2018ರಲ್ಲಿ ನಡೆಯಲಿದೆ ಫಿಫಾ ವಿಶ್ವಕಪ್, ಕಾಮನ್ವೆಲ್ತ್ ಗೇಮ್ಸ್

Update: 2018-01-01 18:45 GMT

ಹೊಸದಿಲ್ಲಿ, ಜ.1: 2018ನೇ ವರ್ಷ ಕ್ರೀಡಾಭಿಮಾನಿಗಳಿಗೆ ಸ್ಮರಣೀಯವಾಗುಳಿಯುವ ಎಲ್ಲ ಸಾಧ್ಯತೆ ಗೋಚರಿಸುತ್ತಿದೆ. ಈ ವರ್ಷ ಆರಂಭದಿಂದ ಕೊನೆಯ ತನಕ ಕ್ರೀಡಾಭಿಮಾನಿಗಳು ಟಿವಿ ಮುಂದೆಯೇ ಇರಬೇಕಾಗುತ್ತದೆ, ಇಲ್ಲವೇ ಸ್ಟೇಡಿಯಂನತ್ತ ಧಾವಿಸಬೇಕಾಗುತ್ತದೆ. ಈ ವರ್ಷ ಫಿಫಾ ವಿಶ್ವಕಪ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ಗಳು ನಡೆಯಲಿದೆ.

►ಫಿಫಾ ವಿಶ್ವಕಪ್ 2018(ಜೂ.14-ಜುಲೈ 15)

 ಈ ವರ್ಷ ಫಿಫಾ ವಿಶ್ವಕಪ್ ರಶ್ಯದಲ್ಲಿ ಜೂ.14 ರಿಂದ ಜು.15ರ ತನಕ ಒಂದು ತಿಂಗಳ ಕಾಲ ನಡೆಯಲಿದ್ದು, ವಿಶ್ವದ ಶ್ರೇಷ್ಠ ಆಟಗಾರರು ಒಂದೇ ಸ್ಥಳದಲ್ಲಿ ಸೇರಲಿದ್ದಾರೆ. ಬಲಿಷ್ಠ ತಂಡಗಳಾಗಿರುವ ಇಟಲಿ, ಹಾಲೆಂಡ್ ಹಾಗೂ ಚಿಲಿ ಈ ವರ್ಷದ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗಿವೆ. ಅರ್ಜೆಂಟೀನದ ಲಿಯೊನೆಲ್ ಮೆಸ್ಸಿ ಯುರೋ ಚಾಂಪಿಯನ್ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಸ್ಮರಣೀಯ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಈ ಇಬ್ಬರು ಸ್ಟಾರ್ ಆಟಗಾರರಿಗೆ ಈ ವಿಶ್ವಕಪ್ ಕೊನೆಯದಾಗುವ ಸಾಧ್ಯತೆಯಿದೆ.

►2018 ಕಾಮನ್‌ವೆಲ್ತ್ ಗೇಮ್ಸ್(ಎಪ್ರಿಲ್ 4-15)

2018ರ ಕಾಮನ್‌ವೆಲ್ತ್ ಗೇಮ್ಸ್ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್ ನಗರದಲ್ಲಿ ಎಪ್ರಿಲ್ 4 ರಿಂದ 15ರ ತನಕ ನಡೆಯಲಿದೆ. ಆಸ್ಟ್ರೇಲಿಯ ಐದನೇ ಬಾರಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸುತ್ತಿದೆ. ಬ್ರಿಸ್ಬೇನ್, ಮೆಲ್ಬೋರ್ನ್, ಸಿಡ್ನಿ ಹಾಗೂ ಪರ್ತ್ ನಗರಗಳು ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯವಹಿಸಿಕೊಂಡಿದ್ದವು. 11 ದಿನಗಳ ಸ್ಪರ್ಧೆಯಲ್ಲಿ 70 ದೇಶಗಳು ಭಾಗವಹಿಸುವ ನಿರೀಕ್ಷೆಯಿದೆ. 6,600ಕ್ಕೂ ಅಧಿಕ ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳು 18 ಕ್ರೀಡೆಗಳ 275 ಇವೆಂಟ್‌ಗಳಲ್ಲಿ ಭಾಗವಹಿಸಲು ಗೋಲ್ಡ್‌ಕೋಸ್ಟ್‌ಗೆ ತೆರಳಲಿದ್ದಾರೆ.

►2018 ಚಳಿಗಾಲದ ಒಲಿಂಪಿಕ್ ಗೇಮ್ಸ್( ಫೆ .9-25)

2018ರ ಚಳಿಗಾಲದ ಒಲಿಂಪಿಕ್ ಗೇಮ್ಸ್ ದಕ್ಷಿಣ ಕೊರಿಯಾದಲ್ಲಿ ಫೆ.9 ರಿಂದ 25ರ ತನಕ ನಡೆಯಲಿದೆ. ದಕ್ಷಿಣ ಕೊರಿಯಾ ಇದೇ ಮೊದಲ ಬಾರಿ ಚಳಿಗಾಲದ ಒಲಿಂಪಿಕ್ಸ್ ಆತಿಥ್ಯವಹಿಸಿದೆ. ದ.ಕೊರಿಯಾ ಈಗಾಗಲೇ 1998ರಲ್ಲಿ ಸಿಯೊಲ್‌ನಲ್ಲಿ ಬೇಸಿಗೆ ಒಲಿಂಪಿಕ್ಸ್‌ನ ಆತಿಥ್ಯವಹಿಸಿಕೊಂಡಿತ್ತು. ಗೇಮ್ಸ್‌ನಲ್ಲಿ 15 ಕ್ರೀಡೆಗಳ 102 ಇವೆಂಟ್‌ಗಳಿದ್ದು, 100ಕ್ಕೂ ಅಧಿಕ ಪದಕಗಳನ್ನು ನೀಡಲಾಗುತ್ತದೆ.

►2018 ಏಷ್ಯನ್ ಗೇಮ್ಸ್(ಆಗಸ್ಟ್ 18-ಸೆಪ್ಟಂಬರ್2): 2018ರ ಏಷ್ಯನ ಗೇಮ್ಸ್ ನ್ನು ಇಂಡೋನೇಷ್ಯಾದ ಜಕಾರ್ತ ಹಾಗೂ ಪಾಲೆಂಬಂಗ್ ನಗರಗಳು ಜಂಟಿಯಾಗಿ ಆಯೋಜಿಸುತ್ತಿವೆ. ಇದೇ ಮೊದಲ ಬಾರಿ ಎರಡು ನಗರಗಳು ಏಷ್ಯನ್ ಗೇಮ್ಸ್‌ನ್ನು ಜಂಟಿಯಾಗಿ ಅಯೋಜಿಸುತ್ತಿದ್ದು, ಏಷ್ಯನ್ ಗೇಮ್ಸ್‌ನಲ್ಲಿ 40 ಕ್ರೀಡೆಗಳ 462 ಇವೆಂಟ್‌ಗಳಿರುತ್ತವೆ. 45 ದೇಶಗಳು ಗೇಮ್ಸ್‌ನಲ್ಲಿ ಭಾಗವಹಿಸುತ್ತಿವೆ.

ಜನವರಿ 13 ರಿಂದ ಫೆಬ್ರವರಿ 5ರ ತನಕ ನ್ಯೂಝಿಲೆಂಡ್‌ನಲ್ಲಿ ಅಂಡರ್-19 ವಿಶ್ವಕಪ್ ನಡೆಯಲಿದ್ದು, ಪೃಥ್ವಿ ಶಾ ನೇತೃತ್ವದಭಾರತ ತಂಡ ಈಗಾಗಲೇ ಕಿವೀಸ್ ನಾಡಿಗೆ ತೆರಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News