×
Ad

ಜ.19ರಿಂದ ಸತ್ಯ ಮತ್ತು ನ್ಯಾಯ ನಗರ ಸಮ್ಮೇಳನ: ಡಾ.ಸಾದ್ ಬೆಳಗಾಮಿ

Update: 2018-01-04 19:30 IST

ಬೆಂಗಳೂರು, ಜ.4: ಪಕ್ಷಪಾತ ಮತ್ತು ಭೌತಿಕತೆಯಲ್ಲಿ ಮುಳುಗಿರುವ ಪೂರ್ವಾಗ್ರಹ ಪೀಡಿತ ಜಗತ್ತಿಗೆ ನಾವು ನೈಜ ದೇವ ನಿಷ್ಠೆ ಮತ್ತು ಇಸ್ಲಾಮಿನ ನ್ಯಾಯದ ವ್ಯವಸ್ಥೆಯನ್ನು ಪರಿಚಯಿಸುವುದು ಹಾಗೂ ಸತ್ಯ ಮತ್ತು ನ್ಯಾಯದ ಧ್ವಜವಾಹಕರಾಗುವುದು ಕಾಲದ ಬೇಡಿಕೆಯಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಬೆಂಗಳೂರು ಮೆಟ್ರೋ ಘಟಕದ ಅಧ್ಯಕ್ಷ ಡಾ.ಸಾದ್ ಬೆಳಗಾಮಿ ಹೇಳಿದರು.

ಗುರುವಾರ ನಗರದ ದಾರುಸ್ಸಲಾಮ್ ಕಟ್ಟಡದಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮಾಅತೆ ಇಸ್ಲಾಮಿ ಹಿಂದ್ ಬೆಂಗಳೂರು ನಗರವಾಸಿಗಳು ಮತ್ತು ಅದರ ವಿವಿಧ ವರ್ಗಗಳಿಗೆ ಈ ಸಂದೇಶವನ್ನು ತಲುಪಿಸಲು ಮೂರು ದಿನದ ಸಮ್ಮೇಳನವನ್ನು ಜ.19 ರಿಂದ 21ರವರೆಗೆ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ಮಿಥ್ಯ ಮತ್ತು ಪೈಶಾಚಿಕ ಶಕ್ತಿಗಳು ಜಗತ್ತಿನಾದ್ಯಂತ ಪ್ರಾಬಲ್ಯ ಸಾಧಿಸುತ್ತಿವೆ. ತಮ್ಮ ಉದ್ದೇಶ ಸಾಧನೆಗಾಗಿ ಅವು ದುರ್ಬಲ ದೇಶಗಳನ್ನು ಅದರಲ್ಲೂ ವಿಶೇಷವಾಗಿ ಇಸ್ಲಾಮಿ ಜಗತ್ತನ್ನು ವ್ಯಾಪಕವಾಗಿ ಕ್ಷೋಭೆ, ಅಶಾಂತಿ, ಆಂತರಿಕ ಕಲಹ ಮತ್ತು ಪರಸ್ಪರ ಯುದ್ಧಗಳಲ್ಲಿ ಸಿಲುಕಿಸಿವೆ ಎಂದು ಸಾದ್ ಬೆಳಗಾಮಿ ಹೇಳಿದರು.

ನಮ್ಮ ದೇಶದಲ್ಲಿಯೂ ಪರಿಸ್ಥಿತಿ ಹದಗೆಟ್ಟಿದೆ. ಜಾಗತಿಕ ಸಾಮ್ರಾಜ್ಯಶಾಹಿ ಮತ್ತು ಯಹೂದಿ ಶಕ್ತಿಗಳೊಂದಿಗೆ ಕೈ ಜೋಡಿಸಿಕೊಂಡು ಇಲ್ಲಿನ ಫ್ಯಾಶಿಸ್ಟ್ ಶಕ್ತಿಗಳು ಅಧಿಕಾರದ ಎಲ್ಲ ರಂಗಗಳಲ್ಲಿ ತಮ್ಮ ಹಿಡಿತವನ್ನು ಬಲಪಡಿಸಿಕೊಂಡು ದೇಶದ ಮೂಲ ಸ್ವರೂಪವನ್ನೆ ಬದಲಾಯಿಸಲು ಇಚ್ಛಿಸುತ್ತಿವೆ ಎಂದು ಅವರು ತಿಳಿಸಿದರು.

ವಂಚನೆ, ದೌರ್ಜನ್ಯಗಳ ಮೂಲಕ ಬಲವಂತವಾಗಿ ಜನರನ್ನು ಗುಲಾಮರನ್ನಾಗಿ ಮಾಡುತ್ತಿವೆ. ಕೋಮು ಸಾಮರಸ್ಯ ಮತ್ತು ಆಧ್ಯಾತ್ಮಿಕ ವೌಲ್ಯಗಳನ್ನು ನಾಶಪಡಿಸಿ ದ್ವೇಷ, ಪಕ್ಷಪಾತ ಮತ್ತು ಹಿಂಸೆಗಳ ಮೂಲಕ ಸಮಾಜವನ್ನು ಒಡೆಯಲಾಗುತ್ತಿದೆ. ಸಂವಿಧಾನ, ನ್ಯಾಯ ಮತ್ತು ನೈತಿಕತೆಗೆ ಮಸಿ ಬಳಿಯಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸಮ್ಮೇಳನದಲ್ಲಿ ಪ್ರಮುಖವಾಗಿ ಸಾರ್ವಜನಿಕ ಸಭೆ, ಮಹಿಳಾ ಸಮಾವೇಶ, ಯುವ ಸಂಸತ್ತು, ಇಸ್ಲಾಮಿ ವಸ್ತು ಪ್ರದರ್ಶನ, ಪುಸ್ತಕ ಮೇಳ, ಕನ್ನಡ, ತಮಿಳು, ತೆಲುಗು, ಮಾಲಯಾಳಂನಲ್ಲಿ ಸಂದೇಶ ಪ್ರಚಾರಾರ್ಥ ಸಭೆ, ಪ್ರೊಫೆಷನಲ್ಸ್, ವಕೀಲರು, ಉಲೆಮಾಗಳ ಸಭೆ, ವೈದ್ಯರು ಮತ್ತು ಶಿಕ್ಷಕರ ಸಭೆ, ಮಕ್ಕಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕಾರ್ಯಕ್ರಮಗಳು, ಆಟೊಚಾಲಕರ ಕಾರ್ಯಕ್ರಮ, ಸಾಹಿತ್ಯ ಸಮಾವೇಶ, ಫುಡ್‌ಕೋರ್ಟ್, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇನ್ನಿತರ ಚಟುವಟಿಕೆಗಳು ನಡೆಯಲಿವೆ ಎಂದು ಅವರು ವಿವರಣೆ ನೀಡಿದರು.

ಸಮ್ಮೇಳನದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ನ್ಯಾ.ನಾಗಮೋಹನ್ ದಾಸ್, ನಿಡುಮಾಮಿಡಿ ಮಠದ ಶ್ರೀ ವೀರಭದ್ರಚನ್ನಮಲ್ಲ ಸ್ವಾಮೀಜಿ, ಆಲ್ ಇಂಡಿಯಾ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಮಾಜಿ ಉಪಾಧ್ಯಕ್ಷ ವೌಲಾನ ಸಿರಾಜುಲ್ ಹಸನ್ ಸಾಬ್, ಅಮೀರೆ ಶರೀಅತ್ ವೌಲಾನ ಸಗೀರ್‌ಅಹ್ಮದ್ ರಶಾದಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಮೀರೆ ಜಮಾಅತ್ ಕರ್ನಾಟಕ ಅತ್ತರುಲ್ಲಾ ಶರೀಫ್, ಜಮಾಅತೆ ಇಸ್ಲಾಮಿ ಹಿಂದ್ ಸಂಚಾಲಕ ವೌಲಾನ ವಹೀದುದ್ದೀನ್ ಖಾನ್, ಡಾ.ನಸೀಮ್‌ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News