ಕೂದಲು ರಫ್ತು ಕಂಪೆನಿ ಮೇಲೆ ಐಟಿ ದಾಳಿ: 65 ಕೋಟಿ ರೂ. ಅಘೋಷಿತ ಆಸ್ತಿ ಪತ್ತೆ
ಬೆಂಗಳೂರು, ಜ.2: ಮಾನವ ಕೂದಲು ರಫ್ತು ಮಾಡುತ್ತಿದ್ದ ಉತ್ತರ ಕರ್ನಾಟಕ ಕಂಪೆನಿ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲಿಸಿದಾಗ ಬರೋಬ್ಬರಿ 65 ಕೋಟಿ ರೂ. ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಕರ್ನಾಟಕ ಮತ್ತು ಗೋವಾ ವಲಯದ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
2017ರ ಡಿಸೆಂಬರ್ ತಿಂಗಳಿನಲ್ಲಿ ಉತ್ತರ ಕರ್ನಾಟಕದ ಪ್ರತಿಷ್ಠಿತ ಕೂದಲು ರಫ್ತು ಕಂಪೆನಿ ಮೇಲೆ ಐಟಿ(ಆದಾಯ ತೆರಿಗೆ) ದಾಳಿ ನಡೆಸಿದ್ದರು. ಈ ವೇಳೆ ಸಂಸ್ಥೆಯು 65 ಕೋಟಿ ರೂ. ಮೊತ್ತದ ಕೂದಲು ಮಾರಾಟ ವ್ಯವಹಾರದ ದಾಖಲೆಗಳನ್ನು ತೋರಿಸಲು ವಿಫಲರಾಗಿದ್ದು, 65 ಕೋಟಿ ರೂ. ಅಘೋಷಿತ ಆಸ್ತಿ ಹೊಂದಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ದಾಳಿ ವೇಳೆ 5 ಕೋಟಿ ರೂ. ವೌಲ್ಯದ ಚಿನ್ನಾಭರಣ ಮತ್ತು ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ದಾಳಿ ವೇಳೆ ಈ ಕಂಪೆನಿ ಜತೆ ಕೆಲ ದೇವಾಲಯಗಳು ಶಾಮೀಲಾಗಿರುವುದು ಪತ್ತೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿದೇಶಕ್ಕೆ ರಫ್ತು: ಈ ಕಂಪೆನಿ ಮುಖ್ಯವಾಗಿ ಮಹಿಳೆಯರ ಕೂದಲನ್ನು ಯುವತಿಯರ ವಸತಿ ಕೇಂದ್ರಗಳ ಮುಖಾಂತರ, ಕೆಲ ದೇವಾಲಯಗಳು, ಬ್ಯೂಟಿ ಪಾರ್ಲರ್‌ಗಳಿಗೆ ಹಣ ನೀಡಿ ಸಂಗ್ರಹ ಮಾಡಿ ದ.ಆಫ್ರಿಕಾ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತು ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಆಫ್ರಿಕಾದಲ್ಲಿ ಒಣ ಕೂದಲಿಗೆ ಹೆಚ್ಚಿನ ಬೇಡಿಕೆಗಳಿವೆ. ಅಲ್ಲದೆ, ಯುರೋಪ್ ಮತ್ತು ಆಫ್ರಿಕಾದಲ್ಲಿ ಕೂದಲಿನ ನೇಯ್ಗೆ ಮತ್ತು ವಿಗ್‌ಗಳ ವ್ಯವಹಾರಗಳಲ್ಲಿ ಉತ್ತಮ ಲಾಭವಿದೆ. 2015ರಲ್ಲಿ 6 ಬಿಲಿಯನ್ ಮೊತ್ತದ ವಹಿವಾಟು ನಡೆಸಿರುವುದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಗುಪ್ತಾಗೆ ಸೇರಿದ ಕಂಪೆನಿ: ಕಾಂಗ್ರೆಸ್ ಮುಖಂಡ ಎನ್ನಲಾದ ಶ್ರೀನಿವಾಸ ಗುಪ್ತಾ ಅವರ ಮನೆ ಮತ್ತು ಗುಪ್ತಾ ಹೇರ್ ಇಂಡಸ್ಟ್ರೀಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಕ್ರಮವಾಗಿ ಹೊಂದಿದ್ದ 2.5 ಕೋಟಿ ರೂ. ನಗದು, 2.5 ಕೋಟಿ ರೂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ನಾಲ್ಕೈದು ವರ್ಷಗಳಿಂದ ತೆರಿಗೆ ಕಟ್ಟದೆ ನಕಲಿ ದಾಖಲೆಗಳನ್ನು ತೋರಿಸಿ ತೆರಿಗೆ ವಂಚಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಒಟ್ಟಾರೆ 65 ಕೋಟಿ ರೂ. ಗಳಷ್ಟು ತೆರಿಗೆ ವಂಚಿಸಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ ಎಂದು ಐಟಿ ಮೂಲಗಳು ಹೇಳಿವೆ.