ಕ್ರಿಕೆಟ್: ಟೀಮ್ ಇಂಡಿಯಾದ ಆಫ್ರಿಕಾ ಪ್ರವಾಸ ಬಗ್ಗೆ ಸಚಿನ್ ಹೇಳಿದ್ದೇನು ಗೊತ್ತೇ?

Update: 2018-01-03 04:20 GMT

ಮುಂಬೈ, ಜ.3: ಭಾರತ ಕ್ರಿಕೆಟ್ ತಂಡದ ಯುವಪಡೆ ಈ ವರ್ಷದ ದೊಡ್ಡ ಸವಾಲು ಎದುರಿಸಲು ಸಜ್ಜಾಗಿದ್ದು, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಈ ಪ್ರವಾಸದ ಬಗ್ಗೆ ಟೀಮ್ ಇಂಡಿಯಾದ ಮೇಲೆ ನಿರೀಕ್ಷೆಯ ಬೆಟ್ಟವೇ ಇದ್ದು, ಇದು ಎಷ್ಟರಮಟ್ಟಿಗೆ ವಾಸ್ತವ ಎಂದು ತಿಳಿದುಕೊಳ್ಳಲು ಸಚಿನ್‌ಗಿಂತ ಸೂಕ್ತವಾದ ವ್ಯಕ್ತಿ ಸಿಗಲು ಸಾಧ್ಯವೇ? 'ಟೈಮ್ಸ್ ಆಫ್ ಇಂಡಿಯಾ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಾರತದ ನಿರೀಕ್ಷೆಗಳ ಬಗ್ಗೆ ಸಚಿನ್ ವಿಸ್ತೃತವಾಗಿ ಮಾತನಾಡಿದ್ದಾರೆ.

"ನಾವು ಮೊಟ್ಟಮೊದಲ ಆಫ್ರಿಕಾ ಪ್ರವಾಸ ಕೈಗೊಂಡಾಗ, ಮೊದಲ ಪಂದ್ಯದಲ್ಲೇ ಅವರ ಆಟದ ಮಟ್ಟ ಗಮನಕ್ಕೆ ಬಂತು. ಅಭ್ಯಾಸ ಪಂದ್ಯ ನಮ್ಮ ಕಣ್ಣು ತೆರೆಸಿತು. ಅವರ ಎರಡನೇ ಹಾಗೂ ಮೂರನೇ ತಂಡ ಕೂಡಾ ಅದ್ಭುತ ಪ್ರದರ್ಶನ ನೀಡಿತು. ಎಲ್ಲ ಹಂತದಲ್ಲೂ ಅವರು ಸ್ಪರ್ಧಾತ್ಮಕವಾಗಿದ್ದು, ಹಲವು ರೀತಿಯಿಂದ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ" ಎಂದು ಮೆಲುಕು ಹಾಕಿಕೊಂಡರು.

ಕಾಲಿಸ್ ಹಾಗೂ ಮೆಕ್‌ಮಿಲನ್ ಅಂಥ ಆಲ್‌ರೌಂಡರ್‌ಗಳ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಸೊರಗಿದೆಯೇ ಎಂಬ ಪ್ರಶ್ನೆಗೆ, "ಅದು ಉತ್ತಮ ತಂಡವಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಸ್ವದೇಶದಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಬಲ್ಲರು. ಆದರೆ ಅಂಥ ಅದ್ಭುತ ಆಲ್‌ರೌಂಡರ್‌ಗಳಿದ್ದಾಗ ಇದ್ದಷ್ಟು ನಿರಾಳವಾಗಿ ಇರುವಂತಿಲ್ಲ" ಎಂದು ಉತ್ತರಿಸಿದರು.

ಉತ್ತಮ ಆರಂಭವೇ ಎಲ್ಲಕ್ಕಿಂತ ಮುಖ್ಯವೇ ಎಂದು ಕೇಳಿದಾಗ, "ಮೊದಲ ಸ್ಪೆಲ್ ಅತ್ಯಂತ ಪ್ರಮುಖ. ಹೊಸ ಚೆಂಡನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ಮುಖ್ಯ. ಬಳಿಕ ಇನಿಂಗ್ಸ್ ಕಟ್ಟಬಹುದು. ರನ್ ಗಳಿಕೆ ಮುಖ್ಯ ಅಂಶ. ಮೊದಲ ದಿನ ಹೇಗೆ ಆಡುತ್ತೀರಿ ಎನ್ನುವುದರ ಮೇಲೆ ಪಂದ್ಯದ ಭವಿಷ್ಯ ನಿಂತಿದೆ" ಎಂದು ಹೇಳಿದರು.

ಪ್ರತಿ ಬಾರಿ ಭಾರತ ತಂಡ ವಿದೇಶಿ ಪ್ರವಾಸ ಕೈಗೊಳ್ಳುವಾಗ ಕೇಳಿಬರುವ ಕೂಗು ಭಾರತೀಯರು ವೇಗದ ಬೌಲಿಂಗ್‌ಗೆ ಹೆದರುತ್ತಾರೆ ಎನ್ನುವುದು. ಈ ಬಗ್ಗೆ ಏನನ್ನುತ್ತೀರಿ ಎಂದು ಪ್ರಶ್ನಿಸಿದಾಗ, "ನಾನು ಸೆಹ್ವಾಗ್, ಗಂಗೂಲಿ, ರಾಹುಲ್, ಲಕ್ಷ್ಮಣ್ ಜತೆ ಆಡಿದ್ದೇನೆ. ಎಂದೂ ಹಾಗೆನಿಸಲಿಲ್ಲ" ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News