×
Ad

ಬೆಂಗಳೂರು, ಬೆಳಗಾವಿಯಲ್ಲಿ ಖಾದಿ ಪ್ಲಾಜಾ ನಿರ್ಮಾಣ: ಸಚಿವೆ ಮೋಹನ್‌ಕುಮಾರಿ

Update: 2018-01-02 21:52 IST

ಬೆಂಗಳೂರು, ಜ.2: ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ‘ಖಾದಿ ಪ್ಲಾಜಾ’ ನಿರ್ಮಿಸಲಾಗುತ್ತಿದೆ ಎಂದು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವೆ ಎಂ.ಸಿ.ಮೋಹನ್ ಕುಮಾರಿ ತಿಳಿಸಿದ್ದಾರೆ.

ಮಂಗಳವಾರ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ‘ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಖಾದಿ ಉತ್ಸವ-2018 ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಖಾದಿ ಉತ್ಪನ್ನಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಖಾದಿ ಪ್ಲಾಜಾಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರತಿ ಖಾದಿ ಪ್ಲಾಜಾಗೆ 10 ಕೋಟಿರೂ. ನೀಡಲಾಗುತ್ತಿದೆ. ಪ್ರಾರಂಭಿಕ ಹಂತವಾಗಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ತೆರೆಯಲಾಗುತ್ತಿದೆ. ಬೇಡಿಕೆ ಬಂದಂತೆಲ್ಲಾ ಎಲ್ಲ ಜಿಲ್ಲೆಗಳಲ್ಲೂ ಖಾದಿ ಪ್ಲಾಜಾಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.

ಮಾರುಕಟ್ಟೆ ಅಭಿವೃದ್ಧಿ ಸಹಾಯಧನ ಯೋಜನೆಯಡಿ ಶೇ.15ರಷ್ಟು ಸಹಾಯಧನ ನೀಡಲಾಗುತ್ತಿದ್ದು, ಅದರಂತೆ ಕಳೆದ 5ವರ್ಷಗಳಿಂದ 146ಸಂಘ, ಸಂಸ್ಥೆಗಳಿಗೆ 6540ಲಕ್ಷ ರೂ.ಗಳನ್ನು ನೀಡಲಾಗಿದೆ. ಹಾಗೂ ಕಸುಬುದಾರರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಪ್ರೋತ್ಸಾಹಧನವನ್ನು ನೀಡಲಾಗುತ್ತಿದ್ದು, ಕಳೆದ 5ವರ್ಷಗಳಲ್ಲಿ 18ಸಾವಿರ ಕಸುಬುದಾರರಿಗೆ 5248ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಖಾದಿ ಬ್ರಾಂಡಿಂಗ್ ಯೋಜನೆಯಡಿಯಲ್ಲಿ ಕೆಲಸಗಾರರಿಗೆ ನವನವೀನ ರೀತಿಯ ಸಿದ್ಧ ಉಡುಪುಗಳನ್ನು ತಯಾರಿಸುವುದನ್ನು ‘ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ’ ಸಂಸ್ಥೆಯ ಮೂಲಕ 258 ಕಸುಬುದಾರರಿಗೆ ತರಬೇತಿ ನೀಡಲಾಗಿದೆ. ಇದಕ್ಕಾಗಿ ರಾಜ್ಯ 2ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಿದ್ದೇವೆಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಮಾತನಾಡಿ, ದೇಶದ ಸ್ವಾತಂತ್ರ ಚಳವಳಿಯಲ್ಲಿ ಖಾದಿ ಬಹುಮುಖ್ಯವಾದ ಪಾತ್ರವಹಿಸಿದೆ. ಮಹಾತ್ಮ ಗಾಂಧೀಜಿ ಖಾದಿಯನ್ನು ಸ್ವಾತಂತ್ರ ಹಾಗೂ ಸ್ವಾಭಿಮಾನದ ಸಂಕೇತವಾಗಿ ಬಳಸುತ್ತಿದ್ದರು. ನಾವು ಖಾದಿ ಬಟ್ಟೆ ಹಾಗೂ ಉತ್ಪನ್ನಗಳನ್ನು ಬಳಸುತ್ತೇವೆಂದರೆ ದೇಶವನ್ನು ಪ್ರೀತಿಸಿದಂತೆಯೇ ಎಂದು ತಿಳಿಸಿದರು.

ಖಾದಿಯ ಇತಿಹಾಸವನ್ನು ಯುವ ಜನತೆಗೆ ತಿಳಿಸಬೇಕಾಗಿದೆ. ಖಾದಿ ವಸ್ತುಗಳ ಉಪಯೋಗದಿಂದ ದೇಶದ ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಖಾದಿ ಉತ್ಪನ್ನಗಳ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಯುವ ಸಮುದಾಯ ಖಾದಿ ಕ್ಷೇತ್ರದತ್ತ ಆಕರ್ಷಿತರನ್ನಾಗಿ ಮಾಡಬೇಕು ಎಂದು ಅವರು ಆಶಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶವನ್ನು ಉದ್ಘಾಟಿಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಖಾದಿ ಮಂಡಳಿಯ ಅಧ್ಯಕ್ಷ ಯಲುವನಹಳ್ಳಿ ಎನ್.ರಮೇಶ್, ಹಿರಿಯ ಸ್ವಾತಂತ್ರ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ಪಾಟೀಲ ಪುಟ್ಟಪ್ಪ ಮತ್ತಿತರರಿದ್ದರು.

ಖಾದಿ ಉದ್ಯಮಕ್ಕೆ ಪ್ರತ್ಯೇಕ ಇಲಾಖೆಯಿರಲಿ
ಸ್ವಾತಂತ್ರ ಬಂದು ಏಳು ದಶಕಗಳು ಕಳೆದಿದ್ದರೂ ಖಾದಿ ಉದ್ಯಮ ಶೋಚನೀಯ ಸ್ಥಿತಿಯಲ್ಲಿದೆ. ಇಂದಿಗೂ ದೇಶದ ಬಟ್ಟೆ ಉದ್ಯಮದಲ್ಲಿ ಖಾದಿ ಉದ್ಯಮ ಕೊಡುಗೆ ಶೇ.1ರಷ್ಟನ್ನು ದಾಟಿಲ್ಲ. ಇದಕ್ಕೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಕೈಗಾರಿಕಾ ಇಲಾಖೆಯಲ್ಲಿ ಇರುವುದೇ ಕಾರಣವಾಗಿದೆ. ಈ ಇಲಾಖೆ ಖಾದಿ ಉದ್ಯಮದ ಕುರಿತು ಮಲತಾಯಿ ಧೋರಣೆ ತಾಳಿದೆ. ಹೀಗಾಗಿ ಖಾದಿ ಉದ್ಯಮ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ಇಲಾಖೆ ಸ್ಥಾಪನೆಯಾಗಬೇಕು.
-ಎಚ್.ಎಸ್.ದೊರೆಸ್ವಾಮಿ ಹಿರಿಯ ಸ್ವಾತಂತ್ರ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News