×
Ad

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ: ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2018-01-05 21:21 IST

ಬೆಂಗಳೂರು, ಜ.5: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರದ್ದುಪಡಿಸಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೇಂದ್ರ ಗೃಹ ಇಲಾಖೆ ಸಲ್ಲಿಸಿರುವ ತಕರಾರು ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಶುಕ್ರವಾರ ಈ ಮೇಲ್ಮನವಿ ಸಂಬಂಧ ವಾದ ಪ್ರತಿವಾದ ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.

2016ರ ಅ.16ರಂದು ಬೆಳಗ್ಗೆ 9 ಗಂಟೆಗೆ ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿ ರುದ್ರೇಶ್ ಕೊಲೆ ನಡೆದಿತ್ತು. ನಗರದ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಸೀಮ್ ಷರೀಫ್, ಇರ್ಫಾನ್ ಪಾಷಾ, ವಸೀಂ ಅಹಮದ್, ಮಹಮ್ಮದ್ ಸಾದಿಕ್ ಮತ್ತು ಮಹಮ್ಮದ್ ಮುಜೀಬುಲ್ಲಾ ಅವರನ್ನು ಬಂಧಿಸಲಾಗಿತ್ತು. ಈ ನಡುವೆ ಕೇಂದ್ರ ಗೃಹ ಇಲಾಖೆಯು ಪ್ರಕರಣವನ್ನು ಎನ್‌ಐಎ ತನಿಖೆಗೆ ಆದೇಶಿಸಿತ್ತು. ಎನ್‌ಐಎ ತನಿಖೆ ರದ್ದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಏಕಸದಸ್ಯ ಪೀಠವು ಎನ್‌ಐಎ ತನಿಖೆ ರದ್ದುಪಡಿಸಿ, ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರೇ ತನಿಖೆ ಮುಂದುವರಿಸಲು ಸೂಚಿಸಿತ್ತು. ಇದರಿಂದ ಕೇಂದ್ರ ಗೃಹ ಇಲಾಖೆ ಮತ್ತು ಎನ್‌ಐಎ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು. 2017ರ ಎ.7ರಂದು ಎನ್‌ಐಎ ತನಿಖೆ ಮುಂದುವರಿಸಲಿ ಎಂದು ವಿಭಾಗೀಯ ಪೀಠವು ಮಧ್ಯಂತರ ಆದೇಶ ಮಾಡಿತ್ತು.

ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ. ಹಾಗೆಯೇ ಸೂಕ್ಷ್ಮ ಪ್ರಕರಣವೂ ಹೌದು. ಈ ಪ್ರಕರಣವನ್ನು ಎನ್‌ಐಎಯಿಂದಲೇ ತನಿಖೆ ನಡೆಸಬೇಕೆಂದು ಕೋರಿ ರಾಜ್ಯ ಪೊಲೀಸರೂ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದರಿಂದ ಪ್ರಕರಣವನ್ನು ಎನ್‌ಐಎಗೆ ತನಿಖೆಗೆ ಆದೇಶಿಸಲಾಗಿತ್ತು. ಆದರೂ ಏಕಸದಸ್ಯ ಪೀಠವು ನಮ್ಮ ಮನವಿಯನ್ನು ಮಾನ್ಯ ಮಾಡದೆ ಎನ್‌ಐಎ ದಾಖಲಿಸಿದ್ದ ಎಫ್‌ಐಆರ್ ರದ್ದು ಮಾಡಿದ್ದು ಸರಿಯಲ್ಲ. ಹೀಗಾಗಿ, ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸಲು ಆದೇಶಿಸಬೇಕು ಎಂದು ಮೇಲ್ಮನವಿಯಲ್ಲಿ ಕೋರಲಾಗಿತ್ತು. ಈ ವಾದವನ್ನು ಆಕ್ಷೇಪಿಸಿದ ಆರೋಪಿಗಳ ಪರ ವಕೀಲರು, ಏಕಸದಸ್ಯ ಪೀಠದ ಆದೇಶವು ಸೂಕ್ತವಾಗಿದ್ದು, ಕೇಂದ್ರ ಗೃಹ ಸಚಿವಾಲಯ ಮೇಲ್ಮನವಿ ವಜಾಗೊಳಿಸಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News