ಸರಕಾರಿ ಕಟ್ಟಡದಲ್ಲಿ ಖಾಸಗಿ ಕಾರ್ಯಕ್ರಮ ಆಯೋಜನೆ ನಿರ್ಬಂಧಿಸುವ ನಿಯಮಗಳಿದ್ದರೆ ತಿಳಿಸಿ: ಹೈಕೋರ್ಟ್ ಸೂಚನೆ
ಬೆಂಗಳೂರು, ಜ.4: ಸರಕಾರಿ ಕಟ್ಟಡಗಳಲ್ಲಿ ಖಾಸಗಿ ಕಾರ್ಯಕ್ರಮಗಳ ಆಯೋಜನೆ ನಿರ್ಬಂಧಿಸುವ ಕುರಿತು ಲೋಕೋಪಯೋಗಿ ಇಲಾಖೆ ರೂಪಿಸಿರುವ ಯಾವುದಾದರೂ ನಿಯಮವಿದ್ದರೆ ಅದನ್ನು ನ್ಯಾಯಾಲಯದ ಗಮನಕ್ಕೆ ತರುವಂತೆ ವಕೀಲ ಅಮೃತೇಶ್‌ಗೆ ಹೈಕೋರ್ಟ್ ಗುರುವಾರ ಸೂಚಿಸಿದೆ.
ಮಲ್ಲೇಶ್ವರದಲ್ಲಿರುವ ಸರಕಾರಿ ಬಾಲಕರ ಪಿಯು ಕಾಲೇಜು ಹಾಗೂ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಉನ್ನತಿ ಹೀಲಿಂಗ್ ಫೌಂಡೇಶನ್ ಟ್ರಸ್ಟ್ ಆಯೋಜಿಸಿರುವ ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಸರಕಾರದ ಕ್ರಮ ಪ್ರಶ್ನಿಸಿ ವಕೀಲ ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ, ಅರ್ಜಿದಾರರಿಗೆ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ವಕೀಲ ಅಮೃತೇಶ್ ವಾದಿಸಿ, ಮಲ್ಲೇಶ್ವರದ ಸರಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಜ.5ರಂದು ಉನ್ನತಿ ಹೀಲಿಂಗ್ ಫೌಂಡೇಶನ್ ಟ್ರಸ್ಟ್‌ನಿಂದ ‘ಹದಿಹರೆಯದವರ ಆರೋಗ್ಯಪೂರ್ಣ ಜೀವನಕ್ಕೆ ಸಮಗ್ರ ವಿಧಾನ’ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳೊಡನೆ ಸಮಾಲೋಚನೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಆದರೆ ಸರಕಾರಿ ಕಟ್ಟಡಗಳನ್ನು ಇಂಥಹ ಖಾಸಗಿ ಕಾರ್ಯಕ್ರಮಗಳಿಗೆ ಬಳಸಲು ಅವಕಾಶವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. ಇದೇ ಕಾರ್ಯಕ್ರಮವನ್ನು ಖಾಸಗಿ ಸಭಾಂಗಣಗಳಲ್ಲಿ ಆಯೋಜಿಸಿದರೆ ಲಕ್ಷಾಂತರ ರೂ ವೆಚ್ಚವಾಗಲಿದ್ದು, ಈ ವೆಚ್ಚ ತಗ್ಗಿಸಲು ಖಾಸಗಿ ಸಂಸ್ಥೆಯು ಸರಕಾರಿ ಕಟ್ಟಡಗಳನ್ನು ಉಚಿತವಾಗಿ ಪಡೆದುಕೊಂಡಿದೆ. ಹೀಗಾಗಿ ಕಾರ್ಯಕ್ರಮಕ್ಕೆ ನೀಡಿರುವ ಅನುಮತಿ ಹಿಂಪಡೆಯುವಂತೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸರಕಾರಿ ಬಾಲಕರ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ನ್ಯಾಯಪೀಠ, ಶುಕ್ರವಾರವೇ ಕಾರ್ಯಕ್ರಮ ನಡೆಯುತ್ತಿದ್ದು ಅಂತಿಮ ಕ್ಷಣದಲ್ಲಿ ಏಕೆ ಅರ್ಜಿ ಸಲ್ಲಿಸಿದ್ದೀರಿ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಬಳಿಕ ಸರಕಾರಿ ಕಟ್ಟಡಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಿರ್ಬಂಧಿಸುವ ಸಂಬಂಧ ಯಾವುದಾದರೂ ನಿಯಮಗಳಿದ್ದರೆ ಅದನ್ನು ನ್ಯಾಯಾಲಯಕ್ಕೆ ಒದಗಿಸುವಂತೆ ಸೂಚಿಸಿದ ನ್ಯಾಯಪೀಠ, ನಿಯಮಾವಳಿಗಳು ಲಭ್ಯವಿದ್ದರೆ ಅವುಗಳನ್ನು ಸಮರ್ಪಕವಾಗಿ ಪಾಲಿಸುವಂತೆ ಸರಕಾರಕ್ಕೆ ನಿರ್ದೇಶಿಸಲಾಗುವುದು. ಇಲ್ಲವಾದರೆ, ಈ ಸಂಬಂಧ ಸೂಕ್ತ ನಿಯಮ ರೂಪಿಸುವಂತೆ ನ್ಯಾಯಾಲಯವೇ ಆದೇಶ ಹೊರಡಿಸುತ್ತದೆ ಎಂದು ತಿಳಿಸಿ ಅರ್ಜಿ ವಿಚಾರಣೆಯನ್ನು ಜ.9ಕ್ಕೆ ಮುಂದೂಡಿತು.