ಭಿನ್ನ ಕಲಾವಿದರ ಮಧ್ಯೆ ವಿಚಾರ ವಿನಿಮಯ ನಡೆಯಲಿ: ಚಂದ್ರಶೇಖರ ಕಂಬಾರ
ಬೆಂಗಳೂರು, ಜ.5: ಸೃಜನಶೀಲ ಪ್ರಕ್ರಿಯೆಯಲ್ಲಿ ತೊಡಗಿರುವ ವಿವಿಧ ಕ್ಷೇತ್ರಗಳ ಕಲಾವಿದರು ಆಗಾಗ ವಿಚಾರ ವಿನಿಮಯ ನಡೆಸುತ್ತಿದ್ದರೆ ಕಲಾಕ್ಷೇತ್ರವನ್ನು ಸದೃಢವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ಶನಿವಾರ ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಹಿರಿಯ ಕಲಾವಿದರಿಗೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿಗಳನ್ನು ಪ್ರಧಾನ ಮಾಡಿ ಮಾತನಾಡಿದ ಅವರು, ಈಗಿನ ವೇಗದ ಜೀವನದಲ್ಲಿ ಪರಸ್ಪರ ಮಾತನಾಡುವುದನ್ನೆ ಬಿಟ್ಟಿದ್ದೇವೆ. ಇಂತಹ ಪ್ರವೃತ್ತಿ ಬದಲಾಗಬೇಕು. ಚಿತ್ರಕಲಾವಿದರು, ಸಾಹಿತಿಗಳು ಸೇರಿದಂತೆ ಕಲಾಪ್ರಕಾರಗಳ ಕಲಾವಿದರು ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ತಿಳಿಸಿದರು.
ದೇಶದ ಸೃಜನಶೀಲ ಚಟುವಟಿಕೆಗಳಲ್ಲಿ ವಿದೇಶಿ ವ್ಯಾಮೋಹ ಹೆಚ್ಚಾಗುತ್ತಿದೆ. ಎಲ್ಲೆಡೆಯು ಕಾರ್ಪೊರೇಟ್ ಸಂಸ್ಕೃತಿ ಪ್ರಧಾನವಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ದೇಶಿಯ ಕಲೆಗಳ ಅಸ್ಮಿತೆಗಳು ನಮ್ಮೆದುರಿಗೇ ಸೊರಗಲಿವೆ. ಇದನ್ನು ತಪ್ಪಿಸಬೇಕಾದರೆ ಕಲಾವಿದರ ನಡುವೆ ಮುಕ್ತ ಚರ್ಚೆಯಾಗಿ, ಕಲಾಪ್ರಕಾರಗಳ ನಡುವೆ ಕೊಡುಕೊಳ್ಳುವಿಕೆ ಅಗತ್ಯವಿದೆ ಎಂದು ಅವರು ಆಶಿಸಿದರು.
ನಮ್ಮ ಜಾನಪದ ಕಲಾಪ್ರಕಾರಗಳು ಎಲ್ಲ ಕಲೆಗಳು ಮೂಲ ಬೇರಾಗಿದೆ. ಈ ಬೇರನ್ನು ಜೀವಂತವಾಗಿಡುವುದು ಇಂದಿನ ತುರ್ತು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಇಂದಿನ ಯುವಜನತೆಗೆ ಜಾನಪದ ಸೊಗಡಿನ ಕಲಾಪ್ರಕಾರಗಳ ಪರಿಚಯ ಮಾಡಿಕೊಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಬೆಂಗಳೂರು ಕೇಂದ್ರ ವಿವಿ ಉಪಕುಲಪತಿ ಪ್ರೊ.ಎಸ್.ಜಾಫೆಟ್ ಮಾತನಾಡಿ, ಕರ್ನಾಟಕ ಚಿತ್ರಕಲಾ ಪರಿಷತ್ ದೇಶದಲ್ಲಿಯೇ ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿದ್ದು, ಇದೀಗ ಡೀಮ್ಡ್ ವಿವಿ ಆಗಿ ಪರಿವರ್ತನೆಯಾಗಲು ಬಯಸಿದೆ. ಡೀಮ್ಡ್ ಆಗಿ ಪರಿವರ್ತನೆ ಆಗುವುದು ಬೇಡ ಎಂದೆನಿಸುತ್ತಿದೆ. ಕೇಂದ್ರ ವಿವಿಯಲ್ಲೇ ಉಳಿಯಲಿ. ಈ ಶಿಕ್ಷಣ ಸಂಸ್ಥೆಗೆ ಅಗತ್ಯವಾದ ನೆರವು ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಚಿತ್ರಕಲಾ ಪರಿಷತ್‌ನ ಪ್ರೊ.ಎಂ.ಎಸ್.ನಂಜುಂಡರಾವ್ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಕಲಾವಿದ ಪ್ರೊ.ಕನೈಕುನ್ಹಿರಾಮ್‌ಗೆ ಪ್ರದಾನ ಮಾಡಲಾಯಿತು. ಇದರ ಜೊತೆಗೆ ಕಲಾವಿದರಾದ ಸುಧಾಮನೋಹರ್, ಸೋಮಣ್ಣ ಚಿತ್ರಗಾರ್‌ಗೆ ಚಿತ್ರಕಲಾ ಸುಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್‌ನ ಉಪಾಧ್ಯಕ್ಷ ಹಾಗೂ ಚಿತ್ರಸಂತೆಯ ಅಧ್ಯಕ್ಷ ಟಿ.ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜಿ.ಕಮಲಾಕ್ಷಿ ಮತ್ತಿತರರಿದ್ದರು.