×
Ad

ಬೆಂಗಳೂರು: ಕನಿಷ್ಟ ಪಿಂಚಣಿ ನಿಗದಿ ಪಡಿಸುವಂತೆ ಒತ್ತಾಯ

Update: 2018-01-04 21:12 IST

ಬೆಂಗಳೂರು, ಜ. 4: ಕೇಂದ್ರ ಸರಕಾರ 147ರ ರಾಜ್ಯಸಭಾ ವರದಿ ಜಾರಿಗೊಳಿಸಿ, ಇಪಿಎಫ್ ಪಿಂಚಣಿದಾರರಿಗೆ ಕನಿಷ್ಟ 5 ಸಾವಿರ ರೂ. ನಿಗದಿಪಡಿಸಬೇಕೆಂದು ಭವಿಷ್ಯನಿಧಿ ವಂತಿಗೆದಾರರ ಮತ್ತು ಇಪಿಎಫ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

ಗುರುವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭವಿಷ್ಯನಿಧಿ ವಂತಿಗೆದಾರರ ಮತ್ತು ಇಪಿಎಫ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಅಶ್ವಥ್‌ನಾರಾಯಣ್ ಮಾತನಾಡಿ, ದೇಶದಲ್ಲಿ ಸುಮಾರು 15 ಕೋಟಿ ಭವಿಷ್ಯನಿಧಿ ವಂತಿಗೆದಾರರಿದ್ದಾರೆ. ವಂತಿಗೆದಾರರಿಂದ 2,25,000 ಕೋಟಿ ರೂ. ಹಣ ಭವಿಷ್ಯ ನಿಧಿಗೆ ವಂತಿಗೆ ರೂಪದಲ್ಲಿ ಜಮೆಯಾಗುತ್ತಿದೆ. ಇನ್ನು ದೇಶದಲ್ಲಿರುವ 47 ಲಕ್ಷ ಪಿಂಚಣಿದಾರರಿಗೆ 600 ರೂ. ನಿಂದ 2500 ರೂ.ವರೆಗೆ ಪಿಂಚಣಿ ನೀಡಲಾಗುತ್ತಿದೆ ಇದರಿಂದಾಗಿ ಪಿಂಚಣಿದಾರರು ಜೀವನ ನಡೆಸುವುದು ಕಷ್ಟ ಎಂದರು.

147ರ ರಾಜ್ಯಸಭಾ ವರದಿಯಲ್ಲಿ ಕೆಎಸ್‌ಆರ್‌ಟಿಸಿ ಸಂಸ್ಥೆಯ ನಿವೃತ್ತ ನೌಕರರಿಗೆ ಡಿಎ ಜತೆ ಕನಿಷ್ಟ 3 ಸಾವಿರ ರೂ. ಪಿಂಚಣಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಪಿಂಚಣಿ ಹೆಚ್ಚಳಕ್ಕೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹದ ಬಗ್ಗೆ ವರದಿಯಲ್ಲಿ ಸೂಚಿಸಲಾಗಿದೆ. ಭವಿಷ್ಯ ನಿಧಿಯ ಮುಖ್ಯ ಆಯುಕ್ತ ನೀಡಿರುವ ವರದಿ ಪ್ರಕಾರ ಭವಿಷ್ಯನಿಧಿಯ ‘ಅನ್ ಆಪರೇಟ್’ ಖಾತೆಯಲ್ಲಿ 50 ಸಾವಿರ ಕೋಟಿ ರೂ. ಇದೆ. ಈ ಹಣದಲ್ಲಿ ಕನಿಷ್ಟ ಪಿಂಚಣಿ 3ಸಾವಿರದ ಜತೆ ಡಿಎ ನೀಡಬಹುದಾಗಿದೆ ಎಂದು ಹೇಳಿದರು.

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮಧ್ಯಂತರ ಪರಿಹಾರವಾಗಿ 1ಸಾವಿರ ರೂ. ನೀಡಲು ಆದೇಶ ಹೊರಡಿಸಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರಕ್ಕೆ ನಿವೃತ್ತ ಕಾರ್ಮಿಕರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ 147ರ ರಾಜ್ಯಸಭಾ ವರದಿ ಜಾರಿಗೊಳಿಸಿ ಪಿಂಚಣಿದಾರರಿಗೆ 5 ಸಾವಿರ ರೂ. ಪಿಂಚಣಿ ನೀಡಬೇಕು ಇಲ್ಲವಾದಲ್ಲಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಜೈಶಂಕರ್ ರೆಡ್ಡಿ, ಉಪಾಧ್ಯಕ್ಷ ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಂದಾಲಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News