​ಆಧಾರ್ ಇಲ್ಲದೇ ಪಿಂಚಣಿ ಪಡೆಯುವ ವಿಶೇಷ ವ್ಯಕ್ತಿಗಳ ಬಗ್ಗೆ ಗೊತ್ತೇ?

Update: 2018-01-04 05:26 GMT

ಡೆಹ್ರಾಡೂನ್, ಜ.4: ಹೊಸ ವರ್ಷ ಉತ್ತರಾಖಂಡ ರಾಜ್ಯದ 53 ಸಾವಿರ ಪಿಂಚಣಿದಾರರ ಮುಖದಲ್ಲಿ ಸಂತಸ ಮೂಡಿಸಿದೆ. ಕಾರಣ ಏನು ಗೊತ್ತೇ? ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ತಡೆಹಿಡಿಯಲ್ಪಟ್ಟಿದ್ದ ಪಿಂಚಣಿಯನ್ನು ಇವರಿಗೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ತೀವ್ರ ಅಸ್ವಸ್ಥಗೊಂಡು, ವೃದ್ಧಾಪ್ಯದ ಕಾರಣದಿಂದ ಹಾಗೂ ಆಧಾರ್ ನೋಂದಣಿ ಕೇಂದ್ರಗಳಿಗೂ ತೆರಳಲು ಶಕ್ತರಲ್ಲದ 53 ಸಾವಿರ ಪಿಂಚಣಿದಾರರ ದಯನೀಯ ಸ್ಥಿತಿ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಯೋಗೇಂದ್ರ ಯಾದವ್ ಇದನ್ನು ಪ್ರಕಟಿಸಿದ್ದಾರೆ. "ಇದುವರೆಗೂ ಆಧಾರ್ ಕಾರ್ಡ್ ಮಾಡಿಸದ ಅರ್ಹ ಅಂಗವಿಲಕರು, ವಿಧವೆಯರು ಹಾಗೂ ವಯೋವೃದ್ಧರಿಗೆ ಪಿಂಚಣಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆದರೆ ಇವರು ಮಾರ್ಚ್ 31ರೊಳಗೆ ಕೇಂದ್ರದ ಸೂಚನೆಯಂತೆ ಆಧಾರ್ ವಿವರಗಳನ್ನು ಸಲ್ಲಿಸುತ್ತಾರೆ ಎಂಬ ನಿರೀಕ್ಷೆ ನಮ್ಮದು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಅಂಗವಿಕಲರ ಪಿಂಚಣಿ ಪಡೆಯುವ 59,081 ಮಂದಿಯ ಪೈಕಿ 5,424 ಮಂದಿಗೆ 2016ರ ಅಕ್ಟೋಬರ್‌ನಿಂದ ಒಂದು ಪೈಸೆಯೂ ದೊರಕಿಲ್ಲ. ವೃದ್ಧಾಪ್ಯ ಪಿಂಚಣಿ ಪಡೆಯುತ್ತಿರುವ 4.2 ಲಕ್ಷ ಫಲಾನುಭವಿಗಳ ಪೈಕಿ 36,060 ಮಂದಿಗೆ ಆಧಾರ್ ಇಲ್ಲ ಎಂಬ ಕಾರಣಕ್ಕೆ ಪಿಂಚಣಿ ತಡೆಹಿಡಿಯಲಾಗಿತ್ತು. ವಿಧವಾ ವೇತನಕ್ಕೆ ಅರ್ಹತೆ ಹೊಂದಿದ್ದ 1.5 ಲಕ್ಷ ಮಂದಿಯ ಪೈಕಿ 12,047 ಮಂದಿ ಇದೇ ಕಾರಣಕ್ಕೆ ಪಿಂಚಣಿಯಿಂದ ವಂಚಿತರಾಗಿದ್ದರು.

ಎಲ್ಲ ಕೇಂದ್ರ ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯಪಡಿಸಿದ ಬಳಿಕ ಕಳೆದ ಒಂದು ವರ್ಷದಿಂದ ಈ ಸೌಲಭ್ಯ ತಡೆಹಿಡಿಯಲ್ಪಟ್ಟಿತ್ತು. ಈ ಪ್ರಕರಣವನ್ನು ಟೈಮ್ಸ್ ಆಫ್ ಇಂಡಿಯಾ ಬೆಳಕಿಗೆ ತಂದ ಬಳಿಕ ಸಮಾಜ ಕಲ್ಯಾಣ ಸಚಿವ ಯಶ್ಪಾಲ್ ಆರ್ಯ ಇದನ್ನು ಬಗೆಹರಿಸುವ ಭರವಸೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News