ಬೆಂಗಳೂರು: ವಿನಯ್‌ರಾಜ್‌ಕುಮಾರ್ ಫೋಟೋ ಶೂಟ್ ಪ್ರಕರಣದ ತನಿಖೆ ನಡೆಸಲು ಕೋರಿ ಅರ್ಜಿ ಸಲ್ಲಿಕೆ
ಬೆಂಗಳೂರು, ಡಿ.2: ನಿಯಮ ಉಲ್ಲಂಘಿಸಿ ನಗರದ ಹೈಕೋರ್ಟ್ ಆವರಣದೊಳಗೆ ಅನಂತು ವರ್ಸಸ್ ನಸ್ರತ್ ಚಿತ್ರದ ನಾಯಕ ನಟ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೂಟ್ ನಡೆಸಿದ ಪ್ರಕರಣದ ತನಿಖೆ ನಡೆಸಲು ವಿಧಾನಸೌಧ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನಿರ್ದೇಶಿಸುವಂತೆ ಕೋರಿ ವಕೀಲ ಎನ್.ಪಿ.ಅಮೃತೇಶ್ ಹೈಕೋರ್ಟ್‌ಗೆ ಮಂಗಳವಾರ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಸರಕಾರದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹೈಕೋರ್ಟ್ ಸಹಾಯಕ ಪೊಲೀಸ್ ಆಯುಕ್ತರು ಮತ್ತು ವಿಧಾನಸೌಧ ಸಬ್ ಇನ್ಸ್‌ಪೆಕ್ಟರ್ ಅವರನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿಯು ಶೀಘ್ರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.
ನಗರದ ಹೈಕೋರ್ಟ್ ಆವರಣ ಮತ್ತು ಬೆಂಗಳೂರು ವಕೀಲರ ಸಂಘದ ಗ್ರಂಥಾಲಯದಲ್ಲಿ 2017ರ ಆ.15ರಂದು ಅನಂತು ವರ್ಸಸ್ ನಸ್ರತ್ ಚಿತ್ರಕ್ಕಾಗಿ ನಾಯಕ ನಟ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೂಟ್ ನಡೆಸಲಾಗಿತ್ತು. ಈ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಲಾಂಛನಗಳು ಮತ್ತು ಹೆಸರುಗಳು (ಅನುಚಿತ ನಿಯಂತ್ರಣ) ಕಾಯ್ದೆ-1950ರ ಪ್ರಕಾರ ಸಂಸತ್, ರಾಜ್ಯ ಶಾಸನಸಭೆ, ಸುಪ್ರೀಂಕೋರ್ಟ್, ರಾಜ್ಯ ಹೈಕೋರ್ಟ್, ಕೇಂದ್ರ ಸಚಿವಾಲಯ ಅಥವಾ ರಾಜ್ಯ ಸಚಿವಾಲಯ ಹಾಗೂ ಇತರೆ ಸರಕಾರಿ ಕಚೇರಿಗಳ ಹೆಸರು ಅಥವಾ ಈ ಮೇಲ್ಕಂಡ ಕಚೇರಿ ಕಟ್ಟಡಗಳ ಚಿತ್ರಗಳನ್ನು ಬಳಸುವುದು ನಿಷಿದ್ಧ. ಈ ನಿಯಮ ಮತ್ತು ಹೈಕೋರ್ಟ್ ಭದ್ರತಾ ವ್ಯವಸ್ಥೆ ಉಲ್ಲಂಘಿಸಿ, ಹೈಕೋರ್ಟ್ ಆಚರಣದಲ್ಲಿ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೂಟ್ ನಡೆಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಹಳದಿ ನಾಮಫಲಕದ ವಾಹನ, ಮಾಧ್ಯಮದವರ ಕ್ಯಾಮರಾ ಹಾಗೂ ಲ್ಯಾಪ್‌ಟಾಪ್ ಸೇರಿ ಇನ್ನಿತರ ವಸ್ತುಗಳನ್ನು ಹೈಕೋರ್ಟ್ ಆವರಣದೊಳಗೆ ತರುವಂತಿಲ್ಲ. ಅದಕ್ಕಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಅನುಮತಿ ಪಡೆಯಬೇಕು. ಫೋಟೋ ಶೂಟ್‌ಗೆ ಅನುಮತಿ ಪಡೆದಿಲ್ಲ. ಮುಖ್ಯವಾಗಿ 2017ರ ಅ.14ರಂದು ಹೈಕೋರ್ಟ್ ಸಹಾಯಕ ಪೊಲೀಸ್ ಆಯುಕ್ತರು ದಾಖಲಿಸಿದ ದೂರಿನ ಮೇಲೆ ಈವರೆಗೂ ವಿಧಾನಸೌಧ ಠಾಣಾ ಸಬ್ ಇನ್ಸ್‌ಪೆಕ್ಟರ್ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ, ಎಸಿಪಿಯ ದೂರಿನ ತನಿಖೆ ನಡೆಸಲು ಮತ್ತು ಹೈಕೋರ್ಟ್ ಭದ್ರತಾ ವ್ಯವಸ್ಥೆ ಉಲ್ಲಂಘಿಸಿದವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲು ವಿಧಾನಸೌಧ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.