×
Ad

ರಾಷ್ಟ್ರೀಯ-ರಾಜ್ಯ ಹೆದ್ದಾರಿ ಸಂಪರ್ಕ ಜಾಲ ನಿರ್ಮಾಣದಲ್ಲಿ ರಾಜ್ಯ ಪ್ರಥಮ: ಡಾ.ಎಚ್.ಸಿ.ಮಹದೇವಪ್ಪ

Update: 2018-01-03 21:00 IST

ಧಾರವಾಡ,ಜ.3: ರಾಜ್ಯ ವ್ಯಾಪ್ತಿಯಲ್ಲಿ ರಾಪ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸೇರಿದಂತೆ ಸುಮಾರು 31 ಸಾವಿರ ಕಿಲೋ ಮೀಟರ್ ಗುಣಮಟ್ಟದ ರಸ್ತೆ ನಿರ್ಮಿಸುವ ಮೂಲಕ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸಂಪರ್ಕ ಜಾಲ ಸೃಷ್ಟಿಸಿದ ಕರ್ನಾಟಕ ರಾಜ್ಯವು ದೇಶದಲ್ಲಿಯೆ ಪ್ರಥಮ ಸ್ಥಾನದಲ್ಲಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಬುಧವಾರ ಧಾರವಾಡದ ಹಳೆಯ ಡಿ.ಎಸ್.ಪಿ.ವೃತ್ತದಿಂದ ಮುರಘಾಮಠದ ವರೆಗಿನ 2.5 ಕಿ.ಮೀ ಉದ್ದದ ರಸ್ತೆಯ ಉನ್ನತೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರವು ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಮುಖ್ಯವಾದ ರಸ್ತೆ ಸುಧಾರಣೆ ಮತ್ತು ರಸ್ತೆಗಳ ಜಾಲ ವಿಸ್ತರಣೆಗೆ ಆದ್ಯತೆ ನೀಡಿದೆ. ಜಿಲ್ಲೆಯಿಂದ ಜಿಲ್ಲೆಗೆ, ತಾಲೂಕಿನಿಂದ ತಾಲೂಕಿಗೆ, ಹೋಬಳಿಯಿಂದ ಹೋಬಳಿಗೆ ಮತ್ತು ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಜೋಡಣೆಗೆ ಪ್ರಾಮುಖ್ಯತೆ ನೀಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ವಿಶ್ವಬ್ಯಾಂಕ್, ಏಷ್ಯಾ ಡೆವಲಪಮೆಂಟ್‌ನಂತಹ ಬಾಹ್ಯ ಮೂಲಗಳ ಆರ್ಥಿಕ ನೆರವಿನಿಂದ ರಾಜ್ಯದಲ್ಲಿ ಇಲ್ಲಿಯವರೆಗೆ ಕೆಶಿಫ್-1ರಲ್ಲಿ 2405 ಕೋಟಿ ರೂ.ವೆಚ್ಚದಲ್ಲಿ 2398 ಕಿ.ಮೀ, ಕೆಶಿಫ್-2ರಲ್ಲಿ 4027 ಕೋಟಿ ರೂ.ವೆಚ್ಚದಲ್ಲಿ 1808 ಕಿ.ಮೀ ಮತ್ತು ಕೆಶಿಫ್-3ರಲ್ಲಿ 2018 ಕೋಟಿ ರೂ.ವೆಚ್ಚದಲ್ಲಿ 418 ಕಿ.ಮೀ ರಸ್ತೆ ಉನ್ನತೀಕರಿಸ ಲಾಗಿದೆ ಎಂದು ಮಹದೇವಪ್ಪ ಹೇಳಿದರು.

ಧಾರವಾಡ ಜಿಲ್ಲೆಯ ವಿವಿಧ ರಸ್ತೆಗಳ ನಿರ್ಮಾಣ ಹಾಗೂ ಸುಧಾರಣೆಗಾಗಿ ನೂರಾರು ಕೋಟಿ ರೂ.ಅನುದಾನ ನೀಡಲಾಗಿದೆ. ಇಲಾಖೆಯಿಂದ ವಿವಿಧ ಶೀರ್ಷಿಕೆಯಡಿ 100 ಕೋಟಿ ರೂ.ಹಾಗೂ ಐದು ಕಾಮಗಾರಿಗಳಿಗಾಗಿ 97 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಧಾರವಾಡ ನಗರದ ಹೃದಯ ಭಾಗವಾಗಿರುವ ಜುಬ್ಲಿ ಸರ್ಕಲ್‌ದಲ್ಲಿ ಸುಗಮ ಸಂಚಾರಕ್ಕಾಗಿ ಫ್ಲೈ ಓವರ್ ನಿಮಾರ್ಣಕ್ಕಾಗಿ ಸುಮಾರು 600 ಕೋಟಿ ರೂ.ವೆಚ್ಚದ ಅಂದಾಜು ಪತ್ರಿಕೆ ತಯಾರಿಸಿ, ಕೇಂದ್ರ ಸರಕಾರಕ್ಕೆ ಅನುದಾನ ನೀಡಲು ಬೇಡಿಕೆ ಸಲ್ಲಿಸಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಅನುದಾನ ಬಂದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಹದೇವಪ್ಪ ಹೇಳಿದರು.
ಧಾರವಾಡ-ಸವದತ್ತಿ ರಸ್ತೆಯು ಬದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಆಲಮಟ್ಟಿ ಆಣೆಕಟ್ಟು, ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೋಗಲು ಅನುಕೂಲವಾಗುವಂತ ಪ್ರವಾಸೋದ್ಯಮ ಕಾರಿಡಾರ್ ಆಗಿದೆ ಎಂದು ಅವರು ತಿಳಿಸಿದರು.

ಕೆಶಿಫ್-3ರಲ್ಲಿ ಕಾಮಗಾರಿ ಕೈಗೊಂಡು ಉಳಿದಿರುವ 2.5 ಕಿ.ಮೀ ರಸ್ತೆಯು ನಗರ ಮಧ್ಯಭಾಗದಲ್ಲಿದ್ದು ಇದನ್ನು ಆಧುನಿಕ ಸೌಲಭ್ಯ ಹಾಗೂ ಇತರ ರಸ್ತೆಗಳಿಗೆ ಮಾದರಿಯಾಗಬಲ್ಲ ಟೆಂಡರ್ ಶ್ಯೂರ್ ರಸ್ತೆ ನಿರ್ಮಿಸಲಾಗುತ್ತಿದೆ. ಇದ್ದಕ್ಕೆ ಕೆಶಿಫ್-3ರಲ್ಲಿ 18.40 ಕೋಟಿ ರೂ.ಮತ್ತು ಹೆಚ್ಚುವರಿಯಾಗಿ 5 ಕೋಟಿ ರೂ.ನೀಡುವ ಮೂಲಕ ಒಟ್ಟು 23 ಕೋಟಿ ರೂ.ಗಳಲ್ಲಿ ಉತ್ತಮ ರಸ್ತೆ ನಿರ್ಮಿಸಲು ಇಂದು ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಧಾರವಾಡ-ಸವದತ್ತಿ ರಸ್ತೆ ಉನ್ನತೀಕರಣದ ಕನಸು ಈಗ ನನಸಾಗುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಮಗಳ ಪ್ರಮುಖ ರಸ್ತೆಗಳನ್ನು ಸುಧಾರಿಸಲಾಗಿದ್ದು ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ಸರಕಾರದಿಂದ ಸಾಕಷ್ಟು ಅನುದಾನ ಬಂದಿದೆ. ಅದರಂತೆ ಜಿಲ್ಲೆಯ ರಸ್ತೆಗಳ ಸುಧಾರಣೆ ಉನ್ನತೀಕರಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು.

ಶಾಸಕ ಅರವಿಂದ ಬೆಲ್ಲದ್, ಟೆಂಡರ್ ಶ್ಯೂರ್ ರಸ್ತೆಯ ಆರ್ಕಿಟೆಕ್ಚರ್ ಸ್ವಾತಿ ರಾಮನಾಥನ್, ಪಾಲಿಕೆ ಸದಸ್ಯರಾದ ದೀಪಕ್ ಚಿಂಚೊರೆ, ಬೀಬಿ ಫಾತೀಮಾ ಪಠಾಣ್, ರಾಜು ಅಂಬೊರೆ, ಯಾಸೀನ್ ಹಾವೇರಿಪೇಟ, ಅನಸೂಯಾ ಚೊಳಪ್ಪನವರ, ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಅಂಜುಮಾನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News