ಹಾಫಿಝ್‌ನ ದತ್ತಿಸಂಸ್ಥೆ, ಆಸ್ತಿಪಾಸ್ತಿ ವಶಕ್ಕೆ ಪಾಕ್ ಸಿದ್ಧತೆ?

Update: 2018-01-01 17:54 GMT

ಇಸ್ಲಾಮಾಬಾದ್, ಜ.1: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಜಮಾಅತುದ್ದಾವಾ ಸಂಘಟನೆಯ ನಾಯಕ ಹಾಫಿಝ್‌ ಸಯೀದ್‌ಗೆ ಸಂಬಂಧಿಸಿದ ದತ್ತಿಸಂಸ್ಥೆಗಳು ಹಾಗೂ ಆರ್ಥಿಕ ಸಂಪತ್ತಿನ ಮೇಲೆ ನಿಯಂತ್ರಣ ಸಾಧಿಸಲು ಪಾಕ್ ಸರಕಾರ ಯೋಚಿಸುತ್ತಿರುವುದಾಗಿ ಅಮೆರಿಕದ ಸುದ್ದಿಸಂಸ್ಥೆ ರಾಯ್ಟರ್ಸ್‌ ವರದಿ ಮಾಡಿದೆ.

ಡಿಸೆಂಬರ್ 19ರಂದು ಪಾಕ್ ಸರಕಾರವು ದೇಶದ ವಿವಿಧ ಪ್ರಾಂತೀಯ ಹಾಗೂ ಫೆಡರಲ್ ಸರಕಾರಿ ಇಲಾಖೆಗಳಿಗೆ ರಹಸ್ಯವಾಗಿ ಕಳುಹಿಸಿದ ಆದೇಶವೊಂದರಲ್ಲಿ ಹಾಫೀಝ್‌ಗೆ ಸಂಬಂಧಿಸಿದ ಆಸ್ತಿಪಾಸ್ತಿಗಳ ಮೇಲೆ ನಿಯಂತ್ರಣ ಸಾಧಿಸುವ ತನ್ನ ಯೋಜನೆಯನ್ನು ವಿವರಿಸಿದೆ.

 ಪಾಕ್ ವಿತ್ತ ಸಚಿವಾಲಯವು ಡಿಸೆಂಬರ್ 19ರಂದು ಪಾಕಿಸ್ತಾನದ ಕಾನೂನು ಅನುಷ್ಠಾನ ಇಲಾಖೆಗಳು ಹಾಗೂ ಐದು ಪ್ರಾಂತೀಯ ಸರಕಾರಗಳಿಗೆ ಬರೆದ ರಹಸ್ಯ ಪತ್ರದಲ್ಲಿ ಹಾಫಿಝ್‌ ಸಯೀದ್ನ ಎರಡು ದತ್ತಿ ಸಂಸ್ಥೆಗಳಾದ ಜಮಾಅತುದ್ದಾವಾ ಹಾಗೂ ಫಲಹೆ ಇನ್ಸಾನಿಯತ್(ಎಫ್‌ಐಎಫ್) ಪ್ರತಿಷ್ಠಾನಗಳನ್ನು ವಶಪಡಿಸಿಕೊಳ್ಳುವ ಕುರಿತು ಡಿಸೆಂಬರ್ 28ರೊಳಗೆ ಕ್ರಿಯಾ ಯೋಜನೆಯೊಂದನ್ನು ಸಲ್ಲಿಸುವಂತೆ ತಿಳಿಸಿದೆ.

  ಹಾಫಿಝ್‌ಗೆ ನೇತೃತ್ವದ ಜಮಾತುದ್ದವಾ ಹಾಗೂ ಎಫ್‌ಐಎಫ್ ಗುಂಪುಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಅಮೆರಿಕ ಘೋಷಿಸಿದೆ. 2008ರಲ್ಲಿ 166 ಮಂದಿ ಹತ್ಯೆಯಾದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹಾಫಿಝ್‌ ಸಯೀದ್‌ನ ಕೈವಾಡವಿರುವುದಾಗಿ ಭಾರತ ಹಾಗೂ ಅಮೆರಿಕ ಆರೋಪಿಸುತ್ತಿವೆ.

 ಮುಂಬೈ ದಾಳಿಯಲ್ಲಿ ತನ್ನ ಪಾತ್ರವಿರುವುದನ್ನು ಹಾಫಿಝ್‌ ಅಲ್ಲಗಳೆದಿದ್ದಾನೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿ ಆತನ ವಿರುದ್ಧ ಸಾಕ್ಷಾಧಾರಗಳ ಕೊರತೆಯಿರುವುದಾಗಿ ಪಾಕ್ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News