ಪ್ರಕಟವಾ ವರದಿಯೊಂದು ತಿಳಿಸಿದೆ.

‘‘ ಮಾತುಕತೆಯು ಉತ್ತಮವಾಗಿತ್ತು. ಅಜಿತ್ ಧೋವಲ್ ಅವರ ಮಾತಿನ ಧ್ವನಿ ಹಾಗೂ ಇಂಗಿತ ಸ್ನೇಹಯುತವಾಗಿತ್ತು ಮತ್ತು ಸಕಾರಾತ್ಮಕವಾಗಿತ್ತು ’’ಎಂದು ಪಾಕಿಸ್ತಾನಿ ಅಧಿಕಾರಿ ಹೇಳಿರುವುದಾಗಿ ಡಾನ್ ತಿಳಿಸಿದೆ.

ಮಾತುಕತೆಯು ಅತ್ಯಂತ ಪ್ರಯೋಜನಕಾರಿಯಾಗಿತ್ತು ಹಾಗೂ ರಾಜತಾಂತ್ರಿಕ ಮಟ್ಟದಲ್ಲಿಯೂ ಮಾತುಕತೆಯನ್ನು ಒಂದು ರೀತಿಯಲ್ಲಿ ಮುಂದಕ್ಕೊಯ್ಯಲು ಇದು ನೆರವಾಗುವ ಸಾಧ್ಯತೆಯಿದೆಯೆಂದು ಪಾಕ್ ಅಧಿಕಾರಿ ಅಭಿಪ್ರಾಯಿಸಿರುವುದಾಗಿ ವರದಿ ತಿಳಿಸಿದೆ. ಬೇಹುಗಾರಿಕೆಯ ಆರೋಪದಲ್ಲಿ ಪಾಕ್‌ನಲ್ಲಿ ಗಲ್ಲುಶಿಕ್ಷೆ ಎದುರಿಸುತ್ತಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್‌ರನ್ನು ಅವರ ತಾಯಿ ಮತ್ತು ಪತ್ನಿ, ಡಿಸೆಂಬರ್ 25ರಂದು ಭೇಟಿಯಾದ ಎರಡು ದಿನಗಳ ಬಳಿಕ ಈ ಮಾತುಕತೆ ನಡೆದಿರುವುದಾಗಿ ವರದಿಯು ಹೇಳಿದೆ.

 ಮಾನವೀಯ ನೆಲೆಯಲ್ಲಿ ಜಾಧವ್‌ರನ್ನು ಅವರ ಕುಟುಂಬಿಕರು ಭೇಟಿಯಾಗುವುದಕ್ಕೆ ಅವಕಾಶ ನೀಡಿರುವುದಾಗಿ ಪಾಕ್ ಹೇಳಿದರೆ, ಭಾರತವು ಉಭಯ ದೇಶಗಳ ನಡುವಿನ ತಿಳುವಳಿಕಾ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಮತ್ತು ಬಂಧಿಖಾನೆಯಲ್ಲಿ ಜಾಧವ್‌ರನ್ನು ಬೆದರಿಸಿ, ಬಲವಂತವಾಗಿ ಅವರಿಂದ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತಿದೆಯೆಂದು ಭಾರತ ಆರೋಪಿಸಿದೆ.

ಜಾಧವ್‌ರನ್ನು ಭೇಟಿಯಾಗುವ ಸಮಯದಲ್ಲಿ ಪಾಕಿಸ್ತಾನವು ಭದ್ರತೆಯ ನೆಪದಲ್ಲಿ ಅವರ ಕುಟುಂಬಿಕರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿಯೂ ಭಾರತ ದೂರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News